ಲಂಡನ್:ಏ-19:ಉಗ್ರವಾದಕ್ಕೆ ಬೆಂಬಲ ನೀಡಿ ಭಯೋತ್ಪಾದಕರನ್ನು ರಫ್ತು ಮಾಡುತ್ತಿರುವ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಇನ್ನು ಮುಂದೆ ಇಂತಹ ಹುನ್ನಾರಗಳು ನಡೆಯುವುದಿಲ್ಲ ಎಂದು ಹೇಳಿದ್ದಾರೆ.
ಲಂಡನ್ ವೆಸ್ಟ್ಮಿನ್ಸ್ಟರ್ ಸೆಂಟ್ರಲ್ ಹಾಲ್ನಲ್ಲಿ ನಡೆದ ‘ಭಾರತ್ ಕಿ ಬಾತ್, ಸಬ್ಕೆ ಸಾಥ್’ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ, ಕೆಲವರು ಭಯೋತ್ಪಾದಕರನ್ನು ರಫ್ತು ಮಾಡುವ ಕಾರ್ಖಾನೆ ನಡೆಸುತ್ತಿದ್ದಾರೆ. ಇನ್ನು ಮುಂದೆ ಅಂಥವರು ತಮ್ಮ ಧೋರಣೆ ಬದಲಿಸಿಕೊಳ್ಳುವುದು ಅನಿವಾರ್ಯ. ಇಲ್ಲದಿದ್ದರೆ ಅವರಿಗೆ ಅರ್ಥವಾಗುವ ಭಾಷೆಯಲ್ಲಿಯೇ ಉತ್ತರಿಸಬೇಕಾಗುತ್ತದೆ ಎಂದು ಸರ್ಜಿಕಲ್ ದಾಳಿ ಕುರಿತಾಗಿ ಹೇಳಿದರು.
ಸರ್ಜಿಕಲ್ ದಾಳಿಯ ಬಗ್ಗೆ ಪ್ರೇಕ್ಷಕರಿಂದ ಬಂದ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ, ಸಾಕಷ್ಟು ಸಹನೆ ತೆಗೆದುಕೊಂಡ ಬಳಿಕವೇ ಅಂತಹದ್ದೊಂದು ಕಠಿಣ ಕ್ರಮ ಕೈಗೊಳ್ಳಲಾಯಿತು. ಸರ್ಜಿಕಲ್ ದಾಳಿ ಬಗ್ಗೆ ಭಾರತಕ್ಕಿಂತ ಮೊದಲೇ ಪಾಕಿಸ್ತಾನಕ್ಕೆ ತಿಳಿಸಲಾಗಿತ್ತು, ಮೊದಲು ಪಾಕಿಸ್ತಾನಕ್ಕೆ ಕರೆ ಮಾಡಿ ನಾವು ಏನು ಮಾಡಿದ್ದೇವೆ. ಜೊತೆಗೆ ಸಮಯವಿದ್ದರೆ ಅವರು ಬಂದು ಮೃತದೇಹಗಳನ್ನು ಕೊಂಡೊಯ್ಯಲಿ ಎಂದು ತಿಳಿಸಬೇಕೆಂದು ಕರೆ ಮಾಡಿದ್ದೆವು. ಅಂದು ಬೆಳಗ್ಗೆ 11 ಗಂಟೆಯಿಂದ ಕರೆ ಮಾಡಿದರೂ ಹೆದರಿಕೆಯಿಂದ ಪಾಕ್ ಕರೆ ಸ್ವೀಕರಿಸಲಿಲ್ಲ. ಮಧ್ಯಾಹ್ನ 12 ಗಂಟೆಗೆ ಕರೆ ಸ್ವೀಕರಿಸಿದಾಗ ವಿಷಯ ತಿಳಿಸಿ, ನಂತರ ಭಾರತೀಯ ಮಾಧ್ಯಮಗಳಿಗೆ ಸರ್ಜಿಕಲ್ ದಾಳಿ ಬಗ್ಗೆ ಮಾಹಿತಿ ನೀಡಿದೆವು ಎಂದು ತಿಳಿಸಿದರು.
ನನ್ನ ಭಾರತೀಯ ಸೇನೆಯ ಬಗ್ಗೆ ನನಗೆ ಹೆಮ್ಮೆ ಇದೆ. 2016ರಲ್ಲಿ ಉರಿ ಸೆಕ್ಟರ್ ನಲ್ಲಿ ಕೆಲ ಹೇಡಿಗಳು ಗಡಿಯಲ್ಲಿನ ಟೆಂಟ್ ನಲ್ಲಿ ಮಲಗಿದ್ದ ನಮ್ಮ ಸೈನಿಕರ ಮೇಲೆ ದಾಳಿ ಮಾಡಿ ಸುಮಾರು 19 ಸೈನಿಕರನ್ನು ಬಲಿ ಪಡೆದಿದ್ದರು. 19 ಜನ ಸೈನಿಕರ ಬಲಿಯಾದ ಬಳಿಕವೂ ನಾವು ಶಾಂತವಾಗಿರಬೇಕಿತ್ತೇ? ಇಂತಹ ಹೀನ ಕೃತ್ಯಗಳಿಗೆ ನಾವು ಕಠಿಣವಾಗಿಯೇ ಉತ್ತರಿಸಬೇಕಿತ್ತು. ಇಡೀ ಸರ್ಜಿಕಲ್ ಸ್ಟ್ರೈಕ್ ಪೂರ್ವ ನಿಗದಿತ ಯೋಜನೆಯಾಗಿತ್ತು. ಅಲ್ಲದೆ ರಹಸ್ಯ ಯೋಜನೆ ಕೂಡ ಆಗಿತ್ತು. ಭಾರತೀಯ ಸೇನೆ ತಾನೇ ಖುದ್ಧು ಸುದ್ದಿಗೋಷ್ಠಿ ಕರೆದು ಮಾಹಿತಿ ನೀಡುವವರೆಗೂ ಈ ಮಾಹಿತಿ ಯಾರಿಗೂ ತಿಳಿದಿರಲಿಲ್ಲ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಬೀಡು ಬಿಟ್ಟಿದ್ದ ಉಗ್ರರ ಮೇಲೆ ಸೇನೆ ದಾಳಿ ನಡೆಸಿತ್ತು. ಈ ವೇಳೆ ನೂರಾರು ಉಗ್ರರು ಹತರಾಗಿದ್ದರು. ಶೇ.100 ಕಾರ್ಯಾಚರಣೆ ಯಶಸ್ವಿಯಾಗಿತ್ತು.
ನಮ್ಮ ಸೈನಿಕರು ಪೂರ್ವ ಯೋಜನೆಯಂತೆ ಯಶಸ್ವಿಯಾಗಿ ಕಾರ್ಯಾಚರಣೆ ಪೂರ್ಣಗೊಳಿಸಿ, ಸೂರ್ಯೋದಯದ ಒಳಗೆ ಸುರಕ್ಷಿತರಾಗಿ ವಾಪಸ್ ಆಗಿದ್ದರು. ಕಾರ್ಯಾಚರಣೆ ಬಳಿಕ ಪಾಕಿಸ್ತಾನ ಸರ್ಕಾರಕ್ಕೆ ಕಾರ್ಯಾಚರಣೆ ಕುರಿತು ಮಾಹಿತಿ ನೀಡುವಂತೆ ನಾನು ಸೇನಾಧಿಕಾರಿಗಳಿಗೆ ಸೂಚನೆ ನೀಡಿದ್ದೆ. ಆ ಬಳಿಕವೇ ನಾವು ಮಾಧ್ಯಮಗಳಿಗೆ ತಿಳಿಸಿದ್ದು ಎಂದು ವಿವರಿಸಿದರು.
ಇದೇ ವೇಳೆ ಪ್ರಧಾನಿ ಮೋದಿ, ನೋಟು ನಿಷೇಧ, ತಮ್ಮ ರಾಜಕೀಯ ಮತ್ತು ವೈಯುಕ್ತಿಕ ಜೀವನ, ಭಾರತೀಯ ರೈಲ್ವೇ, ಮಹಿಳೆಯರ ಸುರಕ್ಷತೆ, ಕೇಂದ್ರದ ಆಯುಷ್ಮಾನ್ ಭಾರತ್ ಯೋಜನೆ, ಭಗವಾನ್ ಶ್ರೀ ಬಸವೇಶ್ವರ, ಅಭಿವೃದ್ಧಿ, ಉದ್ಯೋಗ ಸೃಷ್ಟಿ ಸೇರಿದಂತೆ ಹಲವು ವಿಚಾರಗಳ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದರು.
PM Narendra Modi in London,addressing a town hall event, ‘Bharat Ki Baat Sab ke Saath’