ಬಿಜೆಪಿಯ ಅತಿರೇಕದ ಜಾಹೀರಾತುಗಳಿಗೆ ಕಾಂಗ್ರೆಸ್ ಆಕ್ರಮಣಕಾರಿ ಪ್ರಚಾರದ ಪ್ರತ್ಯುತ್ತರ

ಬೆಂಗಳೂರು, ಏ.29-ಬಿಜೆಪಿಯ ಅತಿರೇಕದ ಜಾಹೀರಾತುಗಳಿಗೆ ಪ್ರತ್ಯುತ್ತರವಾಗಿ ಕಾಂಗ್ರೆಸ್ ಕೂಡ ಆಕ್ರಮಣಕಾರಿ ಪ್ರಚಾರ ನಡೆಸಲು ಮುಂದಾಗಿದೆ.
ಮತದಾನ ಸಮೀಪಿಸುತ್ತಿದ್ದಂತೆ ಆಕ್ರಮಣಕಾರಿ ಪ್ರಚಾರದ ಮೊರೆ ಹೋಗಿ ಬಿಜೆಪಿಗೆ ಟಾಂಗ್ ನೀಡಲು ಕಾಂಗ್ರೆಸ್ ಚಿಂತನೆ ನಡೆಸಿದೆ.
ಬಿಜೆಪಿ ಕಾನೂನು ಸುವ್ಯವಸ್ಥೆ, ನಗರ ಸೌಲಭ್ಯ, ಮಹಿಳಾ ಸುರಕ್ಷತೆ, ಭ್ರಷ್ಟಾಚಾರ ನಿಯಂತ್ರಣ ವಿಷಯವಾಗಿ ಅತಿರೇಕದ ಜಾಹೀರಾತುಗಳನ್ನು ನೀಡಿ ಕಾಂಗ್ರೆಸ್‍ಗೆ ಮುಜುಗರ ಉಂಟು ಮಾಡಿತ್ತು.

ಚುನಾವಣಾ ಆಯೋಗಕ್ಕೆ ಈ ವಿಷಯವಾಗಿ ದೂರು ನೀಡಿದ ನಂತರ ಜಾಹೀರಾತುಗಳು ಸ್ಥಗಿತಗೊಂಡಿವೆ. ಆದರೆ ಜನಸಾಮಾನ್ಯರ ಮನಸ್ಸಿನಲ್ಲಿ ಜಾಹೀರಾತಿನ ಪರಿಣಾಮ ಆಳವಾಗಿ ಬೇರೂರಿದೆ.
ತಡವಾಗಿ ಎಚ್ಚೆತ್ತುಕೊಂಡ ಕಾಂಗ್ರೆಸ್ ಬಿಜೆಪಿಗೆ ತಕ್ಕ ಪ್ರತ್ಯುತ್ತರ ನೀಡಲು ಸಂಚು ರೂಪಿಸುತ್ತಿದೆ. ಜಾಹೀರಾತುಗಳಲ್ಲಿ ಆರೋಪಿಸಲಾದ ಎಲ್ಲಾ ಅಂಶಗಳು ಬಿಜೆಪಿಯ ಎಡವಟ್ಟುಗಳೇ, ಆದರೂ ಸತ್ಯವನ್ನು ಮರೆ ಮಾಚಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆದಿದೆ.
ಪಕ್ಷದ ವರಿಷ್ಠರು ಸರಿಯಾದ ಸಮಯದಲ್ಲಿ ಎಚ್ಚೆತ್ತುಕೊಳ್ಳದಿದ್ದರಿಂದ ಚುನಾವಣೆ ವೇಳೆ ಪಕ್ಷದ ವರ್ಚಸ್ಸಿಗೆ ಸಾಕಷ್ಟು ಹಾನಿಯಾಗಿದೆ ಎಂಬ ಅಸಮಾಧಾನವನ್ನು ಹೈಕಮಾಂಡ್ ಹೊರಹಾಕಿದೆ.

ರಾಜ್ಯ ಕಾಂಗ್ರೆಸ್‍ನಲ್ಲಿ ಏನೇ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದರೂ ಕೆಲ ವಿಷಯಗಳಲ್ಲಿ ಹೊಂದಾಣಿಕೆ ಕೊರತೆ ಎದ್ದು ಕಾಣುತ್ತಿದೆ. ಬಿಜೆಪಿ ಆಕ್ರಮಣಕಾರಿ ಜಾಹೀರಾತುಗಳು ಟಿ.ವಿ, ರೇಡಿಯೋ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಪ್ರಸಾರಗೊಳ್ಳುತ್ತಿದ್ದಂತೆ ಅದಕ್ಕೆ ಕಡಿವಾಣ ಹಾಕಲು ಬಹಳಷ್ಟು ಕಾರ್ಯಕರ್ತರು ಮತ್ತು ನಾಯಕರು ವರಿಷ್ಠರಿಗೆ ದುಂಬಾಲು ಬಿದ್ದಿದ್ದರು.
ಆದರೆ ವರಿಷ್ಠರು ಒಬ್ಬರ ಮೇಲೆ ಒಬ್ಬರು ಜವಾಬ್ದಾರಿ ಎತ್ತಿ ಹಾಕಿ ಜಾರಿಕೊಳ್ಳಲಾರಂಭಿಸಿದರು. ಹೀಗಾಗಿ ರಾಜ್ಯ ಸರ್ಕಾರ ಮಾಡಿದ ಜನಪರ ಕೆಲಸಗಳಿಗಿಂತಲೂ ಬಿಜೆಪಿ ಜಾಹೀರಾತಿನ ನೆಗೆಟಿವ್ ಪಬ್ಲಿಸಿಟಿಯೇ ಹೆಚ್ಚಾಗಿ ಪ್ರಭಾವ ಬೀರಿತ್ತು.

ಈ ಜಾಹೀರಾತುಗಳಿಂದ ಉಂಟಾಗಿರುವ ಹಾನಿಯನ್ನು ಸರಿದೂಗಿಸಲು ಸಿದ್ದರಾಮಯ್ಯ ಹೋದ ಕಡೆಯಲ್ಲೆಲ್ಲ ಏರಿದ ದನಿಯಲ್ಲಿ ಟೀಕೆ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್‍ನ ಉಳಿದ ನಾಯಕರು ಬಿಜೆಪಿ ಅಥವಾ ಜೆಡಿಎಸ್ ವಿರುದ್ಧ ಟೀಕೆ ಮಾಡುವ ಬದಲು ಕ್ಷೇತ್ರದಲ್ಲಿ ತಾವು ಗೆಲ್ಲಲು ಮಾತ್ರ ಸೀಮಿತವಾಗಿ ಮಾತನಾಡುತ್ತಿದ್ದಾರೆ. ರಾಜ್ಯದ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಚುನಾವಣೆ ವೇಳೆ ಜನರಿಗೆ ತಿಳಿ ಹೇಳಲು ಕಾಂಗ್ರೆಸ್ ವಿಫಲವಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಪ್ರಚಾರದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಖಾಸಗಿ ಸಂಸ್ಥೆಯೊಂದಕ್ಕೆ ಹೈಕಮಾಂಡ್ ಸ್ಪಷ್ಟ ಸೂಚನೆ ನೀಡಿದ್ದು, ಚುನಾವಣೆಯ ಕೆಲ ದಿನಗಳ ಹಿಂದೆ ಆಕ್ರಮಣಕಾರಿ ಜಾಹೀರಾತು ನಿರ್ಮಿಸಿ ವೈರಲ್ ಮಾಡುವಂತೆ ತಾಕೀತು ಮಾಡಲಾಗಿದೆ.
ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ವಿರುದ್ಧ ವ್ಯಾಪಕ ಚರ್ಚೆಗೆ ಕುಮ್ಮಕ್ಕು ನೀಡುವಂತೆಯೂ ಸೂಚಿಸಲಾಗಿದೆ. ಬಿಜೆಪಿ ಕೂಡ ಕಾಂಗ್ರೆಸ್ ವಿರುದ್ಧ ಆಕ್ರಮಣಕಾರಿ ಜಾಹೀರಾತುಗಳನ್ನು ಏಕಾಏಕಿ ಬಿಡುಗಡೆ ಮಾಡಿ ತಬ್ಬಿಬ್ಬು ಮಾಡಿತ್ತು.

ಅದೇ ತಂತ್ರಗಾರಿಕೆ ಮೂಲಕ ಬಿಜೆಪಿಯನ್ನು ತಬ್ಬಿಬ್ಬು ಮಾಡಲು ಕಾಂಗ್ರೆಸ್ ಮುಂದಾಗಿದೆ.
ಚುನಾವಣಾ ಕಣದಲ್ಲಿ ಈವರೆಗೂ ಟೀಕೆ, ಆರೋಪಗಳು ಸಂಸದೀಯ ವ್ಯವಸ್ಥೆಯ ಇತಿಮಿತಿಯಲ್ಲೇ ಇವೆ. ಆದರೆ ಚುನಾವಣೆ ಸಮೀಪಿಸುತ್ತಿದ್ದಂತೆ ಪರಿಸ್ಥಿತಿ ಕಾವೇರಲಿದ್ದು, ಆರೋಪ-ಪ್ರತ್ಯಾರೋಪಗಳು ಸಂಸದೀಯ ನೀತಿಯ ಗೆರೆ ದಾಟುವುದನ್ನು ತಳ್ಳಿಹಾಕುವಂತಿಲ್ಲ. ಇದಕ್ಕಾಗಿ ಎಲ್ಲಾ ಪಕ್ಷಗಳು ತಮ್ಮ ತಮ್ಮಲ್ಲೇ ತಂತ್ರಗಾರಿಕೆಯನ್ನು ರೂಪಿಸಿಕೊಳ್ಳುತ್ತಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ