ಬೆಂಗಳೂರು, ಏ.19-ಮೇ 12 ರಂದು ನಡೆಯಲಿರುವ ರಾಜ್ಯ ವಿಧಾನಸಭೆಯ ಚುನಾವಣೆಗೆ ವಿವಿಧ ಪಕ್ಷಗಳ ಮುಖಂಡರು ಇಂದು ನಾಮಪತ್ರ ಸಲ್ಲಿಸಿದರು.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಉಪ ಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಇಂಧನ ಸಚಿವ ಡಿ.ಕೆ.ಶಿವಕುಮಾರ್, ಜೆಡಿಎಸ್ ಮುಖಂಡ ಎಚ್.ವಿಶ್ವನಾಥ್ ಸೇರಿದಂತೆ ಅನೇಕ ಘಟಾನುಘಟಿ ನಾಯಕರು ಇಂದು ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಮಾಜಿ ಮುಖ್ಯಮಂತ್ರಿ, ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಶಿಕಾರಿಪುರದಲ್ಲಿ ಭಾರೀ ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ಛತ್ತೀಸ್ಗಢ ಮುಖ್ಯಮಂತ್ರಿ ರಮಣ್ಸಿಂಗ್, ಕೇಂದ್ರ ಸಚಿವ ಅನಂತ್ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಅವರು ತಮ್ಮ ಕುಟುಂಬದವರೊಂದಿಗೆ ಹುಚ್ಚರಾಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ವಿಧಾನಪರಿಷತ್ನ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದಲ್ಲಿ ನಾಮಪತ್ರ ಸಲ್ಲಿಸಿದರೆ, ವಿಧಾನಸಭೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹುಬ್ಬಳ್ಳಿಯಲ್ಲಿ ನಾಮಪತ್ರಗಳನ್ನು ಸಲ್ಲಿಸಿದರು.
ಆರ್.ಅಶೋಕ್ ಪದ್ಮನಾಭನಗರ, ಬಿ.ಎನ್.ವಿಜಯ್ಕುಮಾರ್ ಜಯನಗರ, ಎಸ್.ಆರ್.ವಿಶ್ವನಾಥ್ ಯಲಹಂಕ, ವೈ.ಎ.ನಾರಾಯಣ ಸ್ವಾಮಿ ಹೆಬ್ಬಾಳದಲ್ಲಿ ನಾಮಪತ್ರ ಸಲ್ಲಿಸಿದರು.
ಅತ್ತ ಶೃಂಗೇರಿಯಲ್ಲಿ ಡಿ.ಎನ್.ಜೀವರಾಜ್, ಕೆಜಿಎಫ್ನಿಂದ ವೈ.ಎನ್.ಸಂಪಂಗಿ ಉಮೇದುವಾರಿಕೆ ಸಲ್ಲಿಸಿದರು. ಇನ್ನು ಹಲವು ಬಿಜೆಪಿ ಹುರಿಯಾಳುಗಳಾದ ರಮೇಶ್ಭೂಸನೂರ್ ಸಿಂಧಗಿಯಲ್ಲಿ , ಹಿರಿಯೂರಿನಲ್ಲಿ ಪೂರ್ಣಿಮಾ ಶ್ರೀನಿವಾಸ್, ಸುರಪುರದಲ್ಲಿ ನರಸಿಂಹನಾಯಕ್, ಬಸವಕಲ್ಯಾಣದಲ್ಲಿ ಮಲ್ಲಿಕಾರ್ಜುನ್ ಖೂಬಾ, ಯು.ಬಿ.ಬಣಕಾರ್ ಹಿರೇಕೆರೂರಿನಿಂದ , ಕಂಪ್ಲಿಯಲ್ಲಿ ಟಿ.ಎಚ್.ಸುರೇಶ್ಬಾಬು ಅವರು ಅಪಾರ ಬೆಂಬಲಿಗರೊಂದಿಗೆ ಆಗಮಿಸಿ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.
ಇತ್ತ ಕಾಂಗ್ರೆಸ್ನಲ್ಲಿ ಡಿ.ಕೆ.ಶಿವಕುಮಾರ್ ಕನಕಪುರದಲ್ಲಿ ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಸಾಗಿ ನಾಮಪತ್ರಗಳನ್ನೂ ಸಲ್ಲಿಸಿದರು.
ಇದಕ್ಕೂ ಮುನ್ನ ಅವರು ತಮ್ಮ ಪತ್ನಿ ಸಹೋದರರೊಂದಿಗೆ ಕಬ್ಬಾಳಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಜೆಡಿಎಸ್ ಪಕ್ಷದಲ್ಲಿ ಚಿಕ್ಕಬಳ್ಳಾಪುರದಿಂದ ಕೆ.ಪಿ.ಬಚ್ಚೇಗೌಡ, ಶ್ರೀನಿವಾಸಪುರದಿಂದ ವೆಂಕಟಶಿವಾರೆಡ್ಡಿ, ನಾಗಮಂಗಲದಿಂದ ಸುರೇಶ್ಗೌಡ, ಶ್ರೀರಂಗಪಟ್ಟಣದಿಂದ ರವೀಂದ್ರ ಶ್ರೀಕಂಠಯ್ಯ,ಶೃಂಗೇರಿಯಿಂದ ಎಚ್.ಜಿ.ವೆಂಕಟೇಶ್, ಚಿಂತಾಮಣಿಯಿಂದ ಕೃಷ್ಣಾರೆಡ್ಡಿ, ಹುಣಸೂರು ಕ್ಷೇತ್ರದಿಂದ ಮಾಜಿ ಸಚಿವ ಎಚ್.ವಿಶ್ವನಾಥ್ ಅವರು, ಮಾಗಡಿಯಿಂದ ಎ.ಮಂಜು, ಮಧುಗಿರಿಯಲ್ಲಿ ವೀರಭದ್ರಯ್ಯ, ಸೊರಬದಲ್ಲಿ ಮಧುಬಂಗಾರಪ್ಪ, ಚಿಕ್ಕನಾಯಕನಹಳ್ಳಿಯಿಂದ ಸಿ.ಬಿ.ಸುರೇಶ್ಬಾಬು ಅವರು ನಾಮಪತ್ರ ಸಲ್ಲಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡಿ ವಿಧಾನಸಭಾ ಕ್ಷೇತ್ರದಲ್ಲಿ ನಾಳೆ ನಾಮಪತ್ರ ಸಲ್ಲಿಸಲಿದ್ದು, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು 23 ರಂದು ಕೊರಟಗೆರೆಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.
ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಎಲ್ಲಾ ಪಕ್ಷಗಳವರು ತಮ್ಮ ಶಕ್ತಿ ಪ್ರದರ್ಶನ ಮಾಡಿದರು.
ಈಗಾಗಲೇ ರ್ಯಾಲಿ, ಯಾತ್ರೆ, ರೋಡ್ಶೋ ಮೂಲಕ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರವನ್ನು ರಾಜ್ಯಾದ್ಯಂತ ನಡೆಸುತ್ತಿದ್ದಾರೆ. ಇಂದು ನಾಮಪತ್ರ ಸಲ್ಲಿಕೆ ಸಂದರ್ಭದಲ್ಲೂ ಕೂಡ ಅಭ್ಯರ್ಥಿಗಳು ತಮ್ಮ ಶಕ್ತಿ ಪ್ರದರ್ಶನಕ್ಕಿಳಿದಿದ್ದರು. ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಸಾಗಿ ಬಂದು ನಾಮಪತ್ರ ಸಲ್ಲಿಸಿದ್ದು ವಿಶೇಷವಾಗಿತ್ತು.
ಇನ್ನು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಲ್ಲಿ ಬಂಡಾಯದ ಕಾವು ಆರಿಲ್ಲ. ಕಾಂಗ್ರೆಸ್ ಪಕ್ಷ 218 ಅಭ್ಯರ್ಥಿಗಳನ್ನು ಏಕಕಾಲದಲ್ಲಿ ಕಣಕ್ಕಿಳಿಸಿದೆ. ಹಲವೆಡೆ ಬಂಡಾಯದ ಭೀತಿ ಎದುರಾಗಿದೆ.
ಹಲವರು ಪಕ್ಷ ತೊರೆದು ಬೇರೆ ಪಕ್ಷಗಳತ್ತ ಮುಖ ಮಾಡಿದ್ದಾರೆ. ಬಿಜೆಪಿ ಪಕ್ಷ ಎರಡು ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಇನ್ನೂ ಒಂದು ಹಂತದ ಪಟ್ಟಿ ಬಿಡುಗಡೆ ಮಾಡಬೇಕಿದೆ. ಈ ಪಕ್ಷದಲ್ಲೂ ಹಲವೆಡೆ ಬಂಡಾಯದ ಭೀತಿ ಎದುರಾಗಿದೆ.
ಕೆಲವರು ಪಕ್ಷ ತೊರೆದಿದ್ದರೆ, ಮತ್ತೆ ಕೆಲವರು ಬಂಡಾಯದ ಬಾವುಟ ಹಾರಿಸಿದ್ದಾರೆ. ಎರಡೂ ರಾಜಕೀಯ ಪಕ್ಷಗಳ ಅನೇಕ ಅತೃಪ್ತರು ಜೆಡಿಎಸ್ ಪಕ್ಷ ಸೇರಿದ್ದಾರೆ. ಎರಡೂ ಪಕ್ಷಗಳ ಅಸಮಾಧಾನದ ಲಾಭ ಜೆಡಿಎಸ್ಗೆ ಆಗುವುದೇ ಎಂಬ ರಾಜಕೀಯ ಲೆಕ್ಕಾಚಾರ ಒಂದೆಡೆ ನಡೆಯುತ್ತಿದೆ.
ಮತ್ತೊಂದೆಡೆ ಅತೃಪ್ತರ ಮನವೊಲಿಕೆ ಕೆಲಸವೂ ಮುಂದುವರೆದಿದೆ. ಒಟ್ಟಾರೆ ನಾಮಪತ್ರ ಹಿಂಪಡೆಯುವ ಕೊನೆಯ ಗಡುವಿನವರೆಗೂ ಬಂಡಾಯಗಾರರ ಮನವೊಲಿಸುವ ಯತ್ನವನ್ನು ರಾಜಕೀಯ ಪಕ್ಷಗಳ ಮುಖಂಡರು ಮಾಡುತ್ತಾರೆ. ಇದಕ್ಕೆ ಮನ್ನಣೆ ನೀಡದಿದ್ದರೆ ಕ್ರಮಕ್ಕೆ ಮುಂದಾಗುತ್ತಾರೆ.