ಬೀಜಿಂಗ್, ಮೇ 2-ವುಹಾನ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ನಡುವೆ ಕಳೆದ ವಾರ ನಡೆದ ಶೃಂಗಸಭೆ ಫಲ ನೀಡಲು ಆರಂಭಿಸಿದೆ.
ಭಾರತ ಮತ್ತು ಚೀನಾ ಸೇನೆ ತಮ್ಮ ಕೇಂದ್ರ ಕಚೇರಿಗಳಲ್ಲಿ ಪರಸ್ಪರ ಹಾಟ್ಲೈನ್ ಸಂಪರ್ಕ ಕಲ್ಪಿಸಲು ಸಮ್ಮತಿಸಿ ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ. ಇದರೊಂದಿಗೆ ದೀರ್ಘ ಕಾಲದಿಂದ ನೆನೆಗುದಿಗೆ ಬಿದ್ದಿದ್ದ ಪ್ರಸ್ತಾವನೆಗೆ ಚಾಲನೆ ದೊರೆತಂತಾಗಿದೆ.
ಉಭಯ ದೇಶಗಳ ನಾಯಕರು ಔಪಚಾರಿಕ ಮಾತುಕತೆ ವೇಳೆ, ತಮ್ಮ ಮಿಲಿಟರಿ ಕೇಂದ್ರ ಕಚೇರಿಗಳ ನಡುವೆ ಹಾಟ್ಲೈನ್ ವ್ಯವಸ್ಥೆ ಸ್ಥಾಪಿಸಲು ಸಮ್ಮತಿ ಸೂಚಿಸಿದ್ದರು. ಅದರ ಫಲಶ್ರುತಿಯಾಗಿ ಈ ಯೋಜನೆ ಸಾಕಾರಗೊಳ್ಳುತ್ತಿದೆ ಎಂದು ಚೀನಾದ ಸರ್ಕಾರಿ ಒಡೆತನದ ಗ್ಲೋಬಲ್ ಟೈಮ್ಸ್ ಇಂದು ವರದಿ ಮಾಡಿದೆ.
ಪರಸ್ಪರ ವಿಶ್ವಾಸ ವೃದ್ದಿ ಮತ್ತು ಗಡಿಯಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಉಭಯ ದೇಶಗಳ ನಡುವೆ ಇದೊಂದು ಪೂರಕ ಕ್ರಮವಾಗಿದೆ.