ಬೆಂಗಳೂರು, ಏ.21-ವಿಧಾನಸಭೆ ಚುನಾವಣೆ ಪ್ರಚಾರದ ಕಾವು ದಿನೇ ದಿನೇ ರಂಗೇರುತ್ತಿದೆ. ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ವಿವಿಧ ಕಸರತ್ತುಗಳನ್ನು ನಡೆಸುತ್ತಿದ್ದಾರೆ.
ಸ್ತ್ರೀಶಕ್ತಿ ಸಂಘಟನೆಗಳಿಗೆ, ಸ್ವಸಹಾಯ ಸಂಘಗಳಿಗೆ, ಮಹಿಳಾ ಸಮಾಜಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ ಹೆಚ್ಚಾಗಿದ್ದು, ಮಹಿಳೆಯರ ಮತ ಸೆಳೆಯಲು ವಿವಿಧ ರಾಜಕೀಯ ಪಕ್ಷದ ಅಭ್ಯರ್ಥಿಗಳು ಮಹಿಳಾ ಸ್ವಸಹಾಯ ಗುಂಪುಗಳ ಬಳಿ ಎಡತಾಕುತ್ತಿದ್ದಾರೆ.
ಗ್ರಾಮಗಳ ಬಹುತೇಕ ಮಹಿಳೆಯರು ಒಂದಲ್ಲ, ಒಂದು ಸ್ತ್ರೀಶಕ್ತಿ ಸಂಘಟನೆಗಳೊಂದಿಗೆ, ಸ್ವಸಹಾಯ ಗುಂಪುಗಳೊಂದಿಗೆ ಗುರುತಿಸಿಕೊಂಡಿರುತ್ತಾರೆ. ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಪಡೆದಿರುತ್ತಾರೆ. ಈ ಸಂಘಗಳು ಪ್ರಬಲವಾಗಿವೆ. ಇವರುಗಳ ಮತ ಸೆಳೆಯಲು ಮುಂದಾಗಿರುವ ರಾಜಕೀಯ ಪಕ್ಷಗಳ ಮುಖಂಡರು, ಸ್ತ್ರೀ ಶಕ್ತಿ ಸಂಘಗಳ ಮುಖಂಡರನ್ನು ಭೇಟಿಮಾಡಿ ನಿರಂತರ ಸಮಾಲೋಚನೆ ನಡೆಸುತ್ತಿದ್ದಾರೆ.
ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಹತ್ತಾರು ಮಹಿಳಾ ಸಂಘಟನೆಗಳಿವೆ. ಆ ಗುಂಪುಗಳಿಗೆ ಹಣ, ಪ್ರವಾಸ ಹಾಗೂ ವಿವಿಧ ಆಮಿಷಗಳನ್ನು ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಒಡ್ಡುತ್ತಿದ್ದಾರೆ. ಇದಲ್ಲದೆ, ಹಳ್ಳಿ ಹಳ್ಳಿಗಳಲ್ಲಿರುವ ಮಹಿಳಾ ಸಮಾಜಗಳು, ಸಣ್ಣ ಸಣ್ಣ ಸಂಘಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರನ್ನು ತಮ್ಮ ಪಕ್ಷಗಳಿಗೆ ಸೆಳೆಯುವ ಪ್ರಯತ್ನವನ್ನೂ ನಡೆಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಈ ಸಂಘಗಳಿಗೆ, ಸಂಘಟನೆಗಳಿಗೆ ಎಲ್ಲಿಲ್ಲದ ಬೇಡಿಕೆ ಬರುತ್ತದೆ. ಈಗಾಗಲೇ ವಿವಿಧ ರಾಜಕೀಯಪಕ್ಷಗಳ ಮುಖಂಡರು, ಆಕಾಂಕ್ಷಿಗಳು ಸಂಘಗಳ ಸದಸ್ಯರನ್ನು ವಿವಿಧೆಡೆ ಪ್ರವಾಸಕ್ಕೆ ಕಳುಹಿಸಿದ್ದಾರೆ. ಇನ್ನೂ ಹಲವೆಡೆ ಪ್ರವಾಸಕ್ಕೆ ಏರ್ಪಾಡು ಮಾಡುತ್ತಿದ್ದಾರೆ. ಪ್ರತಿ ಮತಕ್ಕೆ ಇಂತಿಷ್ಟು ಹಣ ಎಂದು ನಿಗದಿ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಅಲ್ಲದೆ ಈ ಸಂಘಗಳ ಮೂಲಕ ವಿವಿಧ ಉಡುಗೊರೆಗಳನ್ನು ಕೂಡ ನೀಡಿ ಮತ ಪಡೆಯುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಮಹಿಳೆಯರ ಮನವೊಲಿಸಿದರೆ ಆ ಮನೆಯ ಮತಗಳನ್ನೆಲ್ಲ ಪಡೆಯಬಹುದೆಂಬ ಲೆಕ್ಕಾಚಾರ ಅಭ್ಯರ್ಥಿಗಳದ್ದಾಗಿದೆ. ಹಾಗಾಗಿ ಸ್ತ್ರೀಶಕ್ತಿ ಸಂಘಟನೆಗಳನ್ನು ಗುರುತಿಸಿ, ಅವರ ಮನವೊಲಿಸಿ ಅವರ ಅಗತ್ಯತೆಗಳನ್ನು ಪೂರೈಸಿ ಸಂಘಗಳಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಿ ಮತ ಪಡೆಯಲು ಮುಂದಾಗಿರುವುದು ಕಂಡು ಬಂದಿದೆ.
ಸ್ವಸಹಾಯ ಗುಂಪುಗಳ ಮೂಲಕ ಸಾಲ ವಿತರಣೆ, ಆರೋಗ್ಯ ಸೌಲಭ್ಯ, ಕಡಿಮೆ ಬಡ್ಡಿದರದಲ್ಲಿ ಸಾಲ ಮುಂತಾದ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಈಗ ಹಲವು ಸದಸ್ಯರು ಮಾಡಿರುವ ಸಾಲವನ್ನು ಅಭ್ಯರ್ಥಿಗಳು ತೀರಿಸುವ ಮೂಲಕ ತಮ್ಮತ್ತ ಸೆಳೆದು ಮತ ಪಡೆಯಲು ಮುಂದಾಗಿರುವುದು ಕಂಡು ಬಂದಿದೆ.
ಅಲ್ಲದೆ, ಪ್ರತಿ ಎರಡು-ಮೂರು ದಿನಕ್ಕೊಮ್ಮೆ ಸ್ವಸಹಾಯ ಗುಂಪುಗಳು, ಸ್ತ್ರೀಶಕ್ತಿ ಸಂಘಟನೆಗಳು ಸಭೆ ಸೇರುತ್ತವೆ. ಈ ಸಭೆಯ ಮೂಲಕ ತಮ್ಮ ಅಭ್ಯರ್ಥಿಗಳು ತಮ್ಮತ್ತ ಸೆಳೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ನ ಬಹುತೇಕ ಎಲ್ಲಾ ಅಭ್ಯರ್ಥಿಗಳು ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಮಹಿಳಾ ಸ್ವಸಹಾಯ ಗುಂಪುಗಳು, ಸ್ತ್ರೀಶಕ್ತಿ ಸಂಘಟನೆಗಳ ಮೂಲಕ ಮತ ಸೆಳೆಯುವಲ್ಲಿ ಮುಂದಾಗಿದ್ದಾರೆ.
ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಅಕ್ರಮಗಳನ್ನು ತಡೆಗಟ್ಟಲು ಹತ್ತಾರು ಕ್ರಮಗಳನ್ನು ಜಾರಿಗೊಳಿಸಿದೆ. ಆದರೂ ಶೇ.50ಕ್ಕೂ ಹೆಚ್ಚು ಇರುವ ಮಹಿಳಾ ಮತದಾರರನ್ನು ಸೆಳೆಯಲು ವಿವಿಧ ರಾಜಕೀಯ ಪಕ್ಷಗಳು ಹಲವು ರೀತಿಯ ತಂತ್ರಗಳನ್ನು ಹೆಣೆಯುತ್ತಾರೆ.
ಬಹಿರಂಗವಾಗಿ ಆಮಿಷಗಳನ್ನು ಒಡ್ಡಿದರೆ, ಅಂದರೆ ಸೀರೆ, ಕುಕ್ಕರ್, ಮೂಗುತಿ ಮುಂತಾದ ವಸ್ತುಗಳನ್ನು ಉಡುಗೊರೆಯಾಗಿ ನೀಡಿದರೆ ಆಯೋಗದ ಅವಕೃಪೆಗೆ ಒಳಗಾಗಬೇಕಾಗುತ್ತದೆ ಎಂಬುದನ್ನು ಅರಿತಿರುವ ರಾಜಕೀಯ ಪಕ್ಷಗಳು ಸ್ತ್ರೀಶಕ್ತಿ ಸಂಘ, ಸ್ವಸಹಾಯ ಗುಂಪು, ಮಹಿಳಾ ಸಮಾಜಗಳ ಮೂಲಕ ಸಮಾಲೋಚನೆ ನಡೆಸಿ ಅವರಿಗೆ ಸೌಲಭ್ಯಗಳನ್ನು ಒದಗಿಸಿ ಮತ ಸೆಳೆಯುವ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ.