ಬೆಂಗಳೂರು,ಆ.9- ಕರ್ನಾಟಕದಲ್ಲಿ ರೂಪಾಂತರಿ ವೈರಸ್ನಿಂದ 20 ಲಕ್ಷ ಸೋಂಕು ಪ್ರಕರಣಗಳು ದಾಖಲಾಗಬಹುದೆಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದ ಪ್ರಸ್ತುತ ಕೋವಿಡ್ ಪರಿಸ್ಥಿತಿಯನ್ನು ಅವಲೋಕಿಸಿರುವ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಸಂಶೋಧಕರು 972 ಸನ್ನಿವೇಶಗಳನ್ನು ವಿಶ್ಲೇಷಿಸುವ ಮೂಲಕ ಕರ್ನಾಟಕದಲ್ಲಿ ಕೋವಿಡ್ ಮೂರನೇ ಅಲೆಯನ್ನು ಊಹಿಸಲು ಗಣಿತದ ಮಾದರಿಯನ್ನು ಬಳಸಿಕೊಂಡಿದ್ದಾರೆ.
ಅದರಂತೆ ಸೆಪ್ಟೆಂಬರ್ನಿಂದ ಅಕ್ಟೋಬರ್ ವೇಳೆಗೆ ಒಂದು ಹೊಸ ವೈರಸ್ ರೂಪಾಂತರವು ಹೊರಹೊಮ್ಮಿದರೆ ಮತ್ತು ಪ್ರಸ್ತುತ ಲಸಿಕೆ ಪ್ರಮಾಣ ಮುಂದುವರಿಸಿದರೂ ಸೋಂಕು ಪ್ರಕರಣಗಳ ಸಂಖ್ಯೆ ಬರೋಬ್ಬರಿ 20 ಲಕ್ಷಗಳಾಗಿರುತ್ತದೆ.
ಆಗ ರಾಜ್ಯ ಸರ್ಕಾರವು ಲಾಕ್ಡೌನ್ ಸಹಿತ ಎಲ್ಲಾ ಕೋವಿಡ್ ನಿರ್ಬಂಧಗಳನ್ನು ಮರಳಿ ತರಬೇಕಾಗುತ್ತದೆ. ಅಂತೆಯೇ ರಾಜ್ಯದಲ್ಲಿ ವ್ಯಾಕ್ಸಿನೇಷನ್ ವೇಗವನ್ನು ಹೆಚ್ಚಿಸದಿದ್ದರೆ, ರಾಜ್ಯವು ಇದೇ ಅವಧಿಯಲ್ಲಿ 7ರಿಂದ 8 ಲಕ್ಷಗಳ ಸಕ್ರಿಯ ಕೇಸ್ಗಳು ಎದರಾಗಬಹುದೆಂದು ಅಭಿಪ್ರಾಯಪಟ್ಟಿದೆ.
ಈ ಮಾದರಿಯಲ್ಲಿ ಕೋವಿಡ್ ಹರಡುವಿಕೆ ಮತ್ತು ಕಳೆದುಹೋದ ದತ್ತಾಂಶದ ವಿಷಯದಲ್ಲಿ ಹಲವಾರು ಅನಿಶ್ಚಿತತೆಗಳ ಕಾರಣದಿಂದಾಗಿ, ನಾವು ಮೂರನೇ ಅಲೆ ಮೇಲೆ ಪ್ರಭಾವ ಬೀರುವ ಹಲವಾರು ಪ್ರಮುಖ ನಿಯತಾಂಕಗಳನ್ನು ಚಿತ್ರಿಸಿದ್ದೇವೆ ಮತ್ತು ವಿಭಿನ್ನ ಸನ್ನಿವೇಶಗಳನ್ನು ನಿರ್ಮಿಸಲು ಅವುಗಳನ್ನು ಬದಲಿಸಿದ್ದೇವೆ ಎಂದು ಹೇಳಿದೆ.
ಪ್ರಕರಣದಿಂದ ಸೋಂಕಿನ ಅನುಪಾತ, ಜನಸಂಖ್ಯೆಯಲ್ಲಿ ಪ್ರತಿಕಾಯ ಕ್ಷೀಣಿಸುವ ಅವಧಿ, ಅದು 1/3, 2/3 ಮತ್ತು ಪೂರ್ಣ ಜನಸಂಖ್ಯೆಯಲ್ಲಿ ಕ್ಷೀಣಿಸಿದರೆ ಅದರಿಂದಾಗುವ ವಿಭಿನ್ನ ಸನ್ನಿವೇಶಗಳು, ಜುಲೈ-ಅಂತ್ಯದಿಂದ ನವೆಂಬರ್ವರೆಗೆ ವಿವಿಧ ತಿಂಗಳಲ್ಲಿ ರೋಗನಿರೋಧಕ-ತಪ್ಪಿಸಿಕೊಂಡ ವೈರಸ್ ರೂಪಾಂತರಗಳ ಹೊರಹೊಮ್ಮುವಿಕೆ, ಹೊಸ ರೂಪಾಂತರಗಳಿಂದಾಗಿ ಮರುಸೋಂಕು ಮತ್ತು ದಿನಕ್ಕೆ ಲಸಿಕೆ ದರಗಳು ಒಂದೇ ಆಗಿದ್ದರೆ ಮತ್ತು ಪ್ರಸ್ತುತ ಸನ್ನಿವೇಶದಿಂದ ಶೇ.50 ಮತ್ತು 100ರಷ್ಟು ಹೆಚ್ಚಳ ಹೀಗೆ ಏಳು ಪ್ರಮುಖ ನಿಯತಾಂಕಗಳಲ್ಲಿ ಮಾದರಿಯನ್ನು ತಯಾರಿಸಲಾಗಿದೆ.
ಈ ಏಳು ನಿಯತಾಂಕಗಳನ್ನು ಇಟ್ಟುಕೊಂಡು ಮೂರು ಅಂಶಗಳನ್ನು ಪರಿಗಣಿಸಲಾಗಿದೆ. ರಾಜ್ಯದಲ್ಲಿ 3ನೇ ಅಲೆಯ ಸಾಧ್ಯತೆಗಳು, ಉತ್ತುಂಗದ ದಿನಾಂಕ ಮತ್ತು ಆ ಸಮಯದಲ್ಲಿ ವಯೋಮಾನದ ಕೇಸ್ ಲೋಡ್ ಎಂಬ ಮೂರು ಅಂಶಗಳನ್ನು ವಿವರಿಸಲಾಗಿದೆ.
7ರಿಂದ 3 ಪ್ರಮುಖ ನಿಯತಾಂಕಗಳನ್ನು ಗಮನಿಸಲಾಗಿದ್ದು, ಪ್ರಾಥಮಿಕವಾಗಿ ಕೋವಿಡ್-ಸೂಕ್ತವಾದ ನಡವಳಿಕೆಯು ಅತ್ಯಂತ ಮಹತ್ವದ್ದಾಗಿದೆ, ಎರಡನೆಯದು ಹೊಸ ರೂಪಾಂತರದ ಸಮಯ ಮತ್ತು ಮೂರನೆಯದು ವ್ಯಾಕ್ಸಿನೇಷನ್ ದರ.
ಸೂಕ್ತ ಮಾನದಂಡಗಳ ಕಡ್ಡಾಯ ಪಾಲನೆ: 3ನೇ ಅಲೆ ತಗ್ಗಿಸಲು ಉತ್ತಮ ಸಾಮಾಜಿಕ ದೂರ ಹಾಗೂ ಲಸಿಕೆ ಮುಖ್ಯವಾಗಿದೆ ಎಂದು ಅಧ್ಯಯನ ಹೇಳಿದೆ.
ಮುಂದಿನ ಮೂರರಿಂದ ಆರು ತಿಂಗಳವರೆಗೆ ನಾವು ಜಾಗರೂಕರಾಗಿರಬೇಕು. ಜೀನೋಮ್ ಸೀಕ್ವೆನ್ಸಿಂಗ್ ಮತ್ತು ಟೆಸ್ಟಿಂಗ್ ಮುಖ್ಯವಾಗಿದೆ. ನಾವು ನವೆಂಬರ್ವರೆಗೆ ಹೊಸ ರೂಪಾಂತರಗಳ ಹೊರಹೊಮ್ಮುವಿಕೆಯನ್ನು ತಡೆಗಟ್ಟಿದರೆ ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕ ಉತ್ತುಂಗ ಸ್ಥಿತಿಗೆ ಏರುವುದನ್ನು ತಪ್ಪಿಸಬಹುದು.
ಜವಾಬ್ದಾರಿಯುತ ನಡೆಯಿಂದ ಸೋಂಕು ನಿಯಂತ್ರಣ:
ಆಗಸ್ಟ್ನಲ್ಲಿ ಹೊಸ ರೂಪಾಂತರಿ ವೈರಸ್ ಹೊರಹೊಮ್ಮಿದರೆ, ರಾಜ್ಯದಲ್ಲಿ 4.51 ಲಕ್ಷ ಪ್ರಕರಣಗಳು ಮತ್ತು ಆ.22 ಮತ್ತು ಸೆ.10 ರ ನಡುವೆ ಸುಮಾರು 20 ಲಕ್ಷ ಪ್ರಕರಣಗಳನ್ನು ನೋಡಬಹುದು.
ಲಸಿಕೆ ವಿತರಣೆ ಒಂದೇ ವೇಗದಲ್ಲಿ ಮುಂದುವರಿದರೆ ಮತ್ತು ಒಂದು ಹೊಸ ರೂಪಾಂತರ ಹೊರಹೊಮ್ಮಿದರೆ, ರಾಜ್ಯವು ಸಡಿಲವಾದ ಸಾಮಾಜಿಕ ಅಂತರ ಪಾಲನೆ ಮಾನದಂಡಗಳೊಂದಿಗೆ 1.44 ಲಕ್ಷದಿಂದ 2.07 ಲಕ್ಷ ಪ್ರಕರಣಗಳನ್ನು ನೋಡಬಹುದು.
ಆದಾಗ್ಯೂ, ಸಾಮಾಜಿಕ ದೂರ ಕಾಯ್ದುಕೊಂಡರೆ ಅಕ್ಟೋಬರ್ 13ರ ವೇಳೆಗೆ ಕೇವಲ 36,000 ಪ್ರಕರಣಗಳು ಮತ್ತು ಅಕ್ಟೋಬರ್ ಅಂತ್ಯದವರೆಗೆ ಸುಮಾರು 36,000 ರಿಂದ 48,000 ಪ್ರಕರಣಗಳು ಇರುತ್ತವೆ ಎಂದು ತಜ್ಞರು ಅಂದಾಜಿಸಿದ್ದಾರೆ.
ವಿಶೇಷವಾಗಿ 0 ರಿಂದ 12 ವರ್ಷದೊಳಗಿನ ಮಕ್ಕಳಲ್ಲಿ ಕೋವಿಡ್ ಸೋಂಕುಗಳು 12 ಪಟ್ಟು ಹೆಚ್ಚಾಗಬಹುದು ಎಂದು ಹೇಳಲಾಗಿದೆ.