ಹೊಸದಿಲ್ಲಿ,ಏ.23
ಬಹು ಮೌಲ್ಯದ ನೋಟು ಅಮಾನ್ಯದ ಬಳಿಕ ದೇಶದಲ್ಲಿ ಎರಡನೇ ಬಾರಿಗೆ ನಗದು ಕೊರತೆ ಮುಂದುವರಿದಿರುವಂತೆಯೇ ಸುಮಾರು 3 ಲಕ್ಷ ಕೋಟಿಗೂ ಅಧಿಕ ಹಣ ಚಲಾವಣೆಯಾಗದೇ ಸ್ಥಗಿತವಾಗಿದೆ ಎಂಬ ಮಹತ್ತರ ಮಾಹಿತಿ ಇದೀಗ ಲಭ್ಯವಾಗಿದೆ.
ಮೂಲಗಳ ಪ್ರಕಾರ ತೆರಿಗೆ ಸಂಬಂಧಿತ ವಿವಿಧ ಪ್ರಕರಣಗಳಲ್ಲಿ ದೊರೆತ ಸುಮಾರು 3.2ಲಕ್ಷ ಕೋಟಿ ಹಣ ಚಲಾವಣೆಯಾಗದೇ ಸ್ಥಗಿತವಾಗಿದೆ. ತೆರಿಗೆ ಸಂಬಂಧಿತ ಪ್ರಕರಣಗಳ ವಿಚಾರಣೆಗಳು ನ್ಯಾಯಾಲಯದಲ್ಲಿದ್ದು, ಈ ಪ್ರಕರಣಗಳು ಇತ್ಯರ್ಥವಾಗುವವರೆಗೂ ಈ ಅಪಾರ ಪ್ರಮಾಣದ ನಗದು ಬಳಕೆಗೆ ಕಾನೂನು ತೊಡಕು ಉಂಟಾಗುತ್ತಿದೆ. ಈ ಪೈಕಿ ಸುಮಾರು 2.40 ಲಕ್ಷ ಕೋಟಿ ನೇರ ತೆರಿಗೆಗೆ ಸಂಬಂಧಿಸಿದ್ದಾಗಿದ್ದು, ಉಳಿದ 1.18 ಲಕ್ಷ ಕೋಟಿ ಹಣ ಪರೋಕ್ಷ ತೆರಿಗೆ ವ್ಯಾಪ್ತಿಯ ಹಣವಾಗಿದೆ ಎಂದು ತಿಳಿದುಬಂದಿದೆ.
ಅಂತೆಯೇ ಕಳೆದ 5 ರಿಂದ 10 ವರ್ಷಗಳಲ್ಲಿ ನೇರ ತೆರಿಗೆ ಸಂಬಂಧಿತ ಸುಮಾರು 33, 554 ಪ್ರಕರಣಗಳ ಬಾಕಿ ಉಳಿದಿದ್ದು, ಕಳೆದ 10 ವರ್ಷಗಳಲ್ಲಿ 4,230 ಹಳೆಯ ಪ್ರಕರಣಗಳು ಇನ್ನೂ ವಿಚಾರಣೆಯ ಹಂತದಲ್ಲಿವೆ. ಒಟ್ಟಾರೆ ತೆರಿಗೆ ಪಾವತಿ ಒಟ್ಟು ಪ್ರಕರಣಗಳ ಪೈಕಿ ಶೇ.85ಕ್ಕೂ ಅಧಿಕ ಪ್ರಮಾಣದ ಪ್ರಕರಣಗಳು ಇನ್ನೂ ವಿಚಾರಣೆ ಹಂತದಲ್ಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ತೆರಿಗೆ ಅಧಿಕಾರಿಗಳು ತೆರಿಗೆ ಬಾಕಿ ಉಳಿಕೆ ಸಂಬಂಧ ಸಣ್ಣ ಪ್ರಮಾಣದ ಬಾಕಿಯನ್ನು ಮಾತ್ರ ಕಲೆ ಹಾಕಲು ಸಾಧ್ಯ. ಉಳಿಕೆಯ ದೊಡ್ಡ ಮೊತ್ತದ ತೆರಿಗೆ ಹಣವನ್ನು ಸಂಗ್ರಹ ಮಾಡಲು ಕಷ್ಟವಾಗುತ್ತಿದೆ. ತೆರಿಗೆ ಬಾಕಿ ಪಾವತಿಗೆ ಕೇಂದ್ರ ಸರ್ಕಾರ ಅಧಿಕಾರಿಗಳಿಗೆ ಗುರಿ ನಿಗದಿ ಪಡಿಸುತ್ತಿದ್ದು, ಆದರೆ ತೆರಿಗೆ ಬಾಕಿ ವಸೂಲಿ ವಿವಿಧ ಕಾರಣಗಳಿಂದಾಗಿ ಕಷ್ಟವಾಗುತ್ತಿದೆ. ಆದರೂ ಅಧಿಕಾರಿಗಳು ತೆರಿಗೆದಾರರ ಕುರಿತಂತೆ ಸೂಕ್ಷ್ಮವಾಗಿ ಗಮನ ಹರಿಸುತ್ತಿದೆ ಎಂದು ಹೇಳಿದ್ದಾರೆ