ಹೊಸದಿಲ್ಲಿ: ಮುಂಬರುವ ಸೆಪ್ಟೆಂಬರ್ ವೇಳೆಗೆ 12ರಿಂದ 18 ವರ್ಷದೊಳಗಿನ ಮಕ್ಕಳಿಗೆ ಜೈಡಸ್ ಲಸಿಕೆ ಲಭ್ಯವಾಗಲಿದೆ ಎಂದು ಲಸಿಕೆ ನಿರ್ವಹಣೆಗೆ ಸಂಬಂಸಿದ ರಾಷ್ಟ್ರೀಯ ತಜ್ಞರ ಸಮಿತಿ ಮುಖ್ಯಸ್ಥ ಡಾ. ಎನ್.ಕೆ. ಅರೋರಾ ತಿಳಿಸಿದ್ದಾರೆ.
ಕೊವ್ಯಾಕ್ಸಿನ್ 3ನೇ ಹಂತದ ಪ್ರಯೋಗ ಆರಂಭವಾಗಿದ್ದು ಸೆಪ್ಟೆಂಬರ್ ವೇಳೆಗೆ ಅಂತ್ಯವಾಗಲಿದೆ. ಹೀಗಾಗಿ ಆಗಿನಿಂದ ಲಸಿಕೆ ನೀಡುವಿಕೆಯನ್ನು ಆರಂಭಿಸಬಹುದು. ಅಲ್ಲದೆ, 2022ರ ಜನವರಿ ಇಲ್ಲವೆ ಫೆಬ್ರವರಿ ಆರಂಭದಲ್ಲಿ 2ರಿಂದ 18 ವರ್ಷದವರಿಗೆ ಲಸಿಕೆ ಲಭ್ಯವಾಗುವ ಸಾಧ್ಯತೆಗಳಿವೆ ಎಂದು ಅವರು ಹೇಳಿದ್ದಾರೆ.
ಸೆಪ್ಟೆಂಬರ್ ಅಂತ್ಯದ ವೇಳೆಗೆ ಲಸಿಕೆ ಲಭ್ಯವಾಗಲಿದ್ದು, ಶಾಲೆ ಆರಂಭ ಹಾಗೂ ಇತರೆ ಸಂಗತಿಗಳ ಮೇಲೆ ಇದು ಪ್ರಭಾವ ಬೀರಲಿದೆ ಎಂದಿದ್ದಾರೆ. ಮೂರನೇ ಅಲೆಯ ಭೀತಿಯ ಹಿನ್ನೆಲೆ ಮಕ್ಕಳಿಗೆ ಲಸಿಕೆ ಲಭ್ಯವಾಗಿಸುವೆಡೆಗೆ ಗಮನ ನೀಡಲಾಗಿದೆ. ಇದೇ ವೇಳೆ ಮೂರನೇ ಅಲೆ ಮಕ್ಕಳಿಗೆ ಅಪಾಯಕಾರಿಯಾಗುತ್ತದೆ ಎನ್ನುವುದು ತಪ್ಪು ಕಲ್ಪನೆಯಾಗಿರಬಹುದು ಎಂದು ಮಕ್ಕಳ ತಜ್ಞರ ಸಂಘ ಸೇರಿದಂತೆ ತಜ್ಞರು ಭರವಸೆ ನೀಡಿದ್ದಾರೆ. ಮುಂದಿನ ಅಲೆಯಲ್ಲಿ ಮಕ್ಕಳು ಸುರಕ್ಷಿತವಾಗಿರಲಿದ್ದಾರೆ. ಆದರೂ, ಈ ಬಗ್ಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ರೀತಿಯಲ್ಲಿ ನಿರ್ವಹಿಸಲು ಸರ್ಕಾರ ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ.
ಕೊರೋನಾ ತುರ್ತು ನಿರ್ವಹಣೆಗಾಗಿ ಕೇಂದ್ರ ಘೋಷಿಸಿರುವ ಪ್ಯಾಕೇಜ್ನಲ್ಲಿ ದೇಶದ 736 ಜಿಲ್ಲೆಗಳಲ್ಲಿ ಮಕ್ಕಳ ಕಾಳಜಿ ಕೇಂದ್ರ ಸ್ಥಾಪಿಸಲಾಗುವುದು ಎಂದು ನೂತನ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಹೇಳಿದ್ದಾರೆ.