ಹೊಸದಿಲ್ಲಿ: ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಕೆಲ ಭಾಗಗಳಲ್ಲಿ ಭಾನುವಾರ ಸಿಡಿಲು ಬಡಿದು ಕನಿಷ್ಠ 60 ಮಂದಿ ಮೃತರಾಗಿದ್ದಾರೆ. ರಾಜಸ್ಥಾನದ ಜೈಪುರದಲ್ಲಿರುವ 12ನೇ ಶತಮಾನದ ಪ್ರಸಿದ್ಧ ಕೋಟೆಯ ಬಳಿ ಸೆಲಿ ತೆಗೆದುಕೊಳ್ಳುತ್ತಿದ್ದಾಗ 11 ಮಂದಿ ಸಿಡಿಲಿಗೆ ಬಲಿಯಾಗಿದ್ದಾರೆ.
ಮೃತಪಟ್ಟವರಲ್ಲಿ 41 ಮಂದಿ ಉತ್ತರ ಪ್ರದೇಶದವರಾಗಿದ್ದಾರೆ. ಇನ್ನು ಪ್ರಯಾಗ್ರಾಜ್ನಲ್ಲಿ 14 ಜನರು ಸಾವಿಗೀಡಾಗಿದ್ದಾರೆ. ರಾಜ್ಯಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಮಂದಿ ಸಿಡಿಲಿಗೆ ಬಲಿಯಾಗಿದ್ದು, ಇವರಲ್ಲಿ ಮಹಿಳೆಯರು ಮತ್ತು ಮಕ್ಕಳೆ ಹೆಚ್ಚಿನವರು.
ಉತ್ತರ ಪ್ರದೇಶದ 16 ಜಿಲ್ಲೆಗಳಲ್ಲಿ ಸಿಡಿಲಿಗೆ 41 ಮಂದಿ ಮೃತಪಟ್ಟಿದ್ದು, 30 ಜನರು ಗಾಯಗೊಂಡಿದ್ದಾರೆ. ಅಲ್ಲದೆ, 250 ಜಾನುವಾರುಗಳು ಸಹ ಸಾವಿಗೀಡಾಗಿವೆ. ಮೃತರ ಕುಟುಂಬದವರಿಗೆ ಪರಿಹಾರ ಘೋಷಿಸಲಾಗಿದೆ. ಅಲ್ಲದೆ, ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದು ಉತ್ತರ ಪ್ರದೇಶ ಪರಿಹಾರ ಆಯುಕ್ತ ರಣವೀರ್ ಪ್ರಸಾದ್ ತಿಳಿಸಿದ್ದಾರೆ.
ಪರಿಹಾರ ಘೋಷಣೆ
ಸಿಡಿಲು ಬಡಿದು ಮೃತಪಟ್ಟ ಕುಟುಂಬದವರಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಜತೆಗೆ ಪ್ರಧಾನಿ ಪರಿಹಾರ ನಿಯಿಂದ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ., ಗಾಯಗೊಂಡವರಿಗೆ ತಲಾ 50,000 ರೂ. ಪರಿಹಾರ ಘೋಷಿಸಲಾಗಿದೆ.
ಅಲ್ಲದೆ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ಸರ್ಕಾರಗಳು ಸಹ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ, ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ ಎಂದು ಘೋಷಿಸಿವೆ.