
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ನಿರ್ಬಂಧವನ್ನು ಮತ್ತಷ್ಟು ಸಡಿಲಗೊಳಿಸಿ ಸರ್ಕಾರ ಆದೇಶಿಸಿದೆ. ಇದರನ್ವಯ ಚಿತ್ರಮಂದಿರ ಹಾಗೂ ದೇವಾಲಯಗಳು ಪೂರ್ಣ ಪ್ರಮಾಣದಲ್ಲಿ ಆರಂಭಿಸಲು ಅವಕಾಶ ಕಲ್ಪಿಸಲಾಗಿದೆ.
ನಾಲ್ಕನೇ ಹಂತದ ಅನ್ಲಾಕ್ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಚಿವರೊಂದಿಗೆ ಹಾಗೂ ಅಕಾರಿಗಳೊಂದಿಗೆ ಭಾನುವಾರ ಸಭೆ ನಡೆಸಿ ಚರ್ಚಿಸಿದರು.
ಉನ್ನತ ಶಿಕ್ಷಣ, ದೇವಾಲಯ, ಚಿತ್ರಮಂದಿರ, ವ್ಯಾಪಾರ ವಹಿವಾಟುಗಳಿಗೆ ಮುಕ್ತ ಅವಕಾಶ ಸೇರಿದಂತೆ ಹಲವು ನಿಯಮಗಳನ್ನು ಸಡಿಲಗೊಳಿಸಿದರೆ, ಇತ್ತ ರಾತ್ರಿ ಕಫ್ರ್ಯೂಗೆ ಸಮಯವನ್ನು ಮರು ನಿಗದಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಸೋಂಕು ಇಳಿಮುಖವಾಗುತ್ತಿರುವ ಹಿನ್ನೆಲೆ ನಿಯಮಗಳನ್ನ ಸಡಿಲಗೊಳಿಸಿದ್ದು ದೇವಾಲಯಗಳಲ್ಲಿ ಈ ಹಿಂದೆ ಭಕ್ತರ ಪ್ರವೇಶಕ್ಕೆ ಮಾತ್ರ ಅವಕಾಶ ನೀಡಿ ಸರ್ಕಾರ ಆದೇಶ ಹೊರಡಿಸಿತ್ತು. ಇನ್ನುಮುಂದೆ ದೇವಾಲಯಗಳಲ್ಲಿ ಪೂಜಾ ಸೇವೆಗಳು,ಅರ್ಚನೆ, ಹರಕೆ ತೀರಿಸುವ ಇತ್ಯಾದಿ ಕಾರ್ಯಕ್ರಮಗಳಿಗೂ ಅವಕಾಶ ನೀಡಲಾಗಿದೆ. ಆದರೆ ಕೋವಿಡ್ ನಿಯಮವನ್ನು ಪಾಲಿಸುವುದು ಕಡ್ಡಾಯವಾಗಿದೆ. ಸಿನೆಮಾ ಮಂದಿರಗಳು, ಹಾಲ್ಗಳು, ರಂಗಮಂದಿರಗಳು, ಸಭಾಂಗಣಗಳು ಶೇ.50 ಜನಸಂಖ್ಯೆಯನ್ನೊಳಗೊಂಡು ಕಾರ್ಯನಿರ್ವಹಿಸಬೇಕು.
ರಾತ್ರಿ ಕಫ್ರ್ಯೂ ಮುಂದುವರಿಕೆ
ರಾಜ್ಯದಲ್ಲಿ ಸದ್ಯ ಜು.19ರವರೆಗೆ ರಾತ್ರಿ ಕಫ್ರ್ಯೂ ಜಾರಿಯಲ್ಲಿದ್ದು ಸೋಮವಾರದಿಂದ ಹೊಸದಾಗಿ ನಿಯಮ ಅನ್ವಯವಾಗಲಿದೆ. ಈ ಹಿಂದೆ ರಾತ್ರಿ 9 ಗಂಟೆಯಿಂದ ಮುಂಜಾನೆ 6 ಗಂಟೆಯವರೆಗೆ ಜಾರಿಯಲ್ಲಿದ್ದ ಕಫ್ರ್ಯೂ ಇನ್ನು ರಾತ್ರಿ 10 ಗಂಟೆಯಿಂದ ಮುಂಜಾನೆ 5 ಗಂಟೆಯವರೆಗೆ ಇರಲಿದೆ.
ಆ.2ರವರೆಗೆ ಜಾರಿ
ಹೊಸದಾಗಿ ರಚಿಸಿರುವ ಮಾರ್ಗಸೂಚಿ ಆ.2ರವರೆಗೆ ಜಾರಿಯಲ್ಲಿರಲಿದೆ. ಈ ನಿಯಮಗಳನ್ನು ಜಿಲ್ಲಾಕಾರಿಗಳು, ಜಿಲ್ಲಾ ಪೋಲಿಸ್ ಅಕಾರಿಗಳು, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಾಲಿಕೆ ಆಯುಕ್ತರು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಸರ್ಕಾರ ಆದೇಶಿಸಿದೆ.
3ನೇ ಅಲೆಗೆ ಸಿದ್ಧತೆ ಮಾಡಿಕೊಳ್ಳಿ: ಸಿಎಂ
ಮೂರನೇ ಅಲೆಗೆ ಬೇಕಾದ ಎಲ್ಲ ತಯಾರಿ ಮಾಡುವಂತೆ ಮುಖ್ಯಮಂತ್ರಿಗಳು, ಸಚಿವರು ಹಾಗೂ ಅಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಮಕ್ಕಳ ಆರೈಕೆ ಹಾಗೂ ಆರೋಗ್ಯ ಕಾಪಾಡಲು ಮಕ್ಕಳ ತಜ್ಞರ ಕೊರತೆ ಯಾವ ಜಿಲ್ಲೆಯಲ್ಲಿದೆ ಎಂದು ಪರಾಮರ್ಶಿಸಿ ಸರಿಪಡಿಸುವಂತೆ ಸೂಚಿಸಲಾಗಿದೆ.