ಬೆಂಗಳೂರು, ಜು.15-ಬೆಳ್ಳಂಬೆಳಗ್ಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು (ಎಸಿಬಿ) ಭರ್ಜರಿ ಕಾರ್ಯಾಚರಣೆ ನಡೆಸಿ 9 ಅಧಿಕಾರಿಗಳ ಅಕ್ರಮ ಕರ್ಮಕಾಂಡವನ್ನು ಪತ್ತೆಹಚ್ಚಿದ್ದಾರೆ.
ರಾಜ್ಯಾದ್ಯಂತ 35ಕ್ಕೂ ಹೆಚ್ಚು ಕಡೆ ಆಯಾ ವಲಯದ ಎಸ್ಪಿಗಳು ಹಾಗೂ ಅಧಿಕಾರಿಗಳ ಮಟ್ಟದಲ್ಲಿ ಸುಮಾರು 250ಕ್ಕೂ ಹೆಚ್ಚು ಸಿಬ್ಬಂದಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಪಾರ ಪ್ರಮಾಣದ ಅಕ್ರಮ ಆಸ್ತಿ ಸಂಪಾದನೆ ಬೆಳಕಿಗೆ ಬಂದಿದೆ.
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಮಂಗಳೂರು ನಗರಾಭಿವೃದ್ಧಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಜಿ.ಶ್ರೀಧರ್ ಅವರ ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದ್ದು, ಹಲವೆಡೆ ನಿವೇಶನಗಳನ್ನು ಹೊಂದಿರುವುದು ಪತ್ತೆಯಾಗಿದೆ.
ಉಡುಪಿಯ ಕರ್ನಾಟಕ ಗ್ರಾಮೀಣ ಮೂಲ ಸೌಲಭ್ಯ ಅಭಿವೃದ್ಧಿ (ಕೆಆರ್ಐಡಿಸಿಎಲ್) ಸಂಸ್ಥೆಯ ಕಾರ್ಯಪಾಲಕ ಅಭಿಯಂತರ ಎಸ್.ಕೃಷ್ಣ ಹೆಬ್ಸೂರ್ ಅವರ ಸ್ವಂತ ಊರು ಹಾಗೂ ಉಡುಪಿಯ ಕಚೇರಿ, ನಿವಾಸದ ಮೇಲೆ ದಾಳಿ ನಡೆದಿದೆ.
ಪ್ರಮುಖವಾಗಿ ಇಲ್ಲೇ ಕೆಆರ್ಡಿಸಿಎಲ್ನ ಪ್ರಧಾನ ಅಭಿಯಂತರರಿಗೂ ಎಸಿಬಿ ಶಾಕ್ ನೀಡಿದೆ. ಆರ್.ಪಿ.ಕುಲಕರ್ಣಿ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆದಿದ್ದು, ಹಲವು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಕೋಲಾರ ಜಿಲ್ಲೆಯ ಮಾಲೂರು ನಗರ ಯೋಜನೆ ಪ್ರಾಧಿಕಾರದ ಸಹಾಯಕ ನಿರ್ದೇಶಕ ಎಚ್.ಆರ್.ಕೃಷ್ಣಪ್ಪ ಅವರ ಬೆಂಗಳೂರು, ದಾವಣಗೆರೆ, ಕೋಲಾರ, ಮಾಲೂರು, ಶಿವಮೊಗ್ಗ ಸೇರಿದಂತೆ ಹಲವೆಡೆ ದಾಳಿ ನಡೆದಿದೆ.
ಇವರು ಮೂಲತಃ ದಾವಣಗೆರೆಯ ಚನ್ನಗಿರಿಯ ದೇವರಹಳ್ಳಿಯವರಾಗಿದ್ದು, ಇಲ್ಲೂ ಕೂಡ ದಾಳಿ ನಡೆದಿದ್ದು, ಹಲವು ಕಡೆ ಕೃಷಿ ಜಮೀನು, ನಿವೇಶನಗಳು, ಹಲವು ವಲಯಗಳಲ್ಲಿ ಹಣ ಹೂಡಿಕೆ ಪತ್ತೆಯಾಗಿದೆ.
ಎಸ್ಪಿ ಜಯಪ್ರಕಾಶ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಬೀದರ್ನಲ್ಲಿ ಪ್ರದೇಶಾಭಿವೃದ್ಧಿ ಇಲಾಖೆಯ ಕಿರಿಯ ಅಭಿಯಂತರ ಸುರೇಶ್ ಮೊಹಾರೆ ಅವರ ಕಚೇರಿ ಹಾಗೂ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ನಗದು, ಚಿನ್ನಾಭರಣ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು ಮಂಡ್ಯ ಜಿಲ್ಲೆಯ ಸಾಮಾಜಿಕ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಟಿ.ವೆಂಕಟೇಶ್ ಅವರ ಮಂಡ್ಯ ಕಚೇರಿ, ನಿವಾಸ ಸೇರಿದಂತೆ ಬೆಂಗಳೂರು, ರಾಮನಗರ ಸೇರಿದಂತೆ ವಿವಿಧೆಡೆ ಎಸಿಬಿ ದಾಳಿ ನಡೆದಿದೆ.
ಇಲ್ಲೂ ಕೂಡ ಹಲವು ನಿವೇಶನಗಳ ಕ್ರಯಪತ್ರಗಳು, ಅಪಾರ ಚಿನ್ನಾಭರಣ ಪತ್ತೆಯಾಗಿದೆ ಎಂದು ಹೇಳಲಾಗಿದೆ.
ವಿಜಯಪುರದ ಎಸ್ಕಾಂನ ಸಹಾಯಕ ಕಾರ್ಯಪಾಲಕ ಅಭಿಯಂತರ ಸಿದ್ರಾಮ್ ಮಲ್ಲಿಕಾರ್ಜುನ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆದಿದ್ದು, ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
ಬಳ್ಳಾರಿಯಲ್ಲಿ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ಎ.ಎನ್.ವಿಜಯ್ಕುಮಾರ್ ಅವರ ಕಚೇರಿ, ಮನೆ ಸೇರಿದಂತೆ ಅವರ ಬೆಂಗಳೂರು, ಮೈಸೂರಿನಲ್ಲಿರುವ ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದ್ದು, ಎಷ್ಟು ಪ್ರಮಾಣದಲ್ಲಿ ಅಕ್ರಮ ಸಂಪತ್ತು ಪತ್ತೆಯಾಗಿದೆ ಎಂಬುದರ ಬಗ್ಗೆ ಅಧಿಕಾರಿಗಳು ಇನ್ನೂ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
ಬೆಂಗಳೂರಿನಲ್ಲಿ ಕೋರಮಂಗಲ, ಆರ್ಟಿಒ ಕಚೇರಿಯ ಹಿರಿಯ ಮೋಟಾರು ವಾಹನ ಇನ್ಸ್ಪೆಕ್ಟರ್ ಎ.ಕೃಷ್ಣಮೂರ್ತಿ ಅವರ ನಿವಾಸ ಹಾಗೂ ಕಚೇರಿ ಮೇಲೆ ಏಕಕಾಲದಲ್ಲಿ ದಾಳಿ ನಡೆದಿದ್ದು, ಇಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ, ಫ್ಲಾಟ್, ನಿವೇಶನ ಸೇರಿದಂತೆ ಹಲವು ದಾಖಲೆಗಳು ಪತ್ತೆಯಾಗಿವೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಎಸಿಬಿ 9 ಭ್ರಷ್ಟ ಅಧಿಕಾರಿಗಳ ಅಕ್ರಮ ಬಂಡವಾಳವನ್ನು ಪತ್ತೆಹಚ್ಚಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಬಲೆಗೆ ಬಿದ್ದವರು
1. ಜಿ.ಶ್ರೀಧರ್- ಮಂಗಳೂರು ನಗರಾಭಿವೃದ್ಧಿ ಕಾರ್ಯಪಾಲಕ ಅಭಿಯಂತರ
2. ಎಸ್.ಕೃಷ್ಣ ಹೆಬ್ಸೂರ್- ಕೆಆರ್ಐಡಿಸಿಎಲ್ ಕಾರ್ಯಪಾಲಕ ಅಭಿಯಂತರ
3. ಆರ್.ಪಿ.ಕುಲಕರ್ಣಿ- ಕೆಆರ್ಡಿಸಿಎಲ್ ಪ್ರಧಾನ ಅಭಿಯಂತರ
4. ಎಚ್.ಆರ್.ಕೃಷ್ಣಪ್ಪ- ಮಾಲೂರು ನಗರ ಯೋಜನೆ ಪ್ರಾಧಿಕಾರದ ಸಹಾಯಕ ನಿರ್ದೇಶಕ
5. ಸುರೇಶ್ ಮೊಹಾರೆ- ಬೀದರ್ನಲ್ಲಿ ಪ್ರದೇಶಾಭಿವೃದ್ಧಿ ಇಲಾಖೆಯ ಕಿರಿಯ ಅಭಿಯಂತರ
6. ಟಿ.ವೆಂಕಟೇಶ್- ಮಂಡ್ಯ ಜಿಲ್ಲೆಯ ಸಾಮಾಜಿಕ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್)
7. ಸಿದ್ರಾಮ್ ಮಲ್ಲಿಕಾರ್ಜುನ್- ವಿಜಯಪುರದ ಎಸ್ಕಾಂನ ಸಹಾಯಕ ಕಾರ್ಯ ಪಾಲಕ ಅಭಿಯಂತರ
8. ಎ.ಎನ್.ವಿಜಯ್ಕುಮಾರ್- ಬಳ್ಳಾರಿಯಲ್ಲಿ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್
9. ಎ.ಕೃಷ್ಣಮೂರ್ತಿ- ಬೆಂಗಳೂರಿನಲ್ಲಿ ಆರ್ಟಿಒ ಕಚೇರಿಯ ಹಿರಿಯ ಮೋಟಾರು ವಾಹನ ಇನ್ಸ್ಪೆಕ್ಟರ್