ಬೆಂಗಳೂರು, ಏ.25- ಅಭ್ಯರ್ಥಿಗಳ ಆಯ್ಕೆ ಗೊಂದಲದ ವಿಚಾರ ಮುಗಿದಿದ್ದು, ಕೆಲವು ಕ್ಷೇತ್ರಗಳಲ್ಲಿರುವ ಭಿನ್ನಮತೀಯರ ಮನವೊಲಿಸುವ ಪ್ರಯತ್ನ ಮಾಡುತ್ತಿರುವುದಾಗಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಿನ್ನೆಗೆ ಮುಗಿದಿರುವುದರಿಂದ ಅಭ್ಯರ್ಥಿಗಳ ಆಯ್ಕೆ ಗೊಂದಲದ ವಿಚಾರ ಮುಗಿದಿದೆ. ಇನ್ನೇನಿದ್ದರೂ ಬಂಡಾಯ ಎದ್ದಿರುವ ಅಭ್ಯರ್ಥಿಗಳ ಮನವೊಲಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಆಸ್ಟ್ರೇಲಿಯಾದ ಉಪ ಕೌನ್ಸಲೇಟ್ ಜನರಲ್ ಜಾನ್ ಬೋನರ್ ಅವರು ಇಂದು ತಮ್ಮನ್ನು ಭೇಟಿಯಾಗಿದ್ದರು. ಸ್ವಾಭಾವಿಕವಾಗಿ ರಾಜ್ಯ ಚುನಾವಣೆ ಬಗ್ಗೆ ಮಾತುಕತೆ ನಡೆಸಿದ್ದೇವೆ. ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ನಮ್ಮ ಪ್ರಾದೇಶಿಕ ಪಕ್ಷ ಯಾವ ರೀತಿ ಹೋರಾಟ ಮಾಡಲಿದೆ ಎಂದು ಕೇಳಿದರು. ಅದಕ್ಕೆ ನಮ್ಮ ರಾಜ್ಯದ ನೆಲ, ಜಲ, ಭಾಷೆಯ ಉಳಿವಿಗಾಗಿ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದೇನೆ. ಪ್ರಧಾನಿಯಾಗಿದ್ದಾಗ ನಾನು ಬಹಳಷ್ಟು ಸಾಧನೆ ಮಾಡಿರುವುದನ್ನು ಬೋನರ್ ಅರಿತಿದ್ದಾರೆ. ಆದರೆ, ನನ್ನ ದುರಾದೃಷ್ಟ ನಮ್ಮ ರಾಜ್ಯದ ಜನರು ನಾನೇನು ಮಾಡಿದ್ದೇನೆ ಎಂಬುದನ್ನು ಅರಿತುಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಚುನಾವಣೆ ನಂತರ ಕಿಂಗ್ ಮೇಕರ್ ಅಥವಾ ಕಿಂಗ್ ಆಗ್ತೀರಾ ಎಂದು ಕೂಡ ಅವರು ಕೇಳಿದರು. ಅದಕ್ಕೆ ಚುನಾವಣಾ ಫಲಿತಾಂಶ ಬಂದ ಮೇಲೆ ನೋಡೋಣ ಎಂದು ಹೇಳಿರುವುದಾಗಿ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ರಾಜ್ಯದಲ್ಲಿ ಭ್ರಷ್ಟರನ್ನು ರಕ್ಷಿಸುವ ಕೆಲಸ ಮಾಡುತ್ತಿದೆ. ನಾನು ಜಾರಿಗೆ ತಂದಿದ್ದ ಲೋಕಾಯುಕ್ತ ಸಂಸ್ಥೆಯನ್ನು ಮೂಲೆಗುಂಪು ಮಾಡಿದ್ದಾರೆ. ಕಾವೇರಿ-ಮಹಾದಾಯಿ ವಿಚಾರದಲ್ಲಿ ಏನೆಲ್ಲ ಹೋರಾಟ ಮಾಡುತ್ತಿದ್ದೇವೆ ಎಂಬುದನ್ನು ಅವರ ಗಮನಕ್ಕೆ ತಂದಿರುವುದಾಗಿ ಅವರು ಹೇಳಿದರು.
ಎಟಿಎಂಗಳಲ್ಲಿ ಹಣದ ಕೊರತೆ ಬಗ್ಗೆ ಪ್ರತಿಕ್ರಿಯಿಸಿದ ಗೌಡರು, ಏನೋ ಸುಧಾರಣೆ ತರುತ್ತೇವೆ ಎಂದು ಪ್ರಧಾನಿ ಹೊರಟಿದ್ದರು. ಆದರೆ, ವಿಫಲರಾಗಿದ್ದಾರೆ. ನೋಟ್ ಅಮಾನೀಕರಣವೇ ಸಂಪೂರ್ಣ ವಿಫಲವಾಗಿದೆ. ಈ ಬಗ್ಗೆ ಅಂದೇ ನಾನು ಸ್ಪಷ್ಟಪಡಿಸಿದ್ದೆ ಎಂದು ಗೌಡರು ತಿಳಿಸಿದರು.