ಗದಗ : ಗ್ರಾಮೀಣ ಮಟ್ಟದಲ್ಲಿ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ಗ್ರಾಮ ಸ್ವರಾಜ ಕನಸು ನನಸು ಮಾಡಬಹು ಎನ್ನುವುದಕ್ಕೆ ತಾಲ್ಲೂಕಿನ ಹುಲಕೋಟಿ ಗ್ರಾಮವು ದೇಶಕ್ಕೆ ಮಾದರಿಯಾಗಿದೆ.
ಹುಲಕೋಟಿ ಗ್ರಾಮವು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ `ಮಿಷನ್ ಅಂತ್ಯೋದಯ-2020′ ರಾಷ್ಟ್ರಮಟ್ಟದ ಸಮೀಕ್ಷೆಯಲ್ಲಿ ಪ್ರಥಮ ಸ್ಥಾನಗಳಿಸಿದೆ. ರ್ಯಾಂಕಿಂಗ್ನ ಟಾಪ್-10 ಸ್ಥಾನಗಳಲ್ಲಿ ಬೆಳಗಾವಿ ಜಿಲ್ಲೆಯ ಎರಡು ಗ್ರಾ.ಪಂ.ಗಳು ಸ್ಥಾನ ಪಡೆದಿವೆ.
ಬಡತನ ನಿವಾರಣೆಗೆ ಗ್ರಾ.ಪಂ.ಗಳು ಕೈಗೊಂಡ ಉಪಕ್ರಮಗಳ ಕುರಿತು ಕೇಂದ್ರ ಸರಕಾರ ಕಳೆದ ಮೂರು ವರ್ಷಗಳಿಂದ ಅಂತ್ಯೋದಯ ಸಮೀಕ್ಷೆ ನಡೆಸುತ್ತಿದೆ. 2018ರಲ್ಲಿ ಆರಂಭಗೊಂಡ ಈ ಸಮೀಕ್ಷೆಯಲ್ಲಿ ಸತತ ಎರಡು ವರ್ಷ 5ನೇ ಸ್ಥಾನದಲ್ಲಿದ್ದ ಹುಲಕೋಟಿ ಗ್ರಾ.ಪಂ. ಈ ಬಾರಿ ಮೊದಲ ಸ್ಥಾನಕ್ಕೆ ಜಿಗಿದಿದೆ. ಜೊತೆಗೆ ತೆಲಂಗಾಣ ರಾಜ್ಯದ ಮೇದಕ್ನ ಯಲಕುರ್ತಿ ಮತ್ತು ಪೆದ್ದಪಲ್ಲಿಯ ಸುಲ್ತಾನಪುರ ಗ್ರಾ.ಪಂ.ಗಳು ಮೊದಲ ಸ್ಥಾನವನ್ನು ಹಂಚಿಕೊಂಡಿವೆ. ಟಾಪ್ 5ನೇ ಮತ್ತು 6ನೇ ಸ್ಥಾನವನ್ನು ಕ್ರಮವಾಗಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ, ಮೂಡಲಗಿ ತಾಲೂಕಿನ ಕುಲಗೋಡ್ ಗ್ರಾ.ಪಂ.ಗಳು ಬಾಚಿಕೊಂಡಿರುವುದು ವಿಶೇಷವಾಗಿದೆ.
ಗ್ರಾಮೀಣ ಜನರ ಆದಾಯ ಮತ್ತು ಬದುಕಿನ ಮಟ್ಟವನ್ನು ಉನ್ನತೀಕರಿಸುವ ನಿಟ್ಟಿನಲ್ಲಿ ಗ್ರಾ.ಪಂ.ಗಳು ಕೈಗೊಂಡಿರುವ ಕ್ರಮಗಳನ್ನು ಆಧಾರಿಸಿ ರ್ಯಾಂಕಿಂಗ್ ನೀಡಲಾಗಿದೆ. ಕಳೆದ ಅಕ್ಟೋಬರ್ನಿಂದ ಡಿ.31ರ ವರೆಗೆ ನಡೆದ ಸಮೀಕ್ಷೆಯ 141 ಪ್ರಶ್ನಾವಳಿಯ ಒಟ್ಟು 100 ಅಂಕಗಳಲ್ಲಿ ಹುಲಕೋಟಿ ಗ್ರಾ.ಪಂ. ಗರಿಷ್ಟ 90 ಅಂಕಗಳನ್ನು ಪಡೆದು, ಪ್ರಥಮ ಸ್ಥಾನವನ್ನು ಅಲಂಕರಿಸಿದೆ.
ಹುಲಕೋಟಿ ಗ್ರಾಮ ಪಂಚಾಯತಿಯ ವಿಶೇಷ:
ಹುಲಕೋಟಿ ಒಂದು ಕಂದಾಯ ಗ್ರಾಮವನ್ನು ಹೊಂದಿದ್ದು, 28 ಜನ ಸದಸ್ಯಬಲ ಹೊಂದಿದೆ. ಒಟ್ಟು 11794 ಜನ ಸಂಖ್ಯೆಯಲ್ಲಿ ಶೇ.82.23 ರಷ್ಟು ಜನ ಸಾಕ್ಷರರಿದ್ದಾರೆ. ಜನಸಂಖ್ಯೆಗೆ ತಕ್ಕಂತೆ ಒಟ್ಟು 11 ಅಂಗನವಾಡಿ, 4 ಪ್ರಾಥಮಿಕ ಶಾಲೆ, 1 ಹಿರಿಯ ಪ್ರಾಥಮಿಕ ಶಾಲೆ, 2 ಪ್ರೌಢಶಾಲೆ, 2 ಪದವಿಪೂರ್ವ ಕಾಲೇಜು ಮತ್ತು 1 ಪದವಿ ಕಾಲೇಜು ಇವೆ. ಜೊತೆಗೆ ಡಿಪೆÇ್ಲೀಮಾ ಮತ್ತು ರೂರಲ್ ಇಂಜಿನಿಯರಿಂಗ್ ಕಾಲೇಜುಗಳಿವೆ. ಗ್ರಾಮದಲ್ಲಿ ಇ-ಗ್ರಂಥಾಲಯ ಸ್ಥಾಪಿಸಲಾಗಿದೆ.
ಗ್ರಾಮದಲ್ಲಿ 2733 ಕುಟುಂಬಗಳಿದ್ದು, ಗ್ರಾ.ಪಂ. ನಿಂದ ಪ್ರತಿನಿತ್ಯ 12 ದಶಲಕ್ಷ ಲೀಟರ್ ನೀರನ್ನು ಸಾರ್ವಜನಿಕರ ಬಳಕೆಗೆ ಪೂರೈಸಲಾಗುತ್ತದೆ. 2008ರ ಲ್ಲಿ ಕೆ.ಎಚ್.ಪಾಟೀಲ ಪ್ರತಿಷ್ಠಾನ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಿದೆ. ಪ್ರತಿ ಲೀ.ಗೆ 10 ಪೈಸೆ ದರದಲ್ಲಿ ಗ್ರಾಮದ ಅಂಗನವಾಡಿ, ಶಾಲೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಜೊತೆಗೆ ಡಿಬಿಓಟಿ ಅನುಷ್ಠಾನದಿಂದ ಗ್ರಾಮದಲ್ಲಿ ನದಿ ನೀರಿನ ಸೌಕರ್ಯ ಹೆಚ್ಚಿದೆ.
ಒಳಚರಂಡಿ ವ್ಯವಸ್ಥೆ ಹೊಂದಿರುವ ರಾಜ್ಯದ ಮೊಟ್ಟ ಮೊದಲ ಗ್ರಾಮ ಎಂಬುದು ಹುಲಕೋಟಿ ಹೆಗ್ಗಳಿಕೆ. 1:3 ಅನುಪಾತದ ಜನಸಂಖ್ಯೆಯ ದೂರದೃಷ್ಟಿಯೊಂದಿಗೆ ಗ್ರಾಮದಲ್ಲಿ 42 ಕಿ.ಮೀ. ಉದ್ದದ ಒಳಚರಂಡಿ ಮತ್ತು 1500 ಮ್ಯಾನ್ವೋಲ್ ನಿರ್ಮಿಸಿದೆ. ಇದರಿಂದ 2490 ಮನೆಗಳಿಗೆ ಅನುಕೂಲವಾಗಲಿದೆ. ಜೊತೆಗೆ ಒಳಚರಂಡಿ ನೀರಿನ ಸಂಸ್ಕರಿಸುವ ಘಟಕವನ್ನೂ ನಿರ್ಮಿಸಿದೆ. ಸಂಸ್ಕರಿಸಿದ ನೀರಿನಿಂದ 60 ಹೆಕ್ಟೇರ್ ಪ್ರದೇಶದ ತೋಟಗಾರಿಕೆ ಬೆಳೆಗಳಿಗೆ ನೀರುಣಿಸಲಾಗುತ್ತಿದೆ. ಜೊತೆಗೆ ಗ್ರಾಮದ ಬಹುತೇಕ ಎಲ್ಲ ರಸ್ತೆಗಳನ್ನು ಸಿಸಿ ಮತ್ತು ಡಾಂಬರೀಕರಣಗೊಳಿಸಲಾಗಿದೆ.
ಗ್ರಾಮದ 9 ಎಕರೆ ಪ್ರದೇಶದ ಮುಕ್ತಿವನಕ್ಕೆ ಆಧುನಿಕ ಸ್ಪರ್ಶ ನೀಡಲಾಗಿದೆ. ಅದರೊಂದಿಗೆ ಗ್ರಾಮದಲ್ಲಿ ಹಸಿರೀಕರಣಕ್ಕೂ ಒತ್ತು ನೀಡಿದ್ದು, ರಸ್ತೆ ಮಗ್ಗುಲಗಳಲ್ಲಿ ಗಿಡಗಳನ್ನು ಬೆಳೆಸಲಾಗಿದೆ. ಈ ಎಲ್ಲಾ ಅಂಶಗಳನ್ನು ಆಧರಿಸಿ, ಹುಲಕೋಟಿ ಗ್ರಾ.ಪಂ. 100ಕ್ಕೆ 90 ರಷ್ಟು ಅಂಕಗಳು ಗಳಿಸುವ ಮೂಲಕ ಇತರೆ ಪಂಚಾಯಿತಿಗಳಿಗೆ ಮಾದರಿಯಾಗಿದೆ.