ಸಂವಿಧಾನ ರಕ್ಷಿಸಿ ಪ್ರಜಾಪ್ರಭುತ್ವ ಉಳಿಸಿ;ಜನಜಾಗೃತಿ ಅಭಿಯಾನ: ಬಹುಜನ ಸಮಾಜ ಪರಿಷತ್‍ನ ರಾಜ್ಯ ಪ್ರಧಾನ ಕಾರ್ಯದರ್ಶಿ ಬುದ್ದಾನಂದ ಸ್ವಾಮೀಜಿ ಕರೆ

ಬೆಂಗಳೂರು,ಏ.26-ಸಂವಿಧಾನ ರಕ್ಷಿಸಿ ಪ್ರಜಾಪ್ರಭುತ್ವ ಉಳಿಸಿ ಎಂಬ ಜನಜಾಗೃತಿ ಅಭಿಯಾನವನ್ನು ಒಂದು ವರ್ಷಗಳ ಕಾಲ ರಾಜ್ಯಾದ್ಯಂತ ಹಮ್ಮಿಕೊಂಡಿದ್ದೇವೆ ಎಂದು ಬಹುಜನ ಸಮಾಜ ಪರಿಷತ್‍ನ ರಾಜ್ಯ ಪ್ರಧಾನ ಕಾರ್ಯದರ್ಶಿ ಬುದ್ದಾನಂದ ಸ್ವಾಮೀಜಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಕಾರ್ಯ ವೈಫಲ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈಗಾಗಲೇ ಏ.14ರಿಂದಲೇ ಬೀದರ್, ಗುಲ್ಬರ್ಗಾ ಜಿಲ್ಲೆಯಲ್ಲಿ ಅಭಿಯಾನವನ್ನು ಕೈಗೊಂಡಿದ್ದು, ರಾಜ್ಯಾದ್ಯಂತ ಅಭಿಯಾನ ಮುಂದುವರೆಸಲಿದ್ದೇವೆ ಎಂದರು.

ದೇಶದಲ್ಲಿ ಸಂವಿಧಾನ ಜಾರಿಯಾಗಿ 69 ವರ್ಷ ಕಳೆದರೂ ಜನಸಾಮಾನ್ಯರ ಜೀವನಮಟ್ಟ ಸುಧಾರಣೆಯಾಗಿಲ್ಲ. ಇಲ್ಲಿಯವರೆಗೆ ದೇಶವನ್ನಾಳಿದ ಎಲ್ಲ ರಾಜಕೀಯ ಪಕ್ಷಗಳು ಸಂವಿಧಾನದ ಆಶಯಗಳಾದ ಆರ್ಥಿಕ ವಿಮೋಚನೆ, ಸಾಮಾಜಿಕ ಪರಿವರ್ತನೆಗಳು ಇನ್ನು ಮರೀಚಿಕೆಯಾಗಿವೆ. ಚುನಾವಣೆ ಬಂದಾಗ ಮಾತ್ರ ಸುಳ್ಳು ಆಶ್ವಾಸನೆ ನೀಡಿ ವೋಟ್ ಗಿಟ್ಟಿಸಿಕೊಳ್ಳವ ಪ್ರಯತ್ನ ಮಾಡುತ್ತಿವೆ ಎಂದರು.

ಕರ್ನಾಟಕದಲ್ಲಿ ಅತಿಹೆಚ್ಚು ಕಾಲಾವಧಿಯಲ್ಲಿ ಅಧಿಕಾರ ನಡೆಸಿ ಕಾಂಗ್ರೆಸ್ ಪಕ್ಷವು ದಲಿತ, ಹಿಂದುಳಿದ, ಅಲ್ಪಸಂಖ್ಯಾತರನ್ನು ತನ್ನ ವೋಟ್ ಬ್ಯಾಂಕ್‍ಆಗಿ ಬಳಸಿಕೊಂಡಿದೆ ವಿನಃ ಯಾವುದೇ ಅಭಿವೃದ್ದಿ ಕಾರ್ಯಗಳನ್ನು ಮಾಡಿಲ್ಲ ದಲಿತ ಸಮುದಾಯಗಳು ಹಿಂದುಳಿಯಲು ಕಾಂಗ್ರೆಸ್ ಪಕ್ಷವೇ ನೇರ ಹೊಣೆಯಾಗಿದೆ ಎಂದು ಆರೋಪಿಸಿದರು.

ಎಸ್ಸಿ-ಎಸ್ಟಿ ಬ್ಯಾಕ್‍ಲಾಕ್ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಸರ್ಕಾರಿ ಎಸ್ಸಿ- ಎಸ್ಟಿ ನೌಕರರ ಮುಂಬಡ್ತಿಯಲ್ಲಿ ಮೀಸಲಾತಿ ನೀಡಿಲ್ಲ. ಅಲ್ಲದೆ 2012ನೇ ಸಾಲಿನಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ರಾಜ್ಯ ಸಭೆಯಲ್ಲಿ ಮಸೂದೆ ಪಾಸಾದರೂ ಲೋಕಸಭೆಯಲ್ಲಿ ಜಾತ್ಯತೀತ ಮಾನಸಿಕತೆ ತೋರಿಸಿ ಮಸೂದೆ ಅಂಗೀಕಾರವಾಗಲು ಅಡ್ಡಗಾಲು ಹಾಕಲಾಗಿದೆ ಎಂದು ದೂರಿದರು.

 

ಅಲ್ಲದೆ ಕೇಂದ್ರ ಸರ್ಕಾರವು ಕೂಡ ದಲಿತ,ಹಿಂದುಳಿದ, ಅಲ್ಪಸಂಖ್ಯಾತರ ಕಾರ್ಯಗಳನ್ನು ಮಾಡುತ್ತಿಲ್ಲ. ಬದಲಿಗೆ ಉದ್ಯಮಿಪತಿಗಳ ಕಲ್ಯಾಣ ಮಾಡುತ್ತಿದೆ.ಅವರ ಸಾಲಮನ್ನಾ ಕೂಡ ಮಾಡಿದೆ. ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆಯನ್ನು ದುರ್ಬಲಗೊಳಿಸಲು ಮುಂದಾಗಿದೆ ಎಂದರು.
ಸಂವಿಧಾನ ಬದಲಾವಣೆ ಮಾಡುವ ಕೆಲಸ ಮಾಡುತ್ತಿದೆ. ಖಾಸಗಿ ಕ್ಷೇತ್ರದಲ್ಲಿ ದಲಿತರಿಗೆ, ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡುತ್ತಿಲ್ಲ. ದಿನಬೆಳಗಾದರೆ ಈ ಸಮುದಾಯದವರ ಮೇಲೆ ಕೊಲೆ, ಹಲ್ಲೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಂವಿಧಾನ ರಕ್ಷಿಸಿ ಪ್ರಜಾಪ್ರಭತ್ವ ಉಳಿಸಿ ಎಂಬ ಜನಜಾಗೃತಿ ಅಭಿಯಾನವನ್ನು ಒಂದು ವರ್ಷ ಕಾಲ ನಡೆಸಲಾಗುವುದು ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ