ಪುಟ್ಟ ದೇಶವನ್ನು ಹಿಡಿತದಲ್ಲಿಟ್ಟುಕೊಳ್ಳುವ ಹುನ್ನಾರ ನೇಪಾಳದಲ್ಲಿಳಿದ ಚೀನೀ ನಿಯೋಗ

ಕಾಠ್ಮಂಡು: ನೇಪಾಳದಲ್ಲಿ ಆಳುವ ಕಮ್ಯುನಿಸ್ಟ್ ಪಾರ್ಟಿಯಲ್ಲಿ ಗಂಭೀರ ಆಂತರಿಕ ಬಿಕ್ಕಟ್ಟು ತಲೆದೋರಿ ಪಕ್ಷ ವಿಭಜನೆಯ ಭೀತಿ ಎದುರಿಸುತ್ತಿರುವಾಗಲೇ, ಈ ಪುಟ್ಟ ಪರ್ವತೀಯ ದೇಶದ ಮೇಲೆ ಹಿಡಿತ ಸಾಸಲು ಹುನ್ನಾರ ನಡೆಸುತ್ತಿರುವ ಕುಟಿಲ ಚೀನಾ , ಕಳುಹಿಸಿದ ಉನ್ನತ ನಿಯೋಗವೊಂದು ಕಾಠ್ಮಂಡುವಿಗೆ ಬಂದಿಳಿದಿದೆ.ಚೀನೀ ಪಕ್ಷಪಾತಿಯಾಗಿರುವ ನಿರ್ಗಮನ ಪ್ರಧಾನಿ ಕೆ.ಪಿ.ಶರ್ಮ ಒಲಿಯವರನ್ನೇ ಮತ್ತೆ ಅಕಾರಕ್ಕೆ ತರುವ ಯತ್ನವೊಂದರಲ್ಲಿ ತಳಮಟ್ಟದ ಪರಿಸ್ಥಿತಿಯನ್ನು ಅರಿಯಲು ಮುಂದಾಗಿದೆ.
ಈಗಾಗಲೇ ನೇಪಾಳ ಅಧ್ಯಕ್ಷೆ ವಿದ್ಯಾ ದೇವಿ ಭಂಡಾರಿ ಅವರು ಕೆ.ಪಿ.ಶರ್ಮ ಒಲಿ ಬಣದ ಒತ್ತಡಕ್ಕೆ ಮಣಿದು ಸಂಸತ್ತನ್ನು ವಿಸರ್ಜಿಸಿ ಏ.30 ಮತ್ತು ಮೇ10ಕ್ಕೆ ಮಧ್ಯಾವ ಸಂಸದೀಯ ಚುನಾವಣೆಯನ್ನು ಘೋಷಿಸಿದ್ದಾರೆ. ಒಲಿ ಮತ್ತು ಭಂಡಾರಿ ಕೂಟದ ತಂತ್ರವನ್ನು ಮಾಜಿ ಪ್ರಧಾನಿ ಪುಷ್ಪ ಕುಮಾರ್ ದಹಾಲ್ `ಪ್ರಚಂಡ’ನೇತೃತ್ವದ ನೇಪಾಳ ಕಮ್ಯುನಿಸ್ಟ್ ಪಾರ್ಟಿ ಬಣ ತೀವ್ರವಾಗಿ ವಿರೋಸಿದ್ದು, ದೇಶಾದ್ಯಂತ ಪ್ರತಿಭಟನೆಗಳು ಆರಂಭಗೊಂಡಿವೆ. ಈ ನಡುವೆ ಚೀನಾ ನೇಪಾಳದ ಆಂತರಿಕ ವ್ಯವಹಾರದಲ್ಲಿ ಮೂಗು ತೂರಿಸಲು ಯತ್ನಿಸುತ್ತಿರುವುದು ಕೂಡಾ ನೇಪಾಳಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ವಿವಿಧ ವಿದ್ಯಾರ್ಥಿ ಸಂಘಟನೆಗಳು, ರಾಜಕೀಯ ಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ.
ಚೀನಾ ನಿಯೋಗದ ನಿರ್ದಿಷ್ಟ ಕಾರ್ಯಸೂಚಿಯನ್ನು ಬಹಿರಂಗಪಡಿಸಲಾಗಿಲ್ಲವಾದರೂ , ಇಂಟರ್‍ನ್ಯಾಷನಲ್ ಡಿಪಾರ್ಟ್‍ಮೆಂಟ್ ಆಫ್ ದ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ(ಸಿಪಿಸಿ)ಯ ಉಪ ಸಚಿವ ಗುವೋ ಯೆಝೋವು ನೇತೃತ್ವದ ನಾಲ್ವರ ನಿಯೋಗ ಕಾಠ್ಮಂಡುವಿನಲ್ಲಿ ಆಳುವ ಎನ್‍ಸಿಪಿ ನಾಯಕರ ಜೊತೆ ಉನ್ನತ ಮಟ್ಟದ ಮಾತುಕತೆ ನಡೆಸಲಿದೆ ಎಂಬುದಾಗಿ ಮೈ ರಿಪಬ್ಲಿಕಾ ನ್ಯೂಸ್‍ಪೇಪರ್ ವರದಿ ಮಾಡಿದೆ.
ಈಗಾಗಲೇ ಪಕ್ಷದ ಮೇಲೆ ಹಿಡಿತ ಕಳೆದುಕೊಂಡಿರುವ ಪ್ರಧಾನಿ ಕೆ.ಪಿ.ಶರ್ಮ ಒಲಿ ಅವರು ಕಳೆದ ಭಾನುವಾರ ಇದ್ದಕ್ಕಿದ್ದಂತೆ , 275ಸದಸ್ಯ ಬಲದ ನೇಪಾಳದ ಸಂಸತ್ತನ್ನು (ಹೌಸ್ ಆಫ್ ರೆಪ್ರೆಸೆಂಟೇಟಿವ್)ವಿಸರ್ಜಿಸುವಂತೆ ಅಧ್ಯಕ್ಷರಿಗೆ ಶಿಫಾರಸು ಮಾಡಿದ್ದರು. ಇದೀಗ ಚೀನಾ ನಿಯೋಗ ನೇಪಾಳಕ್ಕೆ ಬಂದಿಳಿದಿದ್ದರೂ ಚೀನಾ ಅಥವಾ ಅದರ ರಾಯಭಾರಿ ಈ ಬಗ್ಗೆ ತುಟಿಬಿಚ್ಚುತ್ತಿಲ್ಲ.ಆದಾಗ್ಯೂ ಚೀನೀ ರಾಯಭಾರಿ ಹೌ ಯಾಂಖಿ ಅವರು ಈಗಾಗಲೇ ವಿದ್ಯಾ ದೇವಿ ಭಂಡಾರಿ, ಪ್ರಚಂಡ , ಎನ್‍ಸಿಪಿ ಅಧ್ಯಕ್ಷ ಮಾಧವ್ ಕುಮಾರ್ ನೇಪಾಳ್, ಮಾಜಿ ಸ್ಪೀಕರ್‍ಗಳಾದ ಕೃಷ್ಣ ಬಹಾದ್ದೂರ್ ಮಹಾರಾ, ವರ್ಷ ಮಾನ್ ಪುನ್ ಮತ್ತಿತರರ ಜೊತೆ ಸರಣಿ ಸಭೆ ನಡೆಸಿ ಚೀನೀ ನಿಯೋಗಕ್ಕೆ ಮುಂದಿನ ಕಾರ್ಯತಂತ್ರ ರೂಪಿಸಲು ವೇದಿಕೆ ನಿರ್ಮಿಸಿ ಕೊಟ್ಟಿದ್ದಾರೆ.
ಚೀನಾ ನೇಪಾಳದ ಆಂತರಿಕ ವ್ಯವಹಾರದಲ್ಲಿ ಮೂಗು ತೂರಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇಂತಹ ಅಕ್ರಮ ಹಸ್ತಕ್ಷೇಪ ನಡೆಸಿತ್ತು. ಇದೀಗ ನೇಪಾಳದ ಅನೇಕ ವಿದ್ಯಾರ್ಥಿ ಸಂಘಟನೆಗಳು ಕುಟಿಲ ಚೀನಾ ಹುನ್ನಾರದ ಬಗ್ಗೆ ಎಚ್ಚೆತ್ತುಕೊಂಡು ಪ್ರತಿಭಟನೆಗಿಳಿದಿವೆ.ಚೀನಾ ವಿರೋ ಘೋಷಣೆಗಳುಳ್ಳ ಭಿತ್ತಿ ಪತ್ರಗಳನ್ನು ಹಿಡಿದುಕೊಂಡು ವಿದ್ಯಾರ್ಥಿಗಳು ಚೀನಾ ರಾಯಭಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಚೀನೀ ರಾಯಭಾರಿ ಹೌ ನಡೆಸುತ್ತಿರುವ ಹಸ್ತಕ್ಷೇಪಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಆದರೆ ಭಾರತವು , ನೇಪಾಳದ ರಾಜಕೀಯ ಬಿಕ್ಕಟ್ಟು ಅದರ ಆಂತರಿಕ ವ್ಯವಹಾರವಾಗಿದೆ. ಇದರಲ್ಲಿ ತಾನು ಮೂಗುತೂರಿಸಲು ಹೋಗುವುದಿಲ್ಲ ಎಂಬುದಾಗಿ ಈಗಾಗಲೇ ಹೇಳಿದೆ. ಆದರೆ ನೇಪಾಳದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳನ್ನು ನಾವು ಗಮನಿಸುತ್ತಿದ್ದೇವೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಅನುರಾಗ್ ಶ್ರೀವಾಸ್ತವ ಪ್ರತಿಕ್ರಿಯಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ