ನವದೆಹಲಿ, ಮೇ 2-ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಕಸೌಲಿ ಪ್ರದೇಶದಲ್ಲಿ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಯಲ್ಲಿ ನಿರತರಾಗಿದ್ದ ಸರ್ಕಾರದ ಮಹಿಳಾ ಅಧಿಕಾರಿಯನ್ನು ಹೋಟೆಲ್ ಮಾಲೀಕನೊಬ್ಬ ಗುಂಡು ಹಾರಿಸಿ ಹತ್ಯೆ ಮಾಡಿದ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.
ಈ ಘಟನೆಯನ್ನು ಇಂದು ಸ್ವಯಂ ಪ್ರೇರಿತ ಪ್ರಜ್ಞಾಪೂರ್ವಕವಾಗಿ ಉಲ್ಲೇಖಿಸಿದ ನ್ಯಾಯಮೂರ್ತಿಗಳಾದ ಮದನ್ ಬಿ.ಲೋಕುರ್ ಮತ್ತು ದೀಪಕ್ ಗುಪ್ತಾ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ಪೀಠ, ಈ ಕೃತ್ಯ ಅತ್ಯಂತ ಗಂಭೀರವಾದುದು ಎಂದು ಆತಂಕ ವ್ಯಕ್ತಪಡಿಸಿತು.
ಅಕ್ರಮ ಕಟ್ಟಡಗಳಿಗೆ ಬೀಗಮುದ್ರೆ ಹಾಕಬೇಕೆಂಬ ಸುಪ್ರೀಂಕೋರ್ಟ್ ಆದೇಶ ಪಾಲಿಸಲು ಸರ್ಕಾರಿ ಅಧಿಕಾರಿಗಳು ಅಲ್ಲಿಗೆ ಹೋಗಿದ್ದರು. ಕರ್ತವ್ಯ ನಿರತ ಜನರನ್ನು ಈ ರೀತಿ ಹತ್ಯೆ ಮಾಡಿದರೆ ನಾವು ಯಾವುದೇ ಆದೇಶ-ತೀರ್ಪು ನೀಡುವುದನ್ನು ನಿಲ್ಲಿಸಬೇಕಾಗಬಹುದು ಎಂದು ಪೀಠ ಹೇಳಿದೆ. ಸೂಕ್ತ ಪೀಠದ ಮುಂದೆ ಈ ಪ್ರಕರಣವನ್ನು ವಿಚಾರಣೆಗೆ ಒಳಪಡಿಸುವ ಬಗ್ಗೆ ನಾಳೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಪೀಠ ತಿಳಿಸಿದೆ.