ಸಮಾಜವಾದಿ-ಬಹುಜನ ಸಮಾಜ ಪಕ್ಷಗಳ ಮೈತ್ರಿಕೂಟ ತಡೆಗಟ್ಟಲು ಮುಖ್ಯಮಂತ್ರಿ ಯೋಗಿ ಬ್ರಹ್ಮಾಸ್ತ್ರ:

ವಾರಣಾಸಿ, ಮೇ 2-ಉತ್ತರ ಪ್ರದೇಶದಲ್ಲಿ 2019ರ ಲೋಕಸಭೆ ಚುನಾವಣೆಯಲ್ಲಿ ಸಮಾಜವಾದಿ-ಬಹುಜನ ಸಮಾಜ ಪಕ್ಷಗಳ ಮೈತ್ರಿಕೂಟ ಅಧಿಕಾರಕ್ಕೆ ಬರುವುದನ್ನು ತಡೆಗಟ್ಟಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಬ್ರಹ್ಮಾಸ್ತ್ರ ಪ್ರಯೋಗಿಸಲು ಸಜ್ಜಾಗಿದ್ದಾರೆ.
ಮಂಡಲ್ ಆಯೋಗದಲ್ಲಿ ಶಿಫಾರಸು ಮಾಡಿರುವಂತೆ 82 ಹಿಂದುಳಿದ ವರ್ಗಗಳನ್ನು(ಒಬಿಸಿ) ಮೂರು ವಿಭಾಗಗಳಾಗಿ ವಿಂಗಡಿಸಿ ಎಲ್ಲ ಜಾತಿಗಳಿಗೂ ಶೇ.27ರಷ್ಟು ಮೀಸಲಾತಿ ನೀಡುವ ವಿನೂತನ ಯೋಜನೆ ಅನುಷ್ಠಾನಗೊಳಿಸಲು ಮುಂದಾಗಿದ್ದಾರೆ. ಆ ಮೂಲಕ ಹಿಂದುಳಿದ ಸಮುದಾಯಗಳನ್ನು ಓಲೈಸುವ ಜೊತೆಗೆ ಮಾಜಿ ಮುಖ್ಯಮಂತ್ರಿಗಳಾದ ಅಖಿಲೇಶ್ ಯಾದವ್ ಮತ್ತು ಮಾಯಾವತಿ ಪ್ರಾಬಲ್ಯಕ್ಕೆ ಕಡಿವಾಣ ಹಾಕುವ ಮಾಸ್ಟರ್ ಸ್ಟ್ರೋಕ್ ತಂತ್ರವನ್ನು ಯೋಗಿ ಅನುಸರಿಸಿದ್ದಾರೆ.
ರಾಜ್ಯದಲ್ಲಿರುವ 82 ಹಿಂದುಳಿದ ವರ್ಗಗಳನ್ನು ಪಿಚ್ಚಡಾ, ಆತಿ ಪಿಚ್ಚಡಾ ಮತ್ತು ಸರ್ವಾಧಿಕ್ ಪಿಚ್ಚಡಾ ಎಂಬ ಮೂರು ವರ್ಗಗಳಾಗಿ ವಿಂಗಡಿಸಲಾಗುವುದು. ಈ ಮೂರು ಗುಂಪುಗಳಿಗೂ ಶೇ.27ರಷ್ಟು ಮೀಸಲಾತಿ ಲಭಿಸಲಿದೆ. ಇದೊಂದು ರಾಜಕೀಯ ಬ್ರಹ್ಮಾಸ್ತ್ರ, 2019ರ ಲೋಕಸಭೆ ಚುನಾವಣೆಗೆ ಆರು ತಿಂಗಳ ಮೊದಲು ಇದನ್ನು ಅನುಷ್ಠಾನಗೊಳಿಸುವುದಾಗಿ ಯೋಗಿ ಸಂಪುಟದ ಹಿರಿಯ ಸಚಿವ ಒ.ಪಿ.ರಾಜ್‍ಭರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದು ಎಸ್‍ಪಿ-ಬಿಎಸ್ ಪಿ ಮೈತ್ರಿಕೂಟವನ್ನು ಧ್ವಂಸಗೊಳಿಸಲಿದೆ ಎಂದು ಸಚಿವರು ಹೇಳಿದ್ಧಾರೆ.
ಈ ಉದ್ದೇಶಿತ ಮೀಸಲಾತಿ ಜಾರಿಗೆ ಬಂದಿದ್ದೇ ಆದರೆ, ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷಕ್ಕೆ ಆಧಾರದ ಬೆಂಬಲವಾಗಿರುವ ಯಾದವರ ಪ್ರಾಬಲ್ಯಕ್ಕೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ