ಶಿವಮೊಗ್ಗ,ಆ.9- ಮೊದಲು ನಮಗೆ ಶಕ್ತಿ ಇರಲಿಲ್ಲ. ಆದರೆ, ಈಗ ಗ್ರಾಪಂ ಮಟ್ಟದಿಂದ ಪ್ರಧಾನಿಯವರೆಗೂ ಬಿಜೆಪಿ ಇದೆ. ಈಗಲೂ ನಮ್ಮ ಮೈ ಮುಟ್ಟಿದರೆ ಬಿಡುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನೀವು ಇದನ್ನು ಹೇಗೆ ಅರ್ಥ ಮಾಡಿಕೊಂಡರೂ ನನಗೆ ಅಭ್ಯಂತರವಿಲ್ಲ. ಕೆಲವರು ಇದನ್ನು ವಿವಾದಾತ್ಮಕ ಹೇಳಿಕೆ ಎನ್ನುತ್ತಾರೆ. ಆದರೂ ಪರವಾಗಿಲ್ಲ. ನಮ್ಮ ಕಾರ್ಯಕರ್ತರಿಗೆ ಯಾವ ಸುದ್ದಿಗೂ ಹೋಗಬೇಡಿ ಎನ್ನುತ್ತೇವೆ. ನಮ್ಮ ಸುದ್ದಿಗೆ ಬಂದರೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಬಿ ಕಾಮ್ ಅಟ್ ಆಲ್ ಕಾಸ್ಟ್ ಎಂದೇ ಹೇಳುತ್ತೇವೆ. ಆದರೆ, ಈಗ ಫೇಸ್ ವಿತ್ ದ ಸೇಮ್ ಸ್ಟಿಕ್ ಎಂದು ಹೇಳುತ್ತೇವೆ. ಪ್ರಾಮಾಣಿಕವಾಗಿ ಏನು ನಡೆಯುತ್ತದೆ.
ಅದನ್ನೇ ನಾನು ಹೇಳುತ್ತೇನೆ. ಬೇರೆ ಏನನ್ನೂ ಹೇಳುವುದಿಲ್ಲ. ನಮ್ಮ ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡಿದರೆ ಸುಮ್ಮನಿರಬೇಕೆ ಎಂದು ಪ್ರಶ್ನಿಸಿದ ಅವರು, ಗೋವುಗಳ ಕಳ್ಳತನ ಮಾಡುತ್ತಾರೆ. ಯುವಕರನ್ನು ಹಿಡಿದು ಹೊಡೆಯುತ್ತಾರೆ. ಆಗಲೂ ನಾವು ಸುಮ್ಮನಿರಬೇಕೇ. ಅದಕ್ಕಾಗಿ ಆ ರೀತಿ ಹೇಳಿಕೆ ನೀಡಿದ್ದೇನೆ ಎಂದು ಸಮರ್ಥಿಸಿಕೊಂಡರು.
ಅಂದಿನ ದಿನಗಳಲ್ಲಿ ಕೇರಳದಲ್ಲಿ ನಡೆದ ರಾಷ್ಟ್ರೀಯ ಅಧಿವೇಶನವನ್ನು ಮುಗಿಸಿಕೊಂಡು ರೈಲಿನಲ್ಲಿ ಹೊರಟಿದ್ದ ಜನಸಂಘದ ರಾಷ್ಟ್ರೀಯ ಅಧ್ಯಕ್ಷರಾದ ಪಂಡಿತ್ ದೀನ್ದಯಾಳ್ ಉಪಾಧ್ಯಾಯ ಅವರನ್ನು ಮೊಗಲ್ ಸರಾಯಿ ಪ್ಲಾಟ್ಫಾರ್ಮ್ನಲ್ಲಿ ಹತ್ಯೆ ಮಾಡಲಾಗಿತ್ತು ಎಂದು ಹೇಳಿದರು.
ಆರ್ಎಸ್ಎಸ್ ಶಾಖೆ ಆರಂಭಿಸುತ್ತಾರೆ ಎಂದು ಯುವಕರನ್ನು ಕೊಂದು ಹಾಕುತ್ತಿದ್ದರು. ಅವನ್ನೆಲ್ಲಾ ನಾವು ಸಹಿಸಿಕೊಂಡಿದ್ದೇವೆ. ಅಷ್ಟೇಕೆ ಉಡುಪಿಯಲ್ಲಿ ಬೆಳ್ಳಂಬೆಳಗ್ಗೆ ಮನೆಯೊಂದಕ್ಕೆ ನುಗ್ಗಿ ಕರುವನ್ನು ಕದ್ದುಕೊಂಡು ಹೋಗುವಾಗ ಆ ಮನೆಯ ಹೆಣ್ಣುಮಗಳು ಅದನ್ನು ಪ್ರಶ್ನಿಸಿದ್ದಕ್ಕೆ ಕೊಲೆ ಮಾಡಿದ್ದರು ಎಂದರು.
ಕಾಮಗಾರಿಗಳು ಕಳಪೆ ಎಂದು ಸುಮ್ಮನೆ ಹೇಳಿದರೆ ನಾವು ಕೇಳುವುದಿಲ್ಲ. ನಿಮ್ಮ ಎದುರಿಗೆ ಜನರನ್ನು ಕರೆದು ಕಾಮಗಾರಿಗಳ ಪರಿಶೀಲನೆಯನ್ನು ಸಹ ಸ್ಥಳಕ್ಕೆ ತೆರಳಿ ಮಾಡಿದ್ದೇನೆ. ಅಲ್ಲಿ ಎಲ್ಲರೂ ತೃಪ್ತಿ ಇದೆ ಎಂದೇ ಹೇಳಿದ್ದಾರೆ. ಆದರೆ, ಕೆಲವರಿಗೆ ಟೀಕೆ ಮಾಡುವುದೇ ಅಭ್ಯಾಸ. ಟೀಕೆ ಮಾಡಿದರೆ ಮಾಡಲಿ. ಅದರಲ್ಲಿ 5ರಿಂದ 10 ಪರ್ಸೆಂಟಾದರೂ ಸತ್ಯ ಇರಬೇಕು ಎಂದು ಹೇಳಿದರು.
ಅಧಿಕಾರಿಗಳು, ಕಂಟ್ರ್ಯಾಕ್ಟರ್ಗಳನ್ನಾಗಲಿ ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಹತ್ತಾರು ವರ್ಷಗಳಾದರೂ ಶಿವಮೊಗ್ಗದ ಜನರಿಗೆ ಆಗಿರುವ ಕೆಲಸಗಳಿಂದ ಅನುಕೂಲವಾಗಬೇಕು. ಅದಕ್ಕಾಗಿ ಕಾಮಗಾರಿಗಳನ್ನು ಆದಷ್ಟು ಶೀಘ್ರ ಮುಗಿಸಲು ಸೂಚಿಸಿದ್ದೇನೆ. ಕೆಲವೆಡೆ ಕೋವಿಡ್ ಹಾಗೂ ಮಳೆಯಿಂದಾಗಿ ಕೆಲಸ ನಿಧಾನವಾಗಿ ಸಾಗಿದೆ. ಆದರೆ, ಇವೆಲ್ಲದರದ ನಡುವೆಯೂ ಸಾಕಷ್ಟು ಕೆಲಸಗಳಾಗಿವೆ. ಇನ್ನೂ ಹೆಚ್ಚು ಕೆಲಸ ಮಾಡಬೇಕು. ನೀಡಿರುವ ಟಾರ್ಗೆಟ್ ರೀಚ್ ಆಗಬೇಕೆಂದು ತಿಳಿಸಿದರು.