ದಾವಣಗೆರೆ,ಏ.29-ರಾಜ್ಯ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಇಂದು ಮಧ್ಯ ಕರ್ನಾಟಕದ ಬೆಣ್ಣೆನಗರಿ ದಾವಣಗೆರೆಯಲ್ಲಿ ಬಿಜೆಪಿ ಪರ ಭರ್ಜರಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ತೆರೆದ ವಾಹನಗಳ ಮೂಲಕ ಬಿಜೆಪಿ ಅಭ್ಯರ್ಥಿಗಳಾದ ಎಸ್.ಎ.ರವೀಂದ್ರನಾಥ್, ಯಶವಂತರಾಜ್ ಜಾದವ್,ಕರುಣಾಕರ ರೆಡ್ಡಿ , ಪೆÇ್ರ.ಲಿಂಗಪ್ಪ , ಮಾಡಾಳು ವಿರೂಪಾಕ್ಷಪ್ಪ , ಬಿ.ಪಿ.ಹರೀಶ್, ಎಂ.ಪಿ.ರೇಣುಕಾಚಾರ್ಯ, ಎಸ್.ಎ.ರಾಮಚಂದ್ರ ಪರ ಅಮಿತ್ ಷಾ ಭರ್ಜರಿ ಪ್ರಚಾರ ನಡೆಸಿದರು.
ರಾಷ್ಟ್ರೀಯ ಅಧ್ಯಕ್ಷರು ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ ಬೆಣ್ಣೆ ನಗರಿ ಇಂದು ಅಕ್ಷರಶಃ ಬಿಜೆಪಿಮಯವಾಗಿತ್ತು. ಎಲ್ಲೆಲ್ಲೂ ಕೂಡ ಪ್ರಧಾನಿ ಮೋದಿ, ಅಮಿತ್ ಷಾ, ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಕಟೌಟ್ಗಳನ್ನು ಹಾಕಲಾಗಿತ್ತು.
ವಿಶೇಷ ಹೆಲಿಕಾಪ್ಟರ್ನಲ್ಲಿ ಆಗಮಿಸಿದ ಅಮಿತ್ ಷಾ ಅವರನ್ನು ಮೊದಲು ಲೋಕಸಭಾ ಸದಸ್ಯ ಜಿ.ಎಂ.ಸಿದ್ದೇಶ್ವರ ಸೇರಿದಂತೆ ಮತ್ತಿತರರು ಆತ್ಮೀಯವಾಗಿ ಬರಮಾಡಿಕೊಂಡರು.
ದಾವಣಗೆರೆ ಹರಿಹರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಲ್ಲಿ ಮತಯಾಚನೆ ಮಾಡಿದ ಅಮಿತ್ ಷಾ ಈ ಬಾರಿ ಜಿಲ್ಲೆಗಳಲ್ಲಿ 8ಕ್ಕೂ ಎಂಟು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿಕೊಡುವಂತೆ ಕಾರ್ಯಕರ್ತರಿಗೆ ಮನವಿ ಮಾಡಿದರು.
ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ ರಾಜ್ಯದಲ್ಲೂ ನಮ್ಮ ಪಕ್ಷವೇ ಅಧಿಕಾರ ಹಿಡಿದರೆ ಹೆಚ್ಚಿನ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಕಾಂಗ್ರೆಸ್ನ ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಪಕ್ಷವನ್ನು ಬೆಂಬಲಿಸಬೇಕೆಂದು ಕೋರಿದರು.
ಈ ಹಿಂದೆ ದಾವಣಗೆರೆ ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಬಂದಾಗ ಜಿಲ್ಲೆಯ ಜನತೆ ಅತಿಹೆಚ್ಚು ಪ್ರೀತಿ ತೋರಿಸಿದ್ದೀರಿ, ಈಗ 12ರಂದು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಕಮಲ ಪಕ್ಷವನ್ನು ಅರಳಿಸಿ ಕಾಂಗ್ರೆಸ್ ಪಕ್ಷವನ್ನು ಬೇರು ಸಮೇತ ಕಿತ್ತುಹಾಕುವಂತೆ ಕರೆ ನೀಡಿದರು.