ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ತಮ್ಮ ಪಕ್ಷದಲ್ಲಿರುವ ಅತ್ಯಂತ ಹಿರಿಯ ಮುಖಂಡರಿಗೆ ಗೌರವ ಕೊಡುವುದನ್ನು ಕಲಿಯಲಿ – ಮಲ್ಲಿಕಾರ್ಜುನ ಖರ್ಗೆ

ಕಲಬುರ್ಗಿ, ಮೇ 2-ಪ್ರಧಾನಿ ನರೇಂದ್ರ ಮೋದಿ ಅವರು ಮೊದಲು ತಮ್ಮ ಪಕ್ಷದಲ್ಲಿರುವ ಅತ್ಯಂತ ಹಿರಿಯ ಮುಖಂಡರಾದ ಲಾಲ್‍ಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಷಿ ಅವರಿಗೆ ಗೌರವ ಕೊಡುವುದನ್ನು ಕಲಿಯಲಿ ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ.
ನಿನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉಡುಪಿಯಲ್ಲಿ ಮಾತನಾಡುವ ವೇಳೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಗೌರವ ಕೊಡುವುದನ್ನು ರಾಹುಲ್‍ಗಾಂಧಿ ಕಲಿತಿಲ್ಲ ಎಂದು ಲೇವಡಿ ಮಾಡಿದ್ದರು.
ಇದಕ್ಕೆ ಇಂದು ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಖರ್ಗೆ ಅವರು, ಮೋದಿ ಅವರಿಗೆ ಹಿರಿಯರ ಬಗ್ಗೆ ಎಲ್ಲಿಲ್ಲದ ಗೌರವವಿದೆ. ಹಾಗಾಗಿ ಅವರು ತಮಗಿಂತ ಹಿರಿಯರಾದ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಹೊರಟಿದ್ದಾರೆ.
ಜೆಡಿಎಸ್‍ನ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೂ ಗೌರವ ಕೊಟ್ಟಿದ್ದಾರೆ ಸಂತೋಷ. ಆದರೆ, ಬಿಜೆಪಿಯ ಹಿರಿಯರಾದ ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ಅವರಿಗೆ ಗೌರವ ಕೊಡುವುದನ್ನು ಮೋದಿ ಕಲಿತಿಲ್ಲ ಎಂದು ಲೇವಡಿ ಮಾಡಿದರು.
ಬಿಜೆಪಿಯವರಿಗೆ ಕರ್ನಾಟಕದ ಜನ ತಾವು ಹೇಳಿದಂತೆ ಕೇಳಬೇಕು ಎಂಬ ನಿರೀಕ್ಷೆ ಇದ್ದಂತೆ ಇದೆ. ಆದರೆ, ಅದು ಈಡೇರುವುದಿಲ್ಲ. ಯಾವುದೇ ಕಾರಣಕ್ಕೂ ರಾಜ್ಯದ ಜನ ಮೋದಿ, ಅಮಿತ್ ಶಾ ಮತ್ತು ಆರ್‍ಎಸ್‍ಎಸ್‍ನ ಗುಲಾಮರಾಗಲು ಸಿದ್ದರಿಲ್ಲ ಎಂದು ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಮೋದಿ ಅವರು ಕಾಂಗ್ರೆಸನ್ನು ದ್ವಂಸಗೊಳಿಸುತ್ತೇನೆ. ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇನೆ ಎಂದು ಪದೇ ಪದೇ ಹೇಳುತ್ತಿದ್ದಾರೆ. ಆದರೆ, ಅದು ಎಂದಿಗೂ ಸಾಧ್ಯವಿಲ್ಲ. ನಾವು ಬೀಜ. ಮಣ್ಣಿನಲ್ಲಿ ಹೂತಿಟ್ಟರೂ ಮೊಳಕೆ ಹೊಡೆಯುತ್ತೇವೆ. ನಮ್ಮನ್ನು ಆಳಕ್ಕೆ ಹಾಕಿ ತುಳಿದರೂ ಮತ್ತೆ ಮೇಲೇಳುತ್ತೇವೆ. ದೇಶದಲ್ಲಿರುವ ಎಲ್ಲಾ ಪಕ್ಷಗಳು ಒಟ್ಟಾದರೂ ಕಾಂಗ್ರೆಸ್ ಮುಳುಗಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಆರ್‍ಎಸ್‍ಎಸ್ ಮತ್ತು ಸಂವಿಧಾನ ಸಿದ್ಧಾಂತಗಳು ಪರಸ್ಪರ ತದ್ವಿರುದ್ದವಾಗಿವೆ. ಬಿಜೆಪಿಯವರು ಯಾವುದನ್ನು ಒಪ್ಪಿಕೊಳ್ಳುತ್ತಾರೆ ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು. ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗಡೆ ಒಂದು ಕಡೆ ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬಲಿಸಲು ಎಂದು ಹೇಳುತ್ತಾರೆ. ಇನ್ನೊಂದೆಡೆ ಆರ್‍ಎಸ್‍ಎಸ್ ಮತ್ತು ಬಿಜೆಪಿಯವರು ರಾಜಕೀಯಕ್ಕಾಗಿ ಅಂಬೇಡ್ಕರ್ ಅವರ ಹೆಸರನ್ನು ಜಪಾ ಮಾಡುತ್ತಿದ್ದಾರೆ. ಬಿಜೆಪಿಯವರು ಯಾವ ಸಿದ್ಧಾಂತವನ್ನು ಒಪ್ಪುತ್ತಾರೋ ಅಥವಾ ಸಂವಿಧಾನವನ್ನು ಪಾಲಿಸುತ್ತಾರೋ ಎಂದು ಸ್ಪಷ್ಟಪಡಿಸಬೇಕಿದೆ. ಪ್ರಧಾನಿ ಮೋದಿ ಅವರು ಮೌನ ಮುರಿದು ಸ್ಪಷ್ಟನೆ ನೀಡಬೇಕಿದೆ ಎಂದು ಖರ್ಗೆ ಆಗ್ರಹಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ