ನದಿಗೆ ಉರುಳಿದ 18 ಯೋಧರಿದ್ದ ಸೇನಾ ಜೀಪ್ – ವಿಜಯಪುರ ಯೋಧ ಸೇರಿ ಮೂವರು ಹುತಾತ್ಮ

ಗುವಾಹಟಿ,ಏ.23

ಅಸ್ಸಾಂನ ಗುವಾಹಾಟಿಯಲ್ಲಿ ರಾತ್ರಿ ಗಸ್ತು ತಿರುಗುತ್ತಿದ್ದ ವೇಳೆ ಸೇನಾ ಜೀಪ್ ನದಿಗೆ ಬಿದ್ದು ಮೂವರು ಯೋಧರು ಹುತಾತ್ಮರಾಗಿದ್ದಾರೆ.

ಅರುಣಾಚಲ ಪ್ರದೇಶ ಹಾಗೂ ಆಸ್ಸಾಂ ರಾಜ್ಯಗಳ ಗಡಿಭಾಗದ ಬ್ರಹ್ಮಪುತ್ರ ಉಪ ನದಿಯಲ್ಲಿ ಈ ಅವಘಡ ಸಂಭವಿಸಿದೆ. ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯ ಸಾಡಿಯಾ ಎಂಬ ಚಾಪಕೋವ ಮೂಲದ ಮದ್ರಾಸ್ ರೆಜಿಮೆಂಟ್ ಟೆರಿಟೋರಿಯಲ್ ಪಡೆಯ 18 ಯೋಧರು ಜೀಪ್ ನಲ್ಲಿದ್ದರು. ಆದರೆ ರಾತ್ರಿ ಇಡುಲಿ ಮತ್ತು ಕಾಬಾಂಗ್ ಗ್ರಾಮಗಳ ನಡುವೆ ಇದ್ದ ನದಿ ವಾಹ ಉರುಳಿಬಿದ್ದಿದೆ.

ನದಿಗೆ ಬಿದ್ದ ಪರಿಣಾಮ ಮೂವರು ಯೋಧರು ಮೃತಪಟ್ಟಿದ್ದಾರೆ. ಇವರಲ್ಲಿ ಕರ್ನಾಟಕದ ವಿಜಯಪುರ ಜಿಲ್ಲೆಯ ಒಬ್ಬ ಯೋಧ ಕೂಡ ಸೇರಿದ್ದಾರೆ. ನಂತರ ಕೂಡಲೇ ಪೊಲೀಸ್ ಮತ್ತು ಸೇನೆಯವರು ರಕ್ಷಣಾ ಕಾರ್ಯಚರಣೆ ಮಾಡಿ 15 ಮಂದಿ ಯೋಧರನ್ನು ರಕ್ಷಿಸಿದ್ದಾರೆ. ಮೃತ ಮೂವರು ಯೋಧರಲ್ಲಿ ಒಬ್ಬರು ಇನ್ನು ಪತ್ತೆಯಾಗಿಲ್ಲ. ಅವರಿಗಾಗಿ ಶೋಧಕಾರ್ಯ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇನ್ನು ಈ ಅವಘಡದಿಂದ ಗಾಯಗೊಂಡ ಸೈನಿಕರಲ್ಲಿ ನಾಲ್ವರನ್ನು ಚಿಕಿತ್ಸೆಗಾಗಿ ಚಾಪಕೋವಾ ಫಸ್ಟ್ ರೆಫರಲ್ ಘಟಕಕ್ಕೆ ರವಾನಿಸಲಾಗಿದೆ. ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ರೋಣಿಹಾಳ ಗ್ರಾಮದ ಯೋಧ ಪರಶುರಾಮ ಖ್ಯಾತನ್ನವರ(32) ಮೃತ ಯೋಧ. ಇವರು 14 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಫೆಬ್ರುವರಿ 9 ರಂದು ಕೋಲ್ಹಾರ ಪಟ್ಟಣದಲ್ಲಿ ನಿರ್ಮಿಸಿದ ನೂತನ ಮನೆಯ ಗೃಹ ಪ್ರವೇಶ ಕಾರ್ಯಕ್ರಮ ಮುಗಿಸಿಕೊಂಡು ಫೆ. 11 ರಂದು ಸೇವೆಗಾಗಿ ತೆರಳಿದ್ದರು.

ಮೃತರ ಕುಟುಂಬಕ್ಕೆ ಸೇನೆಯ ಮೇಜರ್ ಕರಿಯಪ್ಪ ಅವರಿಂದ ಮಾಹಿತಿ ರವಾನೆ ಆಗಿದೆ. ಇತ್ತ ಯೋಧನ ಮನೆಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ