ರಾಜಕಾರಣಿಗಳಿಗೊಂದು ಕಾಲ-ಮತದಾರರಿಗೊಂದು ಕಾಲ; ಮತದಾರರ ಮನೆಬಾಗಿಲಿಗೆ ಎಡತಾಕುತ್ತ ಕೈ-ಕಾಲಿಗೆ ಬೀಳುತ್ತಿರುವ ಅಭ್ಯರ್ಥಿಗಳು

 

ಬೆಂಗಳೂರು, ಏ.30- ಅತ್ತೆಗೊಂದು ಕಾಲ-ಸೊಸೆಗೊಂದು ಕಾಲ ಎನ್ನುವಂತೆ ರಾಜಕಾರಣಿಗಳಿಗೊಂದು ಕಾಲ-ಮತದಾರರಿಗೊಂದು ಕಾಲ ಎನ್ನುವ ಹಾಗೆ ಆಗಿದೆ. ಮತ ಯಾಚನೆ ಮಾಡಲು ಅಭ್ಯರ್ಥಿಗಳು ಬಿಸಿಲಿನಲ್ಲಿ ಬೆವರಿಳಿಸುತ್ತ ಮತದಾರರ ಮನೆಬಾಗಿಲಿಗೆ ಎಡತಾಕುತ್ತ ಕೈ-ಕಾಲಿಗೆ ಬೀಳುತ್ತಿದ್ದಾರೆ.

ಯಾವುದೇ ಒಂದು ಸಂದರ್ಭದಲ್ಲಿ ಬರುವ ರಾಜಕಾರಣಿಗಳನ್ನು ಮತದಾರರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಕುಡಿಯಲು ನೀರಿಲ್ಲ, ಶೌಚಾಲಯಗಳಿಲ್ಲ, ವಿದ್ಯುತ್ ದೀಪಗಳಿಲ್ಲ, ಯಾವ ಪುರುಷಾರ್ಥಕ್ಕೆ ನಿಮ್ಮನ್ನು ಆಯ್ಕೆ ಮಾಡಬೇಕು ಎಂದು ನೇರವಾಗಿ ಹರಿಹಾಯುತ್ತಿರುವ ಪ್ರಸಂಗಗಳು ಚುನಾವಣಾ ಪ್ರಚಾರದಲ್ಲಿ ಕಂಡುಬರುತ್ತಿವೆ.
ಮುಖ್ಯಮಂತ್ರಿಯಿಂದ ಹಿಡಿದು ಪಕ್ಷೇತರ ಅಭ್ಯರ್ಥಿವರೆಗೆ ಯಾರನ್ನೂ ಬಿಡದ ಮತದಾರರು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ಇದೇ ಪ್ರಜಾಪ್ರಭುತ್ವದ ಸೌಂದರ್ಯ. ಪ್ರತಿ ಚುನಾವಣೆ ಸಂದರ್ಭದಲ್ಲಿ ಮತದಾರರ ಮನೆ ಬಾಗಿಲಿಗೆ ರಾಜಕಾರಣಿಗಳು ಹೋಗಲೇಬೇಕು. ಮತದಾರ ಪ್ರಭುಗಳು ರಾಜಕಾರಣಿಗಳ ಬೆವರಿಳಿಸುವ ಸಂದರ್ಭ ಇದಾಗಿರುತ್ತದೆ. ಇಂತಹ ಸಾಕಷ್ಟು ಉದಾಹರಣೆಗಳು ಈ ಚುನಾವಣೆ ಸಂದರ್ಭದಲ್ಲಿ ಕಂಡುಬಂದಿವೆ.

ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ಮಾಡುವ ಸಂದರ್ಭದಲ್ಲಿ ಹಳೆಕೆಸರೆ ಗ್ರಾಮದಲ್ಲಿ ಮರಿಸ್ವಾಮಿ ಎಂಬುವವರನ್ನು ಪಕ್ಷಕ್ಕೆ ಕರೆದಾಗ ಮುಖ್ಯಮಂತ್ರಿ ಎಂಬುದನ್ನು ನೋಡದೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಆಯ್ತು, ನೀನು ಹೋಗಪ್ಪ ಎಂದಿದ್ದಕ್ಕೆ ನಾನೇಕೆ ಹೋಗಬೇಕು. ಇದು ನನ್ನೂರು. ನೀವೇ ಹೋಗಿ ಎಂದು ದಬಾಯಿಸಿದ್ದಾರೆ. ಇನ್ನು ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರಿಗೂ ಮತದಾರರು ತರಾಟೆಗೆ ತೆಗೆದುಕೊಂಡಿದ್ದಾರೆ. ಶಿರಾ ತಾಲೂಕು ಅಗ್ರಹಾರಕ್ಕೆ ಬಂದಾಗ ಮೂಲಭೂತ ಸೌಕರ್ಯಗಳ ಕೊರತೆಯನ್ನು ಮುಂದಿಟ್ಟುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೋಡಿಲ್ಲ, ನೀರಿಲ್ಲ ಎಂದು ಗ್ರಾಮದ ಹೊರಭಾಗದಲ್ಲಿ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ.
ಇನ್ನು ಯಾದಗಿರಿಯಲ್ಲಿ ಹಿರಿಯ ಶಾಸಕ, ಮಾಜಿ ಸಚಿವ ಎ.ಬಿ.ಮಾಲಕರೆಡ್ಡಿಗೂ ಮತದಾರರಿಂದ ಇದೇ ಬಿಸಿ ತಟ್ಟಿದೆ. ಸಚಿವ ಸಂತೋಷ್‍ಲಾಡ್ ಅವರಿಗೂ ಮತ ಪ್ರಚಾರದ ವೇಳೆ ಮತದಾರರು ಚಳಿ ಬಿಡಿಸಿದ್ದಾರೆ.

ಕಡೂರಿನಲ್ಲಿ ವೈ.ಎಸ್.ವಿ.ದತ್ತ ಅವರು ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ , ಬೀರೂರಿನಲ್ಲಿ ಅವರದೇ ಪಕ್ಷದವರು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ಜರುಗಿದೆ.
ಇಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದ ತಾವು ಚುನಾವಣಾ ಸಂದರ್ಭದಲ್ಲಿ ಪ್ರಚಾರಕ್ಕೆ ಆಗಮಿಸಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವ ಬಸವರಾಜ ರಾಯರೆಡ್ಡಿ ಯಲಬುರ್ಗ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿರುವ ಸಂದರ್ಭದಲ್ಲಿ ಶೌಚಾಲಯ, ನೀರಿನ ಕೊರತೆ ಮುಂತಾದ ವಿಷಯಗಳ ಬಗ್ಗೆ ಮತದಾರರು ತರಾಟೆಗೆ ತೆಗೆದುಕೊಂಡಿರುವ ಪ್ರಸಂಗ ನಡೆದಿದೆ.

ಮತದಾರರು ಸಾಕಷ್ಟು ಪ್ರಬುದ್ಧರಾಗಿದ್ದಾರೆ. ಇತ್ತೀಚೆಗೆ ಹೆಚ್ಚು ಪ್ರಶ್ನೆ ಮಾಡುವ ಪ್ರೌಢಿಮೆ ಬೆಳೆಸಿಕೊಂಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಸಂವಾದದ ಸಂದರ್ಭದಲ್ಲಿ ರೈತರ ಸಮಸ್ಯೆಗಳ ಬಗ್ಗೆಯೂ ದನಿ ಎತ್ತಿದ್ದಾರೆ.

ಮೈಸೂರಿನಲ್ಲಿ ರಾಹುಲ್ ಗಾಂಧಿ ಅವರು ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದಲ್ಲಿ ವಿದ್ಯಾರ್ಥಿನಿಯೊಬ್ಬಳು ಸೌಲಭ್ಯಗಳ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿರುವ ಬಗ್ಗೆ ರಾಹುಲ್‍ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನೇರವಾಗಿ ಪ್ರಶ್ನಿಸಿದ್ದಾರೆ.
ಇನ್ನು ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಏಕೆ ಮಾಡಿದ್ದೀರಿ ಎಂದು ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ನಿರ್ಮಲಾ ಸೀತಾರಾಮ್ ಅವರನ್ನು ವಿದ್ಯಾರ್ಥಿಗಳು ಸಂವಾದ ಕಾರ್ಯಕ್ರಮದಲ್ಲಿ ನೇರವಾಗಿ ಪ್ರಶ್ನಿಸಿ ತಬ್ಬಿಬ್ಬು ಮಾಡಿದ್ದಾರೆ.
ಹಲವು ಶಾಸಕರು ಕಳೆದ ಬಾರಿನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಮತ್ತೆ ಮತ ಕೇಳಲು ಏಕೆ ಬಂದಿದ್ದೀರಿ ಎಂದು ನೇರವಾಗಿಯೇ ಹಲವು ಮತದಾರರು ಕೇಳುತ್ತಿದ್ದಾರೆ.

ಇನ್ನೂ ಹಲವೆಡೆ ಬಹಿರಂಗ ವಿರೋಧಗಳು ವ್ಯಕ್ತವಾಗುತ್ತಿವೆ. ಆರೋಪ-ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿವೆ. ಪ್ರಜಾಪ್ರಭುತ್ವದ ಸೌಂದರ್ಯವೇ ಹಾಗೆ. ಇಲ್ಲಿ ಪ್ರಜೆಗಳೇ ಪ್ರಭುಗಳು. ಶಾಸಕರು, ಸಚಿವರಾಗಿ ಮೆರೆದವರನ್ನು ಪ್ರಶ್ನಿಸಲು ಯಾವುದೇ ಆಮಿಷಗಳಿಗೆ ಒಳಗಾಗದೆ, ಮರ್ಜಿಗೆ ಬಲಿಯಾಗದೆ ನಿರ್ದಾಕ್ಷಿಣ್ಯವಾಗಿ ಪ್ರಶ್ನಿಸಿ ಉತ್ತಮ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಇದು ಸೂಕ್ತ ಸಮಯ. ಆದರೆ, ಪ್ರಶ್ನಿಸುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಎಲ್ಲೋ ಕೆಲವು ಸುದ್ದಿಯಾಗುತ್ತವೆ. ಬಹುತೇಕರು ವಂದಿ ಮಾಗದರಂತೆ ಜೈಕಾರ ಹಾಕುತ್ತ ವ್ಯವಸ್ಥೆಗೆ ಹೊಂದಿಕೊಂಡು ಹೋಗುತ್ತಾರೆ. ಹೀಗಾಗಿ ಪರಿವರ್ತನೆ ಎಂಬುದು ಕನಸಾಗಿಯೇ ಉಳಿಯುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ