ಗುತ್ತಿಗೆ ಪೌರ ಕಾರ್ಮಿಕರಿಗೆ ನೇರ ವೇತನ ಪಾವತಿ ಭರವಸೆ ನೀಡಿದ್ದ ಸಿಎಂ ಮಾತಿಗೆ ತಪ್ಪಿದ್ದಾರೆ: ಪಾಲಿಕೆ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ವಾಗ್ದಾಳಿ

ಬೆಂಗಳೂರು, ಏ.30- ಗುತ್ತಿಗೆ ಪೌರ ಕಾರ್ಮಿಕರಿಗೆ ಬಿಬಿಎಂಪಿಯಿಂದ ನೇರ ವೇತನ ಪಾವತಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಆದರೆ, ಅವರು ಮಾತಿಗೆ ತಪ್ಪಿದ್ದಾರೆ. ಈ ಮೂಲಕ ಕಾಂಗ್ರೆಸ್ ಸರ್ಕಾರ ಪೌರ ಕಾರ್ಮಿಕರ ಜೀವನದ ಜತೆ ಚೆಲ್ಲಾಟವಾಡುತ್ತಿದೆ ಎಂದು ಪಾಲಿಕೆ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಚರಕನಹಳ್ಳಿ ವಾರ್ಡ್‍ನಲ್ಲಿ 119 ಪೌರ ಕಾರ್ಮಿಕರಲ್ಲಿ 61 ಪೌರ ಕಾರ್ಮಿಕರಿಗೆ ಮಾತ್ರ ವೇತನ ನೀಡಲಾಗಿದೆ. ಉಳಿದ 58 ಮಂದಿಗೆ ಈವರೆಗೆ ವೇತನ ನೀಡಿಲ್ಲ. ವೇತನ ವಂಚಿತ ಈ 58 ಮಂದಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರೂ ವೇತನವಿಲ್ಲದ ಕಾರಣ ಸ್ವಚ್ಛತಾ ಕಾರ್ಯಕ್ಕೆ ತೊಂದರೆಯಾಗಿದೆ.
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ 848 ಪೌರ ಕಾರ್ಮಿಕರಿದ್ದಾರೆ. ಇದರಲ್ಲಿ 595 ಮಂದಿಗೆ ಮಾತ್ರ ವೇತನ ಸಿಗುತ್ತದೆ. ಉಳಿದವರಿಗೆ ವೇತನ ಕೊಡುತ್ತಿಲ್ಲ. ಇದೊಂದೇ ಕ್ಷೇತ್ರದಲ್ಲಿ ಇಷ್ಟು ಮಂದಿ ಪೌರ ಕಾರ್ಮಿಕರು ವೇತನ ವಂಚಿತರಾಗಿದ್ದರೆ, ಉಳಿದ ವಿಧಾನಸಭಾ ಕ್ಷೇತ್ರಗಳ ಪೌರ ಕಾರ್ಮಿಕರ ಪಾಡು ಹೇಗಿರಬೇಡ.

ಈ ಹಿಂದಿನ ಕೌನ್ಸಿಲ್ ಸಭೆಯಲ್ಲಿ 700 ಜನರಿಗೆ ಒಬ್ಬ ಪೌರ ಕಾರ್ಮಿಕರಿಗೆ ಮಾತ್ರವಲ್ಲ, ಎಲ್ಲ ಪೌರ ಕಾರ್ಮಿಕರಿಗೂ ವೇತನ ಕೊಡುವುದಾಗಿ ಹೇಳಲಾಗಿತ್ತು. ಈಗ ಮಾತಿಗೆ ತಪ್ಪಲಾಗಿದೆ. ಒಂದು ವರ್ಷದಿಂದ ಕಾರ್ಯನಿರ್ವಹಿಸಿದ ಪೌರ ಕಾರ್ಮಿಕರನ್ನು ವೇತನ ನೀಡದೆ ಕೆಲಸದಿಂದ ತೆಗೆದುಹಾಕಿದರೆ ಅವರು ಏನು ಮಾಡಬೇಕು, ಅವರಿಗೆ ಪರ್ಯಾಯ ವ್ಯವಸ್ಥೆ ಏನು ಮಾಡುತ್ತೀರ ಎಂದು ಖಾರವಾಗಿ ಪದ್ಮನಾಭರೆಡ್ಡಿ ಪ್ರಶ್ನಿಸಿದರು.

ಪೌರ ಕಾರ್ಮಿಕರಿಗೆ ಪ್ರತಿ ತಿಂಗಳು 15ರೊಳಗೆ ಇಎಸ್‍ಐ, ಪಿಎಫ್ ಕಟ್ಟಬೇಕು. ಕಟ್ಟದಿದ್ದರೆ ಶೇ.12ರಷ್ಟು ಬಡ್ಡಿ ಹಾಕುತ್ತಾರೆ. ಮೂರು ತಿಂಗಳು ಕಟ್ಟದಿದ್ದರೆ ಡ್ಯಾಮೇಜ್ ಸರ್ವೀಸ್ ಎಂದು ಶೇ.5ರಷ್ಟು ಹೆಚ್ಚಿಸುತ್ತಾರೆ. 6 ತಿಂಗಳ ತನಕ ಕಟ್ಟದೆ ಹೋದರೆ ಶೇ.15ರಷ್ಟು, ಅದಕ್ಕೂ ಹೆಚ್ಚು ತಿಂಗಳುಗಳಾದರೆ ಶೇ.37ರಷ್ಟು ಡ್ಯಾಮೇಜ್ ಸರ್ವೀಸ್ ಕಟ್ಟಬೇಕಾಗುತ್ತದೆ.

ಬಿಬಿಎಂಪಿಯವರು ಈವರೆಗೆ ಇಎಸ್‍ಐ, ಪಿಎಫ್ ಕಟ್ಟೇ ಇಲ್ಲ. ಒಬ್ಬ ಪೌರ ಕಾರ್ಮಿಕನಿಗೆ 962ರೂ. ಇಎಸ್‍ಐ, 3725 ಇಪಿಎಫ್ ಸೇರಿ 4687ರೂ. ಕಟ್ಟಬೇಕಾಗುತ್ತದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 17,669 ಮಂದಿ ಪೌರ ಕಾರ್ಮಿಕರಿದ್ದಾರೆ. ಒಟ್ಟಾರೆ 8,82,14,603ರೂ. ಹಣ ಕಟ್ಟಬೇಕು. ಅದರಲ್ಲಿ 1,82,19,212ರೂ. ದಂಡ ಕಟ್ಟುತ್ತಿದ್ದಾರೆ. ಈ ಹಣ ಸಾರ್ವಜನಿಕರ ತೆರಿಗೆ. ಹೀಗೆ ಜನರ ತೆರಿಗೆ ಹಣದಲ್ಲಿ ಕಾಂಗ್ರೆಸ್ ಸರ್ಕಾರ ಚಲ್ಲಾಟವಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಪೌರ ಕಾರ್ಮಿಕರ ವೇತನ 30 ಕೋಟಿ ಆಗುತ್ತದೆ. ಕಸ ಸಾಗಿಸಲು ಬಳಸುವ ಕಾಂಪ್ಯಾಕ್ಟರ್, ಆಟೋಗಳಿಗೆ 50 ಕೋಟಿ ವೆಚ್ಚ ಮಾಡುತ್ತಾರೆ. ಹೀಗೆ ಪೌರ ಕಾರ್ಮಿಕರ ವೇತನದಲ್ಲಿ ಸರ್ಕಾರ ಬೇಜವಾಬ್ದಾರಿಯಾಗಿ ನಡೆದುಕೊಳ್ಳುತ್ತಿದೆ. ಅವರ ಜೀವನದ ಜತೆ ಚಲ್ಲಾಟವಾಡುತ್ತಿದೆ ಎಂದು ಅವರು ಕಿಡಿಕಾರಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ