ನವದೆಹಲಿ, ಏ.21-ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ವಾಗ್ದಂಡನೆಗೆ ಅನುಮತಿ ಕೋರಿ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಸಲ್ಲಿಸಿರುವ ಅರ್ಜಿಯನ್ನು ಉಪ ರಾಷ್ಟ್ರಪತಿ ಮತ್ತು ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಗಂಭೀರವಾಗಿ ಪರಿಶೀಲಿಸುತ್ತಿದ್ದಾರೆ.
ಇದನ್ನು ಅಂಗೀಕರಿಸಬೇಕೆ ಅಥವಾ ತಿರಸ್ಕರಿಸಬೇಕೆ ಎಂಬ ಜಿಜ್ಞಾಸೆಯಲ್ಲಿ ಸಿಲುಕಿರುವ ನಾಯ್ಡು, ಹಿರಿಯ ಕಾನೂನು ತಜ್ಞರು ಮತ್ತು ವಿಷಯ ಪರಿಣಿತರ ಸಲಹೆಗಳನ್ನು ಪಡೆಯುತ್ತಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು ಯಾವುದೇ ಸಮಯ ಮಿತಿ ನಿಗದಿಗೊಳಿಸಿಲ್ಲ. ಆದರೆ ಈ ಹಿಂದೆ ಸಂಸದರು ನ್ಯಾಯಾಧೀಶರ ವಿರುದ್ಧ ವಾಗ್ದಂಡನೆ ಅರ್ಜಿ ಸಲ್ಲಿಸಿದಾಗ ಲೋಕಸಭಾಧ್ಯಕ್ಷರು/ರಾಜ್ಯಸಭೆಯ ಸಭಾಪತಿ 3 ರಿಂದ 13 ದಿನಗಳ ಕಾಲಾವಕಾಶ ಪಡೆದಿದ್ದರು ಎಂದು ಅಧಿಕಾರಿಗಳು ನಾಯ್ಡು ಅವರಿಗೆ ತಿಳಿಸಿದ್ಧಾರೆ.
ಈ ಹಿಂದೆ ನ್ಯಾಯಮೂರ್ತಿಗಳ ವಿರುದ್ಧ ಇಂಥ ಅರ್ಜಿಗಳು ಸಲ್ಲಿಕೆಯಾದಾಗ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯವರ ಸಲಹೆ ಪಡೆಯಲಾಗುತ್ತಿತ್ತು. ಆದರೆ ಈಗ ಅವರ (ಸಿಜೆಐ) ವಿರುದ್ಧವೇ ವಾಗ್ದಂಡನೆ ಮತ್ತು ಪದಚ್ಯುತಿಗೆ ರಾಜ್ಯ ಸಭೆಯ ಏಳು ಪಕ್ಷಗಳ 60ಕ್ಕೂ ಹೆಚ್ಚು ರಾಜ್ಯಸಭಾ ಸದಸ್ಯರು ನಿಲುವಳಿ ಸೂಚನೆ ನೋಟಿಸ್ ಜಾರಿಗೊಳಿಸಿರುವುದು ಜಿಜ್ಞಾಸೆಗೆ ಕಾರಣವಾಗಿದೆ. ಇದೇ ಕಾರಣಕ್ಕಾಗಿ ಕಾನೂನು ತಜ್ಞರ ಸಲಹೆಗಳನ್ನು ಪಡೆಯಲಾಗುತ್ತಿದೆ. ನೋಟಿಸ್ ಸ್ವೀಕರಿಸಿರುವ ರಾಜ್ಯಸಭೆಯ ಸಭಾಪತಿಯವರ ಕಚೇರಿ ಸಂಸದರ ಸಹಿಗಳನ್ನು ತಾಳೆ ನೋಡುವ ಪ್ರಕ್ರಿಯೆ ಪೂರ್ಣಗೊಳಿಸಿದ್ದು, ಇದನ್ನು ಸ್ವೀಕರಿಸಬೇಕೆ ಅಥವಾ ನಿರಾಕರಿಸಬೇಕೆ ಎಂಬ ಬಗ್ಗೆ ಪರಿಣಿತರ ಸಲಹೆಗಳನ್ನು ಪಡೆಯಲಾಗುತ್ತಿದೆ.