ಡಾ.ಮಂಜುಳಾ ಗೋವರ್ಧನ ಮೂರ್ತಿ ಅವರಿಗೆ ಸಿಂಧಗಿ ಮತ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನೀಡಲು ಒತ್ತಾಯ

ಸಿಂಧಗಿ, ಏ.15- ಡಾ.ಮಂಜುಳಾ ಗೋವರ್ಧನ ಮೂರ್ತಿ ಅವರಿಗೆ ಸಿಂಧಗಿ ಮತ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿ ತಾಲೂಕಿನ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಯುವ ಮುಖಂಡ ಮಲ್ಲಿಕಾರ್ಜುನ ಸಾವಳಸಂಗ, ರಮೇಶ ಮೋರಟಗಿ,ಅರುಣಕುಮಾರ ಸಿಂಗೆ, ನಿಂಗಪ್ಪ ಬಿಸನಾಳ ಹಾಗೂ ಇತರರು ಮಾತನಾಡಿ, ಡಾ. ಮಂಜುಳಾ ಅವರು ಕ್ಷೇತ್ರದ ಜತೆ ಸುಮಾರು ವರ್ಷಗಳ ಸಂಪರ್ಕದಲ್ಲಿದ್ದವರು. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಮತ್ತು ಸಂಘಟನೆಗೆ ಪ್ರಾಮಾಣಿಕ ಕಾರ್ಯ ಮಾಡಿ ಉಚಿತ ಸಾಮೂಹಿಕ ವಿವಾಹ ಮಾಡಿ ಸಾಮಾಜಿಕ ಕಾರ್ಯ ನಿರ್ವಹಿಸಿದ್ದಾರೆ ಎಂದರು.

ರಾಜ್ಯ ನಾಯಕರು ಟಿಕೆಟ್ ನೀಡುವ ಭರವಸೆ ನೀಡಿ ಕೊನೆ ಗಳಿಗೆಯಲ್ಲಿ ಸಚಿವ ಎಂ.ಬಿ.ಪಾಟೀಲ ಅವರ ಕೈವಾಡದಿಂದ ಟಿಕೆಟ್ ತಪ್ಪಿಸುವ ಕಾರ್ಯ ನಡೆಯುತ್ತಿದೆ. ಸಿಂಧಗಿ ಕ್ಷೇತ್ರದಲ್ಲಿ ಹಾಲು ಮತಕ್ಕೆ ಸಾಮಾಜಿಕ ನ್ಯಾಯದಡಿ ಟಿಕೆಟ್ ನೀಡಬೇಕಿತ್ತು. ಆದರೆ, ಇಲ್ಲಿಯವರೆಗೂ ಕಾಂಗ್ರೆಸ್ ಹಾಲುಮತಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.
ಸಚಿವ ಎಂ.ಬಿ.ಪಾಟೀಲ್ ತನ್ನ ಹಿಡಿತದಲ್ಲಿ ಜಿಲ್ಲೆ ಇರಬೇಕು ಎಂಬ ಮನೋಭಾವದಿಂದ ಕುತಂತ್ರ ರಾಜಕಾರಣದ ಬುದ್ಧಿ ಬಳಸಿ ಬೇರೊಬ್ಬರಿಗೆ ಟಿಕೆಟ್ ನೀಡಲು ಮುಂದಾಗಿದ್ದಾರೆ.

ಕ್ಷೇತ್ರದಲ್ಲಿ ಕೆಪಿಸಿಸಿ ಇತ್ತೀಚಿಗಷ್ಟೇ ಮಾಡಿರುವ ಗುಪ್ತ ಸಮೀಕ್ಷೆಯಲ್ಲಿ ಡಾ.ಮಜುಳಾ ಅವರ ಹೆಸರು ಪ್ರಬಲವಾಗಿ ಕೇಳಿಬಂದಿತ್ತು. ಈ ಆಧಾರದಲ್ಲಿಯೇ ಅವರಿಗೆ ಟಿಕೆಟ್ ನೀಡಬೇಕೆ ಹೊರತು ಸಚಿವರ ಒಡನಾಟದಲ್ಲಿರುವವರಿಗೆ ಟಿಕೆಟ್ ನೀಡುವುದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿನ ಎಂಟು ಕ್ಷೇತ್ರದಲ್ಲಿನ ಎಲ್ಲಿಯೂ ಹಿಂದುಳಿದ ವರ್ಗಕ್ಕೆ ಒಂದೂ ಟಿಕೆಟ್ ನೀಡಿಲ್ಲ. ಸಿಂದಗಿ ಕ್ಷೇತ್ರದಲ್ಲಿ ಹಾಲುಮತದ ಸಮಾಜದ ಪ್ರತಿನಿಧಿಯಾಗಿ ಮಂಜುಳಾ ಮುಂದೆ ಬರುತ್ತಿರುವುದು ಸಚಿವರಿಗೆ ಮತ್ತು ಕೆಲವರಿಗೆ ಸಹಿಸಲಾಗುತ್ತಿಲ್ಲ ಎಂದು ದೂರಿದರು.
ಪ್ರತಿಭಟನೆಯಲ್ಲಿ ಹಾಲುಮತದ ತಾಲೂಕು ಅಧ್ಯಕ್ಷ ಶರಣಪ್ಪ ಹಿರೇ ಕುರುಬರ, ಕೆಂಚಪ್ಪ ಪೂಜಾರಿ, ಸಿದ್ದು ಕೇರಿಗೊಂಡ, ಮಲ್ಲಕಪ್ಪ ಜೇರಟಗಿ, ಹಸೀಮ ಆಳಂದ, ಪ್ರಭುಲಿಂಗ ಪೂಜಾರಿ, ಬಸು ಬಿರಾದಾರ, ಸಚೀನ ಪೂಜಾರಿ, ಸಲೀಂ ಕಣ್ಣಿ, ವಿರೇಶ ಕೋಟಾರಗಸ್ತಿ, ಶಿವಯೋಗಿ ಬಸ್ತಿಹಾಳ, ನಿಂಗಪ್ಪ ಬಿರಾದಾರ, ಶಂಕ್ರೆಪ್ಪ ಒಗ್ಗಿ, ಮಡ್ಡು ಸೊನ್ನದ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ