ಹಿರಿಯ ಪತ್ರಕರ್ತ ಜ್ಯೋತಿರ್ಮಯ್ ಡೇ (ಜೆ ಡೇ) ಹತ್ಯೆ ಪ್ರಕರಣ: ಭೂಗತ ಪಾತಕಿ ಛೋಟಾ ರಾಜನ್‍ ದೋಷಿ

ಮುಂಬೈ, ಮೇ 2-ಮಾಧ್ಯಮ ವಲಯವನ್ನು ಬೆಚ್ಚಿ ಬೀಳಿಸಿದ ಹಿರಿಯ ಪತ್ರಕರ್ತ ಜ್ಯೋತಿರ್ಮಯ್ ಡೇ (ಜೆ ಡೇ) ಹತ್ಯೆ ಪ್ರಕರಣದಲ್ಲಿ ಕುಖ್ಯಾತ ಭೂಗತ ಪಾತಕಿ ಛೋಟಾ ರಾಜನ್‍ನನ್ನು ಮುಂಬೈ ವಿಶೇಷ ನ್ಯಾಯಾಲಯ ಇಂದು ದೋಷಿ ಎಂದು ಘೋಷಿಸಿದೆ. ಹತ್ಯೆ ನಡೆದು ಏಳು ವರ್ಷಗಳ ಬಳಿಕ ಈ ಪ್ರಕರಣದಲ್ಲಿ ರಾಜನ್‍ನನ್ನು ಶಿಕ್ಷೆಗೆ ಗುರಿಪಡಿಸಲಾಗಿದೆ.
ಇದೇ ಪ್ರಕರಣದಲ್ಲಿ ಆರೋಪಿಯಾಗಿದ್ದ ಪತ್ರಕರ್ತೆ ಜಿಗ್ನಾ ವೋರಾ ಹಾಗೂ ಮತ್ತೊಬ್ಬ ಅಪಾದಿತ ಪಾಲ್‍ಸನ್ ಜೋಸೆಫ್‍ರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ಮಿಡ್ ಡೇ ಪತ್ರಿಕೆಯ ಅಪರಾಧ ಮತ್ತು ತನಿಖಾ ವರದಿಗಳ ಸಂಪಾದಕರಾಗಿದ್ದ ಜೆ ಡೇ ಅವರನ್ನು ಜೂನ್ 11, 2011ರಂದು ಮುಂಬೈನ ಪೆÇೀವೈನಲ್ಲಿ ಎರಡು ಮೋಟಾರ್ ಸೈಕಲ್‍ಗಳಲ್ಲಿ ಬೆನ್ನಟ್ಟಿದ ನಾಲ್ವರು ಶಾರ್ಪ್ ಶೂಟರ್‍ಗಳು ಗುಂಡು ಹಾರಿಸಿ ಕೊಂದಿದ್ದರು.
ಅದೇ ವರ್ಷ ಜೂನ್ 27ರಂದು ಕ್ರೈಂ ಬ್ರಾಂಚ್ ಪೆÇಲೀಸರು ಶಾರ್ಪ್ ಶೂಟರ್ ಸತೀಶ್ ಕಾಲಿಯಾ ಸೇರಿದಂತೆ ಏಳು ಜನರನ್ನು ಬಂಧಿಸಿದ್ದರು. ಡೇ ಅವರನ್ನು ಕೊಲ್ಲಲು ಛೋಟಾ ರಾಜನ್‍ಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಮತ್ತೊಬ್ಬ ಹಿರಿಯ ಪತ್ರಕರ್ತೆ ಜಿಗ್ನಾ ವೋರಾ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು. ನಂತರ ಈ ಪ್ರಕರಣ ಸಿಬಿಐಗೆ ವರ್ಗಾವಣೆಯಾಗಿತ್ತು.
ಏಪ್ರಿಲ್ 3, 2018ರಂದು ಈ ಪ್ರಕರಣದ ವಿಚಾರಣೆ, ವಾದ-ಪ್ರತಿವಾದಗಳನ್ನು ಪೂರ್ಣಗೊಳಿಸಿದ ಮುಂಬೈನ ವಿಶೇಷ (ಎಂಸಿಒಸಿಎ) ನ್ಯಾಯಾಲಯ ಮೇ 2ರಂದು ತೀರ್ಪು ನೀಡುವುದಾಗಿ ಘೋಷಿಸಿತ್ತು.
ಕುಪ್ರಸಿದ್ಧ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಬಲಗೈ ಬಂಟ ಛೋಟಾ ರಾಜನ್ ಇವರ ಅಪರಾಧ ಕೃತ್ಯಗಳ ಬಗ್ಗೆ ಡೇ ತನಿಖಾ ವರದಿಗಳನ್ನು ಬರೆದು ಪ್ರಕಟಿಸಿದ್ದರು. ಇವರನ್ನು ಕೊಲ್ಲುವುದಾಗಿ ದಾವೂದ್ ಮತ್ತು ರಾಜನ್ ಬೆದರಿಕೆ ಹಾಕಿದ್ದರು.
ಜ್ಯೋತೀಂದ್ರ ಡೇ, ಕಮ್ಯಾಂಡರ್ ಜೆ ಮತ್ತು ಜೆ ಡೇ ಎಂದೇ ಮುಂಬೈ ಮಾಧ್ಯಮ ವಲಯದಲ್ಲಿ ಚಿರಪರಿಚಿತರಾಗಿದ್ದ ಇವರು ಭೂಗತಲೋಕದ ಭಯಾನಕ ಚಟುವಟಿಕೆಗಳ ಕುರಿತು ಜೀರೋ ಡೀಲ್ : ದಿ ಡೇಂಜರಸ್ ವಲ್ರ್ಡ್ ಆಫ್ ಇನ್‍ಫಾರ್ಮರ್ಸ್ ಅಂಡ್ ಖಲ್ಲಾಸ್ ಪುಸ್ತಕ ಹಾಗೂ ಅನೇಕ ತನಿಖಾ ವರದಿಗಳನ್ನು ಪ್ರಕಟಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ