ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯರಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭೇಟಿ

ಬೆಂಗಳೂರು, ಏ.17-ಎರಡನೇ ಪಟ್ಟಿಯಲ್ಲೂ ತಮಗೆ ಟಿಕೆಟ್ ಸಿಗದೆ ಕಸಿವಿಸಿಗೊಂಡಿರುವ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಬೆಳ್ಳಂಬೆಳಗ್ಗೆಯೇ ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸಕ್ಕೆ ತಮ್ಮ ಬೆಂಬಲಿಗರ ಜೊತೆ ಆಗಮಿಸಿದ ಬೋಪಯ್ಯ ಅವರು ಬಿಎಸ್‍ವೈ ಜೊತೆ 10 ನಿಮಿಷಗಳ ಕಾಲ ರಹಸ್ಯ ಮಾತುಕತೆ ನಡೆಸಿದರು.

ತಮಗೆ ಯಾವ ಕಾರಣದಿಂದ ಎರಡನೇ ಪಟ್ಟಿಯಲ್ಲೂ ವರಿಷ್ಠರು ಟಿಕೆಟ್ ನೀಡುತ್ತಿಲ್ಲ. ಪ್ರಚಾರಕ್ಕೆ ಇನ್ನು ಕೇವಲ 25 ದಿನಗಳಿವೆ. ಕ್ಷೇತ್ರದಲ್ಲಿ ನಾನು ಹೇಗೆ ಮತಯಾಚನೆ ಮಾಡಬೇಕು. ಹಾಲಿ ಶಾಸಕನಾದ ನನಗೆ ಟಿಕೆಟ್ ನಿರಾಕರಿಸಲು ಕಾರಣವಾದರೂ ತಿಳಿಸಿ ಎಂದು ಮನವಿ ಮಾಡಿದ್ದಾರೆ.

ಸಮೀಕ್ಷೆಯಲ್ಲಿ ನಿಮ್ಮ ಹೆಸರು ಹಿಂದೆ ಬಿದ್ದಿದ್ದರಿಂದ ವರಿಷ್ಠರು ಟಿಕೆಟ್ ಘೋಷಣೆ ಮಾಡಿಲ್ಲ. ನೀವು ಆತಂಕಕ್ಕೆ ಒಳಗಾಗಬೇಡಿ. ಮೂರನೇ ಪಟ್ಟಿಯಲ್ಲಿ ನಿಮ್ಮ ಹೆಸರು ಇರಲಿದೆ. ಕ್ಷೇತ್ರಕ್ಕೆ ಹೋಗಿ ಪ್ರಚಾರದಲ್ಲಿ ತೊಡಗಿಕೊಳ್ಳಿ ಎಂದು ಬಿಎಸ್‍ವೈ ಸಮಾಧಾನಪಡಿಸಿದರು.

ಆದರೂ ಆತಂಕಕ್ಕೊಳಗಾದ ಬೋಪಯ್ಯ ಬಿ ಫಾರಂ ನೀಡಬೇಕೆಂದು ಮನವಿ ಮಾಡಿದರು. ಮೂರನೇ ಪಟ್ಟಿಯಲ್ಲಿ ನಿಮ್ಮ ಹೆಸರು ಇರುತ್ತದೆ ಎಂದ ಮೇಲೆ ತಲೆಕೆಡಿಸಿಕೊಳ್ಳಬೇಡಿ. ಇಂದೇ ವಿರಾಜಪೇಟೆಗೆ ಹೊರಡಿ ಎಂದು ಯಡಿಯೂರಪ್ಪ ಹೇಳಿದ್ದರಿಂದ ಬೋಪಯ್ಯ ನಿಟ್ಟುಸಿರು ಬಿಟ್ಟುಕೊಂಡು ಧವಳಗಿರಿಯಿಂದ ನಿರ್ಗಮಿಸಿದರು.

ವಾಯುವಿಹಾರದಲ್ಲಿ ಕಾಲಿಗೆ ಬಿದ್ದ ಬೆಂಬಲಿಗ
ಇನ್ನು ಯಡಿಯೂರಪ್ಪ ಬೆಳಗ್ಗೆ ಸ್ಯಾಂಕಿ-ಟ್ಯಾಂಕಿ ಬಳಿ ವಾಯುವಿಹಾರಕ್ಕೆ ಬಂದಿದ್ದ ವೇಳೆ ಬಸವನಬಾಗೇವಾಡಿಯಿಂದ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿಗೆ ಟಿಕೆಟ್ ನೀಡಬೇಕೆಂದು ಬೆಂಬಲಿಗನೊಬ್ಬ ಕಾಲಿಗೆ ಬಿದ್ದ ಪ್ರಸಂಗವು ನಡೆಯಿತು.

ಇದ್ದಕ್ಕಿದ್ದಂತೆ ಎದುರಿಗೆ ಬಂದ ಬೆಂಬಲಿಗ ಯಡಿಯೂರಪ್ಪನವರ ಕಾಲಿಗೆ ಬಿದ್ದು, ಈ ಬಾರಿ ನೀವು ಬಸವನಬಾಗೇವಾಡಿಯಿಂದ ಬೆಳ್ಳುಬ್ಬಿಯವರಿಗೆ ಟಿಕೆಟ್ ನೀಡಿ, ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಕಾಲು ಹಿಡಿದುಕೊಂಡ. ಇದರಿಂದ ತುಸು ವಿಚಲಿತರಾದ ಬಿಎಸ್‍ವೈ ಮೂರನೇ ಪಟ್ಟಿಯಲ್ಲಿ ಅವರಿಗೆ ಟಿಕೆಟ್ ನೀಡುತ್ತೇವೆ. ನೀವು ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ