ಚುನಾವಣಾ ಪ್ರಚಾರದ ಸಮಯದಲ್ಲಿ ಮಳೆ ಅನಾಹುತ ಪ್ರದೇಶಕ್ಕೆ ಭೇಟಿ ನೀಡಿದ ಡಾ.ಅಶ್ವತ್ ನಾರಾಯಣ

ಬೆಂಗಳೂರು,ಏ.25- ಮಲ್ಲೇಶ್ವರಂ ಶಾಸಕ ಡಾ.ಅಶ್ವಥ್ ನಾರಾಯಣ ಅವರು ಚುನಾವಣಾ ಪ್ರಚಾರದ ಸಮಯದಲ್ಲಿ ಕ್ಷೇತ್ರದ ಮಳೆ ಅನಾಹುತ ಪ್ರದೇಶಗಳಿಗೆ ಭೇಟಿ ನೀಡಿ ಜನರ ಅಹವಾಲು ಸ್ವೀಕರಿಸಿ ಕುಂದುಕೊರತೆಗಳನ್ನು ಆಲಿಸಿದರು.

ಮಲ್ಲೇಶ್ವರಂ ಬಿಜೆಪಿ ಅಭ್ಯರ್ಥಿ ಡಾ. ಅಶ್ವಥ್ ನಾರಾಯಣ ಅವರು ವಾರ್ಡ್ ನಂ.35 ಅರಮನೆ ನಗರದಲ್ಲಿ ನೂರಾರು ಮಂದಿ ಕಾರ್ಯಕರ್ತರೊಂದಿಗೆ ಬೆಳಿಗ್ಗೆಯಿಂದಲೆ ಬಿರುಸಿನ ಪ್ರಚಾರ ನಡೆಸುವ ಮೂಲಕ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಅವರು ಮಳೆಯಿಂದ ಮರಬಿದ್ದು ತೊಂದರಗೀಡಾದ ಐಟಿಐ ಬಡಾವಣೆಗೆ ಭೇಟಿ ನೀಡಿ ನಿವಾಸಿಗಳ ಕುಂದುಕೊರತೆಗಳ ಬಗ್ಗೆ ವಿಚಾರಿಸಿದರು.

ಅರಮನೆ ನಗರ ವಾರ್ಡ್ ವ್ಯಾಪ್ತಿಯಲ್ಲಿ ಬರುವ ರಾಮಯ್ಯ ಕಾಲೇಜಿನ ಸುತ್ತಮುತ್ತಲ ಬಡಾವಣೆ, ಬಸವ ಪಾರ್ಕ್, ಎಂ.ಎಸ್.ರಾಮಯ್ಯ ನಗರ, ವೆಂಕಟೇಶ್ವರ ಬಡಾವಣೆ, ಎ.ಜಿ.ಎಸ್ ಬಡಾವಣೆಯಲ್ಲಿ ಮನೆಮೆನೆಗೆ ತೆರಳಿ ಡಾ.ಅಶ್ವಥ್ ನಾರಾಯಣ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಬಡಾವಣೆಯ ನಿವಾಸಿಗಳು ಒಳಚರಂಡಿ ಸಮಸ್ಯೆ ಸಹಿತ ಇತರ ಹಲವಾರು ಸಮಸ್ಯೆಗಳ ಗಮನಕ್ಕೆ ತಂದು ಅದನ್ನು ಬಗೆಹರಿಸುವಂತೆ ಮನವಿ ಮಾಡಿದರು.
ಮತದಾರರ ಸಮಸ್ಯೆ ಆಲಿಸಿ ನಂತರ ಮಾತನಾಡಿದ ಡಾ.ಅಶ್ವಥ್‍ನಾರಾಯಣ, ಒಳಚರಂಡಿ ಸಮಸ್ಯೆ ಸಹಿತ ಮಲ್ಲೇಶ್ವರಂ ಕ್ಷೇತ್ರದ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಲು ಪ್ರಥಮ ಆದ್ಯತೆ ನೀಡುವುದಾಗಿ ಬರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಅವರು ರಾಮಯ್ಯ ಕಾಲೇಜು ಮುಂಭಾಗದಲ್ಲಿರುವ ಸಾರ್ವಜನಿಕ ಶೌಚಾಲಯಕ್ಕೆ ಅನಿರೀಕ್ಷಿತ ಭೇಟಿ ನೀಡಿ ಅದರ ಶುಚಿತ್ವ ಪರಿಶೀಲನೆ ಮಾಡಿ ಎಲ್ಲಾ ರೀತಿಯ ಅಗತ್ಯ ಶುಚಿತ್ವ ಕಾಪಡಿಕೊಳ್ಳುವಂತೆ ಸಿಬ್ಬಂದಿಗೆ ತಿಳಿಸಿ, ಸಾರ್ವಜನಿಕರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವ ಅಗತ್ಯದ ಕುರಿತು ಸಂದೇಶ ನೀಡಿದರು.

ಮನೆ ಮನೆ ಪ್ರಚಾರದ ಸಮಯದಲ್ಲಿ ವೆಂಕಟೇಶ್ವರ ಬಡಾವಣೆಯ ಅಭಿಮಾನಿಗಳು ಡಾ.ಅಶ್ವತ್ ನಾರಾಯಣ ಅವರ ಮೇಲೆ ಪುಷ್ಪವೃಷ್ಠಿ ಮಾಡುವ ಮೂಲಕ ವಿಶೇಷ ಗೌರವ ಸಲ್ಲಿಸಿದರು.

ಪ್ರಚಾರದ ಸಮಯದಲ್ಲಿ ನಡೆದ ಆಸಕ್ತಿದಾಯಕ ವಿಷಯವೆಂದರೆ ಡಾ.ಅಶ್ವಥ್ ನಾರಾಯಣ ಅವರು ಎ. ಜಿ.ಬಡಾವಣೆಯಲ್ಲಿ ಮನೆ ಮನೆ ಪ್ರಚಾರ ಮಾಡುತ್ತ ಪ್ರತಿಷ್ಠಿತ ಲಾಯರ್ ಮನೆ ಬರುತ್ತಾರೆ. ಡಾ.ಅಶ್ವತ್ ನಾರಾಯಣ ಅವರನ್ನು ಆದರದಿಂದ ಸ್ವಾಗತಿಸಿ ಉಪಚರಿಸಿದ ಹಿರಿಯ ನ್ಯಾಯವಾದಿ ನಂತರ ಮಾತನಾಡಿ, ನಾನು ಮೊದಲಿನಿಂದ ಕಾಂಗ್ರೆಸ್ ಪಕ್ಷದ ಬೆಂಬಲಿಗ ಆದರೆ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ನಿಮ್ಮ ವ್ಯಕ್ತಿತ್ವ ಮತ್ತು ಜನಪರ ಕಾಳಜಿ ಮೆಚ್ಚಿ ಈ ಚುನಾವಣೆಯಲ್ಲಿ ನಿಮ್ಮನ್ನು ಬೆಂಬಲಿಸುವುದಾಗಿ ಹೇಳುವ ಮೂಲಕ ಮಲ್ಲೇಶ್ವರಂ ಕ್ಷೇತ್ರದ ಮತದಾರರ ಮನಸ್ಥಿತಿಗೆ ಸಾಕ್ಷಿಯಾದರು.

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಕೇಶವ ಐತಾಲ್, ಬಿಬಿಎಂಪಿ ಸದಸ್ಯೆ ಸುಮಂಗಲಾ, ವಾರ್ಡ್ ಅಧ್ಯಕ್ಷ ಶಿವಣ್ಣ ಪ್ರಚಾರದಲ್ಲಿ ಡಾ.ಅಶ್ವತ್ ನಾರಾಯಣ ಅವರಿಗೆ ಸಾಥ್ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ