ಬಿಜಾಪುರ, ಏ.27-ನಕ್ಸಲ್ ಪೀಡಿತ ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ಮಾವೋವಾದಿ ನಿಗ್ರಹ ಕಾರ್ಯಾಚರಣೆ ಮತ್ತಷ್ಟು ಬಿರುಸಾಗಿದೆ. ದಟ್ಟ ಅರಣ್ಯದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಏಳು ನಕ್ಸಲರು ಹತರಾಗಿದ್ದಾರೆ. ಈ ಕಾರ್ಯಾಚರuಯಲ್ಲಿ ಕೆಲವು ಯೋಧರಿಗೆ ಗಾಯಗಳಾಗಿವೆ.
ಇದರೊಂದಿಗೆ ಕಳೆದ ಒಂದು ವಾರದಲ್ಲಿ ಮಹರಾಷ್ಟ್ರ- ಛತ್ತೀಸ್ಗಢ-ತೆಲಂಗಾಣ ಗಡಿಯಲ್ಲಿ ಹತರಾದ ಬಂಡುಕೋರರ ಸಂಖ್ಯೆ 44ಕ್ಕೇರಿದೆ.
ಕಳೆದ 10 ದಿನಗಳಿಂದ ಬಿಜಾಪುರದ ಗೊಂಡಾರಣ್ಯದಲ್ಲಿ ನಕ್ಸಲರಿಗಾಗಿ ಜಂಟಿ ಕಾರ್ಯಪಡೆ ಬೇಟೆ ಚುರುಕುಗೊಳಿಸಿದೆ. ಇಂದು ಮುಂಜಾನೆ ಇಪೆಂಟಾ ಗ್ರಾಮದ ಕಾಡಿನ ಬಳಿ ಶೋಧ ಕಾರ್ಯದಲ್ಲಿದ್ದ ಯೋಧರ ಮೇಲೆ ನಕ್ಸಲರು ಗುಂಡು ಹಾರಿಸಿದರು. ಈ ದಾಳಿಯಲ್ಲಿ ಕೆಲವು ಯೋಧರು ಗಾಯಗೊಂಡರು. ತಕ್ಷಣ ಎಚ್ಚೆತ್ತ ಜಂಟಿ ಪಡೆ ಪ್ರತಿರೋಧ ದಾಳಿ ನಡೆಸಿತು. ಈ ಸಂದರ್ಭದಲ್ಲಿ ಕೆಲಕಾಲ ಗುಂಡಿನ ಕಾಳಗ ನಡೆಯಿತು.
ಎನ್ಕೌಂಟರ್ನಲ್ಲಿ ಏಳು ನಕ್ಸಲರನ್ನು ಯೋಧರು ಹೊಡೆದುರುಳಿಸಿದರು. ಹತ ನಕ್ಸಲರಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪರಾರಿಯಾಗಿರುವ ಬಂಡುಕೋರರಿಗೆ ಶೋಧ ಮುಂದುವರಿದಿದೆ.
ಕಳೆದ ಭಾನುವಾರ ಮತ್ತು ಸೋಮವಾರ ಬಿಜಾಪುರ ಅರಣ್ಯ ಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ನಡೆದ ಎನ್ಕೌಂಟರ್ಗಳಲ್ಲಿ ಒಟ್ಟು 37 ನಕ್ಸಲರು ಹತರಾಗಿದ್ದರು. ಅವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು.