ಹೊಸದಿಲ್ಲಿ :ದೇಶದಲ್ಲಿ ಈಗ ಶಿಕ್ಷಕರ ಒಟ್ಟು ಸಂಖ್ಯೆ 96.8ಲಕ್ಷಕ್ಕೇರಿದ್ದು,ಈ ಪೈಕಿ 49.2ಲಕ್ಷ ಮಂದಿ ಶಿಕ್ಷಕಿಯರಾಗಿದ್ದಾರೆ. ಈ ಮೂಲಕ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಶಿಕ್ಷಕರಿಗಿಂತ ಶಿಕ್ಷಕಿಯರ ಸಂಖ್ಯೆ ಹೆಚ್ಚಾಗಿದೆ ಎಂಬುದಾಗಿ ಯುನಿಫೈಡ್ ಡಿಸ್ಟ್ರಿಕ್ಟ್ ಇನ್ಫಾರ್ಮೇಶನ್ ಸಿಸ್ಟಮ್ ಫಾರ್ ಎಜುಕೇಶನ್ನ 2019-20ನೇ ಸಾಲಿನ ವರದಿ ಬಹಿರಂಗಪಡಿಸಿದೆ.
2012-13ರಲ್ಲಿ ದೇಶದಲ್ಲಿ ಶಿಕ್ಷಕಿಯರ ಸಂಖ್ಯೆ 35.8ಲಕ್ಷ ಇತ್ತು.2019-20ರ ವೇಳೆಗೆ ಇದು 49.2ಲಕ್ಷಕ್ಕೇರಿದೆ.ಇದೇ ವೇಳೆ ಶಿಕ್ಷಕರ ಸಂಖ್ಯೆಯೂ 42.4ಲಕ್ಷದಿಂದ 47.7ಲಕ್ಷಕ್ಕೇರಿದೆ ಎಂದು ಈ ವರದಿ ತಿಳಿಸಿದೆ.
ಕಿರಿಯ ಪ್ರಾಥಮಿಕ ತರಗತಿಗಳಲ್ಲಿ ಶಿಕ್ಷಕಿಯರ ಸಂಖ್ಯೆ ಒಂದು ಲಕ್ಷಕ್ಕೂ ಅಕ ಇದ್ದರೆ ಶಿಕ್ಷಕರ ಸಂಖ್ಯೆ ಕೇವಲ 27000. ಪ್ರಾಥಮಿಕ ಗ್ರೇಡ್ನಲ್ಲಿ 19.6ಶಿಕ್ಷಕಿಯರಿದ್ದರೆ, ಶಿಕ್ಷಕರ ಪ್ರಮಾಣ 15.7ಲಕ್ಷ ಇದೆ. ಆದರೆ ಹಿರಿಯ ಪ್ರಾಥಮಿಕ ಮಟ್ಟದಲ್ಲಿ ಶಿಕ್ಷಕರ ಸಂಖ್ಯೆ ಶಿಕ್ಷಕಿಯರ ಸಂಖ್ಯೆಗಿಂತ ಹೆಚ್ಚಾಗಿದೆ.ಇಲ್ಲಿ ಶಿಕ್ಷಕರ ಪ್ರಮಾಣ 11.5ಲಕ್ಷ ಇದ್ದರೆ ಶಿಕ್ಷಕಿಯರ ಪ್ರಮಾಣ 10.6ಲಕ್ಷವಿದೆ. ಸೆಕೆಂಡರಿ ಸ್ಕೂಲ್ ಮಟ್ಟದಲ್ಲಿ 6.3ಲಕ್ಷ ಶಿಕ್ಷಕರಿದ್ದರೆ ಶಿಕ್ಷಕಿಯರ ಸಂಖ್ಯೆ 5.2ಲಕ್ಷವಾಗಿದೆ.ಹೈಯರ್ಸೆಕೆಂಡರಿಯಲ್ಲಿ ಶಿಕ್ಷಕರ ಪ್ರಮಾಣ 3.7ಲಕ್ಷವಿದ್ದರೆ ಶಿಕ್ಷಕಿಯರ ಸಂಖ್ಯೆ 2.8ಲಕ್ಷವಾಗಿದೆ.
ದೇಶಾದ್ಯಂತ ಸರಕಾರಿ ಮತ್ತು ಸರಕಾರಿ ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆ ಹೆಚ್ಚಿದ್ದರೆ , ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಶಿಕ್ಷಕಿಯರ ಸಂಖ್ಯೆಯೇ ಹೆಚ್ಚಾಗಿದೆ.ರಾಜ್ಯ ಮಟ್ಟದಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಹೈಯರ್ ಗ್ರೇಡ್ ಮಟ್ಟದಲ್ಲಿ ಶಿಕ್ಷಕರ ಸಂಖ್ಯೆ ಶಿಕ್ಷಕಿಯರ ಸಂಖ್ಯೆಗಿಂತ ಹೆಚ್ಚಿದೆ. ಆದರೆ ಕೇರಳ, ದಿಲ್ಲಿ, ಮೇಘಾಲಯ, ಪಂಜಾಬ್, ತಮಿಳ್ನಾಡುಗಳಲ್ಲಿ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿಗಳಲ್ಲಿ ಕೂಡಾ ಮಹಿಳಾ ಶಿಕ್ಷಕಿಯರ ಪ್ರಮಾಣ ಹೆಚ್ಚಿದೆ.
ಇತರ ಕೆಲವು ದೇಶಗಳಿಗಿಂತ ಇಲ್ಲಿ ಪ್ರಾಥಮಿಕ ಮತ್ತು ಸೆಕೆಂಡರಿ ಸ್ಕೂಲ್ ಶಿಕ್ಷಕರ ವೇತನದಲ್ಲಿ ವ್ಯತ್ಯಾಸ ಇರುವ ಬಗ್ಗೆ ವಿವರಿಸಿದ ಟೀಚರ್ಸ್ ಫೌಂಡೇಶನ್ನ ಸ್ಥಾಪಕ ನಿರ್ದೇಶಕಿ ಮಾಯಾ ಮೆನನ್ ಅವರು , ದೇಶದಲ್ಲಿ ಶಿಕ್ಷಕರು ಹೆಚ್ಚು ವೇತನ ಲಭಿಸುವುದರಿಂದ ಅದರಲ್ಲೂ ಸರಕಾರಿ ವೇತನ ಹಿನ್ನೆಲೆಯಲ್ಲಿ ಸೆಕೆಂಡರಿ ಸ್ಕೂಲ್ಗಳಲ್ಲಿ ಪಾಠ ಮಾಡಲು ಬಯಸುತ್ತಾರೆ. ಹಾಗೆಯೇ ಇಂಟರ್ನ್ಯಾಷನಲ್ ಸ್ಕೂಲ್ಗಳಲ್ಲೂ ಖಾಸಗಿ ಶಾಲೆಗಳಿಗಿಂತ ಹೆಚ್ಚಿನ ವೇತನ ಲಭಿಸುವುದರಿಂದ ಅಲ್ಲೂ ಪುರುಷ ಶಿಕ್ಷಕರು ಹೆಚ್ಚಿನ ಪ್ರಮಾಣದಲ್ಲಿ ಇದ್ದಾರೆ ಎನ್ನುತ್ತಾರೆ.