ಬೆಂಗಳೂರು, ಏ.30- ಇಡೀ ದೇಶವೇ ಕುತೂಹಲದಿಂದ ನೋಡುತ್ತಿರುವ ಕರ್ನಾಟಕದ ಚುನಾವಣಾ ಫಲಿತಾಂಶ ಮೇ 15ರಂದು ಪ್ರಕಟವಾಗಲಿದೆ. ಎಸ್ಎಸ್ಎಲ್ಸಿ ಮಕ್ಕಳ ಫಲಿತಾಂಶ ಮೇ 7ಕ್ಕೆ ಪ್ರಕಟವಾಗಲಿದೆ. ಸಿಇಟಿ ಫಲಿತಾಂಶವೂ ಕೂಡ ಇದೇ ತಿಂಗಳು ಪ್ರಕಟವಾಗಲಿದೆ. ಒಟ್ಟಾರೆ ಮೇ ಟೆನ್ಷನ್ ತಿಂಗಳಾಗಿ ಪರಿವರ್ತನೆಯಾಗಿದೆ.
ರಾಜ್ಯದಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರತೊಡಗಿದೆ. ರಾಜಕಾರಣಿಗಳ ಪ್ರಚಾರದ ಅಬ್ಬರ ಜೋರಾಗಿದೆ. ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಪಕ್ಷಗಳ ಗೆಲುವಿಗಾಗಿ ಅಬ್ಬರಿಸಿ ಬೊಬ್ಬಿರಿಯತೊಡಗಿದ್ದಾರೆ. ಮೇ 12ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಗೆಲುವಿಗಾಗಿ ವಿವಿಧ ಕಸರತ್ತು ಮಾಡುತ್ತಿದ್ದಾರೆ. ಸುಡುವ ಬಿಸಿಲಿನಲ್ಲಿ ಬೆವರಿಳಿಸುತ್ತಿದ್ದಾರೆ.
ನಾಳೆಯಿಂದ ರಾಜ್ಯದಲ್ಲಿ ಪ್ರಧಾನಿ ಮೋದಿ ಅವರ ಅಬ್ಬರ ಶುರುವಾಗಲಿದೆ. ಸುಮಾರು 20ಕ್ಕೂ ಹೆಚ್ಚು ರ್ಯಾಲಿಗಳನ್ನು ಹಮ್ಮಿಕೊಂಡಿದ್ದು, ರೋಡ್ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಾಂಗ್ರೆಸ್ನವರು ರಾಹುಲ್ಗಾಂಧಿಯವರ ಕಾರ್ಯಕ್ರಮಗಳ ಮೂಲಕ ಮತದಾರರ ಮನವೊಲಿಕೆ ಪ್ರಯತ್ನ ಮುಂದುವರಿಸಿದ್ದಾರೆ.
ಜನಾಶೀರ್ವಾದ ಯಾತ್ರೆಗಳು, ಬೃಹತ್ ಸಮಾವೇಶಗಳನ್ನು ನಡೆಸುತ್ತಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಾಲಿಗೆ ಚಕ್ರ ಕಟ್ಟಿಕೊಂಡು ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ.
ಎಲ್ಲಾ 224 ಕ್ಷೇತ್ರಗಳಲ್ಲಿ ಬಿಡುವಿಲ್ಲದ ಕಾರ್ಯಕ್ರಮಗಳನ್ನು ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಪಕ್ಷೇತರರು ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ನಡೆಸುತ್ತಿದ್ದರೆ, ಇತ್ತ ಪೆÇೀಷಕರು ತಮ್ಮ ಮಕ್ಕಳ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.
ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಈಗ ಸಿಇಟಿ ಫಲಿತಾಂಶದತ್ತ ತಮ್ಮ ಚಿತ್ತ ಹರಿಸಿದ್ದಾರೆ. ಅಲ್ಲದೆ, ನೀಟ್ ಪರೀಕ್ಷೆಗೆ ತಮ್ಮ ಮಕ್ಕಳನ್ನು ಸಜ್ಜುಗೊಳಿಸುತ್ತಿದ್ದಾರೆ. ಜೂನ್ನಲ್ಲಿ ನೀಟ್ ಪರೀಕ್ಷೆ ನಡೆಯಲಿದ್ದು, ಅದಕ್ಕಾಗಿ ಮಕ್ಕಳ ಟ್ಯೂಷನ್ ಕೊಡಿಸುವಲ್ಲಿ ಬ್ಯುಜಿಯಾಗಿದ್ದಾರೆ. ಅಲ್ಲದೆ, ಇಂದು ಪಿಯುಸಿ ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ ಮಕ್ಕಳ ಮುಂದಿನ ಶಿಕ್ಷಣದತ್ತ ಗಮನ ಹರಿಸುತ್ತಿದ್ದಾರೆ. ಇನ್ನು ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿರುವ ಮಕ್ಕಳ ಪೆÇೀಷಕರು ಮೇ 7ರಂದು ಪ್ರಕಟವಾಗಲಿರುವ ಫಲಿತಾಂಶಕ್ಕಾಗಿ ಕಾಯತೊಡಗಿದ್ದಾರೆ. ಅಲ್ಲದೆ, ಸಿಇಟಿ ಪರೀಕ್ಷೆ ಬರೆದಿರುವವರು ಎಂಜಿನಿಯರಿಂಗ್ ಹಾಗೂ ಇನ್ನಿತರ ಕೋರ್ಸ್ಗಳ ಶಿಕ್ಷಣಕ್ಕಾಗಿ, ಸಿಇಟಿ ಫಲಿತಾಂಶಕ್ಕಾಗಿ ಕಾಯುತ್ತಿದ್ದರೆ, ರಾಜಕಾರಣಿಗಳು ಚುನಾವಣೆ ಹಾಗೂ ಮೇ 15ರ ಫಲಿತಾಂಶಕ್ಕೆ ಎದುರು ನೋಡುತ್ತಿದ್ದಾರೆ.
ಮೇ 15ರೊಳಗೆ ಎಸ್ಎಸ್ಎಲ್ಸಿ, ಸಿಇಟಿ, ವಿಧಾನಸಭೆ ಚುನಾವಣೆ, ಮೂರೂ ಫಲಿತಾಂಶಗಳು ಹೊರಬೀಳಲಿದ್ದು, ಒಟ್ಟಾರೆ ಮೇ ಫಲಿತಾಂಶದ ಟೆನ್ಷನ್ ಮಾಸವಾಗಿದೆ.