ಸಚಿವ ಸಂಪುಟ ರಚನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರದಂದು ದಿಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಶುಕ್ರವಾರ ಬೆಳಗ್ಗೆ 6.30ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು 8.55ಕ್ಕೆ ದಿಲ್ಲಿ ತಲುಪಲಿದ್ದಾರೆ.
ಮೊದಲಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿರುವ ಸಿಎಂ, ನಂತರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನೂ ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ. ಬಳಿಕ ಕೇಂದ್ರ ಸಚಿವ ರಾಜನಾಥ ಸಿಂಗ್ ಸೇರಿದಂತೆ ಇನ್ನಿತರ ಮಂತ್ರಿವರ್ಯರ ಭೇಟಿ ಮಾಡಲಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ದಿಲ್ಲಿಯ ಅಶೋಕ ಹೋಟೆಲ್ನಲ್ಲಿ ರಾಜ್ಯದ ಸಂಸದರು, ಕೇಂದ್ರದ ಸಚಿವರೊಂದಿಗೆ ಸಮಾಲೋಚನಾ ಸಭೆ ನಡೆಸಲಿದ್ದಾರೆ. ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, ರಾಜ್ಯ ಮತ್ತು ಕೇಂದ್ರದ ನಡುವಿನ ಕೊಂಡಿಯಾಗಿ ಮಾಡಿ, ಸಹಕರಿಸುವಂತೆ ಕೋರಲಿದ್ದಾರೆ. ಬಳಿಕ ಕರ್ನಾಟಕ ಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಸಂಪುಟ ರಚನೆಗಾಗಿ ಮತ್ತೊಮ್ಮೆ ದಿಲ್ಲಿಗೆ ಭೇಟಿ
ಮೊದಲ ಭೇಟಿಯಲ್ಲಿಯೇ ಸಂಪುಟ ರಚನೆ ಸಂಬಂಧ ಅಂತಿಮ ನಿರ್ಣಯ ಕೈಗೊಳ್ಳಲು ಸಾಧ್ಯವಾಗದೇ ಇರಬಹುದು ಎಂದಿರುವ ಸಿಎಂ ಬಸವರಾಜ ಬೊಮ್ಮಾಯಿ, ಕೃತಜ್ಞತೆ ಸಲ್ಲಿಸಲು ಶುಕ್ರವಾರದ ಭೇಟಿ ಸಾಧ್ಯವಾದಷ್ಟು ಸೀಮಿತವಾಗಿರಲಿದೆ. ಸಮಯದ ಸದ್ಬಳಕೆ ಮಾಡಿಕೊಳ್ಳುವ ಸಲುವಾಗಿ ಸಂಪುಟ ರಚನೆ ಕುರಿತೂ ಚರ್ಚಿಸುತ್ತೇನೆ. ಆದರೆ, ಸಂಸತ್ ಅವೇಶನ ನಡೆಯುತ್ತಿರುವುದರಿಂದ ಹೆಚ್ಚಿನ ಸಮಯಾವಕಾಶ ಆಗದೇ ಇರಬಹುದು. ಹೀಗಾಗಿ ಒಂದೇ ಭೇಟಿಯಲ್ಲಿ ಸಾಧ್ಯವಾಗುವುದು ಕಷ್ಟವಿದೆ. ಮುಂದಿನ 2-3 ದಿನದಲ್ಲಿ ಮತ್ತೆ ದಿಲ್ಲಿ ಪ್ರವಾಸ ನಡೆಸಿ, ಸಂಪುಟ ರಚನೆ ಕುರಿತು ಅಂತಿಮ ತೀರ್ಮಾನ ಮಾಡುವುದಾಗಿ ಹೇಳಿದ್ದಾರೆ.
ಕಿರಿಯರಿಗಾಗಿ ಶೆಟ್ಟರ್ ಪದತ್ಯಾಗ
ಬಹುತೇಕರು ಸಚಿವ ಸ್ಥಾನಕ್ಕಾಗಿ ಕಾತುರದಿಂದ ಇದ್ದರೆ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತ್ರ ಮಂತ್ರಿ ಸ್ಥಾನ ಬೇಡ ಎಂದಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಯಡಿಯೂರಪ್ಪ ಅವರು ನಮ್ಮ ಪಕ್ಷದ ಹಿರಿಯ ಮುಖಂಡರು. ಹಿಂದೆ ಸಿಎಂ ಇದ್ದಾಗ ನಾನು ಕಂದಾಯ ಸಚಿವನಾಗಿ, ಗ್ರಾಮೀಣಾಭಿವೃದ್ಧಿ ಸಚಿವನಾಗಿ ಕೆಲಸ ಮಾಡಿದ್ದೆ. ಮಾಜಿ ಸಿಎಂ ಹಾಗೂ ಹಿರಿಯ ನಾಯಕನಾಗಿರುವುದರಿಂದ ಮಂತ್ರಿಮಂಡಲದಲ್ಲಿ ಸೇರಲು ಸಾಧ್ಯವಿಲ್ಲ ಎಂದರು.
ಪ್ರತಿಪಕ್ಷ ನಾಯಕ, ಸ್ಪೀಕರ್, ರಾಜ್ಯಾಧ್ಯಕ್ಷ ಹಾಗೂ ಸಿಎಂ ಆಗಿ ಕೆಲಸ ಮಾಡಿದ್ದೇನೆ. ಪಕ್ಷ ಎಲ್ಲ ರೀತಿಯ ಜವಾಬ್ದಾರಿ, ಗೌರವ ಕೊಟ್ಟಿದೆ. ಹೀಗಾಗಿ ನಾನು ಯಾವಾಗಲೂ ಪಕ್ಷನಿಷ್ಠನಾಗಿಯೇ ಇರುತ್ತೇನೆ. ಬಸವರಾಜ ಬೊಮ್ಮಾಯಿ ಅವರು ಸಿಎಂ ಎಂಬ ಕಾರಣಕ್ಕಲ್ಲ. ಯಾರೇ ಸಿಎಂ ಆಗಿದ್ದರೂ ಈಗಿನ ಪರಿಸ್ಥಿತಿಯಲ್ಲಿ ಮಂತ್ರಿ ಆಗಿರುತ್ತಿರಲಿಲ್ಲ. ನನ್ನ ನಿರ್ಧಾರವನ್ನು ಸಿಎಂ ಮತ್ತು ಪಕ್ಷದ ನಾಯಕರಿಗೆ ತಿಳಿಸಿದ್ದೇನೆ ಎಂದು ಶೆಟ್ಟರ್ ಸ್ಪಷ್ಟಪಡಿಸಿದರು.
ಸಂಪುಟಕ್ಕೆ ಯಾರನ್ನೂ ಶಿಫಾರಸು ಮಾಡೆನು: ಬಿಎಸ್ವೈ
ಸಿಎಂ ಬಸವರಾಜ ಬೊಮ್ಮಾಯಿ ಅವರು ದಿಲ್ಲಿಗೆ ಹೋಗಿ ಬರಲಿ. ತೀರ್ಮಾನ ಅವರದ್ದು. ನಾನು ಯಾವುದಕ್ಕೂ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ನಿಕಟಪೂರ್ವ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ ಕೇಶವಕೃಪಾ ಬಳಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಮಂತ್ರಿ ಮತ್ತೊಂದು ಮಗದೊಂದು ಏನೇ ವಿಚಾರ ಇದ್ದರೂ ರಾಜ್ಯದ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಅವರನ್ನೇ ಭೇಟಿ ಮಾಡಿ ಎಂದು ಎಲ್ಲರಿಗೂ ಹೇಳಿದ್ದೇನೆ. ಸಿಎಂ ಅವರಿಗೆ ಯಾರು ಸೂಕ್ತ ಎನಿಸುತ್ತದೆಯೋ ಅವರನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯ ಅಕಾರ ಇದೆ. ಈ ವಿಚಾರದಲ್ಲಿ ನಾನು ಮಧ್ಯಪ್ರವೇಶ ಮಾಡುವುದಿಲ್ಲ. ನನ್ನ ಮೇಲೆ ಒತ್ತಡ ಹಾಕಬಾರದು ಎಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಸರ್ಕಾರ ರಚನೆಗೆ ಕಾರಣರಾದವರಿಗೆ ಸ್ಥಾನ
ಜಗದೀಶ್ ಶೆಟ್ಟರ್ ಅವರು ಕಿರಿಯರಿಗೆ ಅವಕಾಶ ಮಾಡಿಕೊಡಲು ಈ ತೀರ್ಮಾನ ಕೈಗೊಂಡಿದ್ದಾರೆ. ಇದನ್ನು ನನಗೂ ತಿಳಿಸಿದ್ದಾರೆ. ಇದೊಂದು ಅತ್ಯುತ್ತಮವಾದ ನಿರ್ಧಾರ. ಇನ್ನು ಸರ್ಕಾರ ತರಲು ಕಾರಣಕರ್ತರಾದವರಿಗೆ ಯಾವ ರೀತಿಯ ಸ್ಥಾನಮಾನ ನೀಡಬೇಕೆಂದು ಸಿಎಂ ತೀರ್ಮಾನಿಸುತ್ತಾರೆ. ನಾನು ಸಲಹೆ ಕೊಡುತ್ತೇನಷ್ಟೆ ಎಂದ ಯಡಿಯೂರಪ್ಪ, ಕೆಲವರು ಈಗಲೇ ದಿಲ್ಲಿಗೆ ಹೋಗುತ್ತಿದ್ದಾರೆ ಎಂಬ ಪ್ರಶ್ನೆಗೆ ಮುಗುಳ್ನಕ್ಕು ನಡೆದರು.
ಆಕಾಂಕ್ಷಿಗಳ ದಿಲ್ಲಿ ಯಾತ್ರೆ
ಸಿಎಂ ಬಸವರಾಜ ಬೊಮ್ಮಾಯಿ ಅವರು ದಿಲ್ಲಿಗೆ ತೆರಳುವ ಮೊದಲೇ ಮಾಜಿ ಸಚಿವರಾದ ಆರ್.ಅಶೋಕ, ಸಿ.ಪಿ. ಯೋಗೇಶ್ವರ ಸೇರಿದಂತೆ ಕೆಲ ಆಕಾಂಕ್ಷಿಗಳು ದಿಲ್ಲಿ ಪರೇಡ್ ನಡೆಸಿದ್ದು, ವರಿಷ್ಠರ ಭೇಟಿಗೆ ಕಾಲಾವಕಾಶ ಕೋರಿದ್ದಾರೆ. ಹಿರಿತನ, ಅನುಭವ, ಪ್ರಾದೇಶಿಕತೆ ಇತ್ಯಾದಿ ಮಾನದಂಡಗಳನ್ನು ಮುಂದಿಟ್ಟು ಹಕ್ಕು ಪ್ರತಿಪಾದಿಸಲು ಮುಂದಾಗಿದ್ದಾರೆ.