ಬೆಂಗಳೂರು, ಏ.26-ಕಾಂಗ್ರೆಸ್ನ ಲಿಂಗಾಯಿತ ಅಸ್ತ್ರಕ್ಕೆ ರಣತಂತ್ರ ರೂಪಿಸಿರುವ ಬಿಜೆಪಿ ನಾಡಿನ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಮಠಾಧೀಶರನ್ನು ಭೇಟಿ ಮಾಡಲು ಮುಂದಾಗಿದೆ.
ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್ ಈಗಾಗಲೇ ಸದ್ದಿಲ್ಲದೆ ಲಿಂಗಾಯಿತ ಮಠಾಧೀಶರನ್ನು ಭೇಟಿ ಮಾಡುತ್ತಿದ್ದು, ಲಿಂಗಾಯಿತ ಪ್ರತ್ಯೇಕ ಧರ್ಮದಿಂದ ಉಂಟಾಗುತ್ತಿರುವ ಅನಾಹುತಗಳ ಬಗ್ಗೆ ಮಠಾಧೀಶರಿಗೆ ಮನವರಿಕೆ ಮಾಡುತ್ತಿದ್ದಾರೆ.
ದೊಡ್ಡ ದೊಡ್ಡ ಮಠಾಧೀಶರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಭೇಟಿ ಮಾಡಿದರೆ ಸಣ್ಣಪುಟ್ಟ ಮಠಾಧೀಶರನ್ನು ಮುರುಳೀಧರ್ ರಾವ್ ಭೇಟಿ ಮಾಡಿ ವಸ್ತುಸ್ಥಿತಿಯನ್ನು ವಿವರಿಸುತ್ತಿದ್ದಾರೆ.
ಸನಾತನ ಧರ್ಮ ಉಳಿಯಬೇಕಾದರೆ ಮತ್ತು ಭಾರತೀಯ ಸಂಸ್ಕøತಿಯನ್ನು ಉಳಿಸಿ ಬೆಳೆಸಬೇಕಾದರೆ ಬಿಜೆಪಿ ಅನಿವಾರ್ಯ. ಹಿಂದು ಧರ್ಮದಿಂದ ಲಿಂಗಾಯಿತ ಸಮುದಾಯವನ್ನು ಪ್ರತ್ಯೇಕಗೊಳಿಸುವ ಮೂಲಕ ಕಾಂಗ್ರೆಸ್ ಜಾತಿ, ಧರ್ಮ ವಿಭಜಿಸುವ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಮಠಾಧೀಶರು ಅವಕಾಶ ನೀಡಬಾರದು ಎಂದು ಮುರುಳೀಧರ್ ರಾವ್ ಮನವರಿಕೆ ಮಾಡುತ್ತಿದ್ದಾರೆ.
ಗೋ ರಕ್ಷಣೆ, ಸಂಸ್ಕøತಿ ರಕ್ಷಣೆ ಮತ್ತು ಹಿಂದೂ ಧರ್ಮ ಉಳಿಯಲು ಬಿಜೆಪಿ ರಾಜ್ಯದಲ್ಲಿ ಆಡಳಿತ ನಡೆಸಬೇಕು. ಕೇವಲ ಅಲ್ಪಸಂಖ್ಯಾತರ ತುಷ್ಟೀಕರಣದಲ್ಲಿ ತೊಡಗಿರುವ ಕಾಂಗ್ರೆಸ್ ಕೆಲವು ಮೂಲಭೂತ ಸಂಘಟನೆಗಳಿಗೆ ಸರ್ಕಾರವೇ ಕುಮ್ಮಕು ನೀಡುತ್ತಿದೆ. ಕಾಂಗ್ರೆಸ್ಗೆ ಬೆಂಬಲ ನೀಡದೆ ಬಿಜೆಪಿಯನ್ನು ಕೈ ಹಿಡಿಯುವಂತೆ ರಾವ್ ಮಠಾಧೀಶರಿಗೆ ದುಂಬಾಲು ಬಿದ್ದಿದ್ದಾರೆ.
ಈಗಾಗಲೇ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಠಾಧೀಶರನ್ನು ಭೇಟಿ ಮಾಡಿರುವ ಮುರುಳೀಧರ್ ರಾವ್ ಮತದಾನ ಮುಗಿಯುವ ವೇಳೆಗೆ ಇನ್ನು 2000 ಮಠಾಧೀಶರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಉದ್ದೇಶ ಹೊಂದಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ರಾಜ್ಯ ಸರ್ಕಾರ ಹಿಂದೂ ಧರ್ಮದಿಂದ ಲಿಂಗಾಯಿತ ಸಮುದಾಯವನ್ನು ಪ್ರತ್ಯೇಕಗೊಳಿಸಿ ಅವರಿಗೆ ಪ್ರತ್ಯೇಕ ಸ್ಥಾನಮಾನ ನೀಡಲು ಮುಂದಾಗಿತ್ತು. ಇದಕ್ಕೆ ರಾಜ್ಯದೆಲ್ಲೆಡೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.