ಬೆಂಗಳೂರು,ಆ.2- ಸಚಿವ ಸಂಪುಟ ರಚನೆ ಕುರಿತು ದೆಹಲಿಯಲ್ಲಿ ವರಿಷ್ಠರ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತುಕತೆ ನಡೆಸುತ್ತಿದ್ದರೆ, ಆಕಾಂಕ್ಷಿಗಳು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಲು ಬಿಎಸ್ವೈ ಮನೆ ಬಾಗಿಲು ತಟ್ಟುತ್ತಿದ್ದಾರೆ.
ಇಂದು, ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ ಹಾಗೂ ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ್ ತಮ್ಮ ಬೆಂಬಲಿಗರ ಜೊತೆ ಆಗಮಿಸಿ ಯಡಿಯೂರಪ್ಪರನ್ನು ಭೇಟಿ ಮಾಡಿ ಸಂಪುಟದಲ್ಲಿ ಅವಕಾಶ ಕೊಡಿಸುವಂತೆ ಮನವಿ ಮಾಡಿದರು.
ಬಳಿಕ ಮಾತನಾಡಿದ ಶಾಸಕ ಅರಗ ಜ್ಞಾನೇಂದ್ರ, ಯಡಿಯೂರಪ್ಪನವರ ಭೇಟಿಯಲ್ಲಿ ವಿಶೇಷವೇನಿಲ್ಲ. ಬೆಂಗಳೂರಿಗೆ ಬಂದಾಗಲೆಲ್ಲಾ ಯಡಿಯೂರಪ್ಪನವರನ್ನು ಭೇಟಿ ಮಾಡುತ್ತೇನೆ. ನನ್ನನ್ನು ಸಚಿವ ಸಂಪುಟಕ್ಕೆ ಸೇರಿಸದಿರಲು ಯಾವುದೇ ಕಾರಣಗಳು ಇಲ್ಲ. ಯಡಿಯೂರಪ್ಪನವರಿಗೆ ನನ್ನ ಮೇಲೆ ಅನುಕಂಪ ಇದೆ. ನಾನು ಅವರ ಜೊತೆ ಜೊತೆಯಲ್ಲಿ ಬೆಳೆದವನು. ನನ್ನನ್ನು ಬಿಎಸ್ವೈ ಗುರುತಿಸುತ್ತಾರೆ, ಸಂಘ ಸಹ ಗುರುತಿಸುತ್ತದೆ. ಈ ಬಾರಿ ಸಚಿವನಾಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ಗೆ ಕೂಡ ಸಚಿವ ಸ್ಥಾನ ನೀಡುವಂತೆ ಒತ್ತಡ ತರಲಾಗುತ್ತಿದೆ. ಬಿಎಸ್ವೈ ಭೇಟಿ ಮಾಡಿದ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ರವಿಕುಮಾರ್ಗೆ ಸಚಿವ ಸ್ಥಾನ ಕೊಡುವ ಬಗ್ಗೆ ಯಡಿಯೂರಪ್ಪ ಜೊತೆ ಚರ್ಚೆ ನಡೆಸಿದ್ದಾರೆ.
ಬಿಎಸ್ವೈ ಭೇಟಿ ಬಳಿಕ ಮಾತನಾಡಿದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಗಂಗಾಮತಸ್ಥ ಸಮುದಾಯದಲ್ಲಿ ಮೂವರು ಎಂಎಲ್ಸಿಗಳಿದ್ದಾರೆ. ಎನ್. ರವಿಕುಮಾರ್, ಸಾಬಣ್ಣ ತಳವಾರ್, ಲಾಲಾಜಿ ಮೆಂಡನ್ ಈ ಮೂವರ ಪೈಕಿ ಇಬ್ಬರಿಗೆ ಸಚಿವ ಸ್ಥಾನ ಕೊಡಲು ಕೇಳಿದ್ದೇವೆ. ಯಡಿಯೂರಪ್ಪ ಅವರು ಸಚಿವ ಸ್ಥಾನ ಕೊಡಿಸಲಿದ್ದಾರೆ ಎಂಬ ಭರವಸೆ ಇದೆ ಎಂದಿದ್ದಾರೆ.
ಹಿರಿಯರಿಗೆ ಆತಂಕ:
ಈಗಾಗಲೇ ಜಗದೀಶ್ ಶೆಟ್ಟರ್ ಸಂಪುಟದಿಂದ ಹೊರಗುಳಿಯುವ ಘೋಷಣೆ ಮಾಡಿದ್ದು, ಪಕ್ಷದಲ್ಲಿನ ಇನ್ನು ಕೆಲ ಹಿರಿಯರಿಗೆ ಮತ್ತು ಯಡಿಯೂರಪ್ಪ ಸಂಪುಟದಲ್ಲಿ ಉತ್ತಮ ಸಾಧನೆ ಮಾಡದ ಕೆಲವರಿಗೂ ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆ ಇದೆ. ಜೆ.ಸಿ.ಮಾಧುಸ್ವಾಮಿ, ಸುರೇಶ್ ಕುಮಾರ್, ಶ್ರೀಮಂತ ಪಾಟೀಲ್, ಕೋಟ ಶ್ರೀನಿವಾಸ ಪೂಜಾರಿ, ಲಕ್ಷ್ಮಣ ಸವದಿ, ವಿ.ಸೋಮಣ್ಣ, ಪ್ರಭು ಚವ್ಹಾಣ್, ಸಿ.ಸಿ ಪಾಟೀಲ್, ಆನಂದ್ ಸಿಂಗ್, ಆರ್.ಶಂಕರ್, ಗೋಪಾಲಯ್ಯ, ಶಿವರಾಮ್ ಹೆಬ್ಬಾರ್, ಶಶಿಕಲಾ ಜೊಲ್ಲೆ ಅವರಿಗೆ ಕಮ್ ಬ್ಯಾಕ್ ಕಷ್ಟ ಎನ್ನುವ ಸ್ಥಿತಿ ಇದೆ ಎನ್ನಲಾಗುತ್ತಿದೆ.
ಡಿಸಿಎಂ ರೇಸ್: ಕೆ.ಎಸ್.ಈಶ್ವರಪ್ಪ, ಬಿ.ಶ್ರೀರಾಮುಲು, ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ, ಆರ್.ಅಶೋಕ್, ಅಶ್ವತ್ಥ ನಾರಾಯಣ ಡಿಸಿಎಂ ಸ್ಥಾನದ ಆಕಾಂಕ್ಷಿಗಳಿದ್ದು, ಹೈಕಮಾಂಡ್ ಯಾವ ಸೂತ್ರ ಅನುಸರಿಸಲಿದೆ ಎನ್ನುವುದು ಕುತೂಹಲ ಮೂಡಿಸಿದೆ. ಈಶ್ವರಪ್ಪ ಅವರನ್ನು ಸಂಪುಟದಿಂದಲೇ ಕೈಬಿಟ್ಟರೂ ಅಚ್ಚರಿಯಿಲ್ಲ ಎಂದು ಹೇಳಲಾಗುತ್ತಿದೆ.
ಸಂಪುಟದಲ್ಲಿ ಉಳಿಯುವ ಸಾಧ್ಯತೆ:
ಆರ್.ಅಶೋಕ್, ಬಿ.ಶ್ರೀರಾಮುಲು, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಅಶ್ವತ್ಥ ನಾರಾಯಣ, ಅರವಿಂದ ಲಿಂಬಾವಳಿ, ಎಸ್.ಅಂಗಾರ, ಎಸ್.ಟಿ ಸೋಮಶೇಖರ್, ಡಾ.ಕೆ.ಸುಧಾಕರ್, ಬಿ.ಸಿ.ಪಾಟೀಲ, ಭೆರತಿ ಬಸವರಾಜು, ನಾರಾಯಣಗೌಡ ಸಂಪುಟದಲ್ಲಿ ಉಳಿಯುವ ಸಾಧ್ಯತೆಯಿದೆ.
ಹೊಸ ಮುಖಗಳು: ಮುಂದಿನ ಚುನಾವಣೆ ದೃಷ್ಟಿಯಲ್ಲಿರಿಸಿಕೊಂಡು ಹೊಸ ಮುಖಗಳಿಗೆ ಮಣೆ ಹಾಕುವ ಚಿಂತನೆಯಿದೆ ಎನ್ನಲಾಗಿದೆ. ಪಿ.ರಾಜೀವ್, ಸುನೀಲ್ ಕುಮಾರ್, ಅರವಿಂದ ಬೆಲ್ಲದ್, ಪೂರ್ಣಿಮಾ ಶ್ರೀನಿವಾಸ್, ರಾಜುಗೌಡ, ಹಾಲಾಡಿ ಶ್ರೀನಿವಾಸಶೆಟ್ಟಿ, ರಾಮದಾಸ್, ಆರಗ ಜ್ಞಾನೇಂದ್ರ ಅವರಿಗೆ ಸಚಿವ ಸ್ಥಾನ ಸಿಗುವ ಅವಕಾಶವಿದೆ ಎನ್ನಲಾಗಿದೆ.