ಬೆಳ್ತಂಗಡಿ: ಸಾಹಿತ್ಯ ಹಾಗೂ ಸಂವೇದನಾಶೀಲ ಮನಸ್ಸುಗಳು ಸುಳ್ಳಿನ ನಡುವೆ ಸತ್ಯವನ್ನು ಹುಡುಕಬೇಕಾಗಿದೆ. ನಮ್ಮ ಕಾರ್ಯಗಳಲ್ಲಿ ಹೇಗೆ ಬದ್ಧತೆ ಇರಬೇಕು ಎಂಬುದನ್ನು ಧರ್ಮಸ್ಥಳ ತೋರಿಸಿಕೊಟ್ಟಿದೆ ಎಂದು ವಿಮರ್ಶಕ, ವಾಗ್ಮಿ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು.
ಧರ್ಮಸ್ಥಳ ಲಕ್ಷದೀಪೊತ್ಸವ ಸಂದರ್ಭ ಸೋಮವಾರ ನಡೆದ 88 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಂಬಿಕೆಯೇ ಧರ್ಮಸ್ಥಳದ ಶಕ್ತಿ. 8ನೇ ಶತಮಾನದಿಂದ ಇದು ಅನೂಚಾನವಾಗಿ ಇರುವುದು ಎಲ್ಲರ ಅನುಭವಕ್ಕೆ ಬಂದಿದೆ. ನಂಬಿಕೆಗಳಿಗೆ ಬದುಕನ್ನು ಹಸನು ಮಾಡುವ ಶಕ್ತಿ ಇದೆ ಎಂದರು.
ಅರ್ಥಪೂರ್ಣ ಆಚರಣೆಯೇ ಪರಂಪರೆ. ಹಿರಿಯರ ವಿವೇಕ, ಯೌವ್ವನದ ಉತ್ಸಾಹ ಒಟ್ಟಿಗೆ ಹೋಗಬೇಕು. ಅದರಂತೆ ಸಮಕಾಲಿನ ಪರಂಪರೆಗೆ ಆಧುನಿಕತೆಯ ಸ್ಪರ್ಶ ಇರದಿದ್ದರೆ ಅದು ಅರ್ಥಹೀನವಾಗುತ್ತದೆ ಎಂದರು.
ಧರ್ಮ ಸಮಾಜದ ಬಳಿಗೇ ಹೋಗಬೇಕಾದ ಸನ್ನಿವೇಶ ಇದೆ. ಸಾಮಾಜಿಕ ಮೌಲ್ಯಗಳು ಧಾರ್ಮಿಕ ರೂಪಾಂತರವಾಗಬೇಕು. ಅಂತಃಕರಣದ ಧರ್ಮ ಬೇಕಾಗಿದೆ. ಧರ್ಮಕ್ಕೆ ಮಾತೃಹೃದಯ ಬೇಕಾಗಿದೆ ಎಂದರು.
ಉದ್ಘಾಟಿಸಿದ ವೇದಭೂಷಣ ಡಾ.ಎಸ್.ರಂಗನಾಥ್ ಅವರು, ನಮ್ಮ ಪರಂಪರೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ನೀಡುವುದು ನಮ್ಮೆಲ್ಲರ ಕರ್ತವ್ಯ. ಭಾಷಾಜ್ಞಾನ, ಸಹೃದಯತೆ, ಪಾಂಡಿತ್ಯ, ಸಹಿಷ್ಣುತೆ ಇವು ಸಾಹಿತ್ಯಾಧ್ಯಯನಕ್ಕೆ ಅಗತ್ಯವಾಗಿರುವುದು. ಸಾಹಿತ್ಯಕ್ಕೆ ವ್ಯಾಕರಣ ಮುಖ್ಯ. ಇಂದು ಮಕ್ಕಳಿಗೆ ಸಮೋಸಾ ಗೊತ್ತೇ ಹೊರತು ಸಮಾಸ ಗೊತ್ತಿಲ್ಲಾ. ಆದ್ಯ ಮತ್ತು ಅಂತಿಮ ಸಮಾಜದ ಬಾಹ್ಯಜೀವನವನ್ನು ಸರಿದಾರಿಗೆ ತರುತ್ತದೆ ಸಾಹಿತ್ಯ ಎಂದು ವಿಶ್ಲೇಷಿಸಿದರು.
ಸಾಹಿತ್ಯ ಸಮಾಜದ ಅಂಗ. ಅದು ಸಮಾಜದ ರಕ್ಷಣೆ, ಪೊಷಣೆಗೆ ಸಾಧನವಾಗಿರಬೇಕು. ಇಂದು ಬೆಲೆ ಗೊತ್ತಿದೆಯೇ ವಿನಾ ಮೌಲ್ಯದ ಬೆಲೆ ಗೊತ್ತಿಲ್ಲಾ. ಮೌಲ್ಯಗಳು ಆಂತರಿಕ ಶಾಂತಿ ನೆಮ್ಮದಿಯನ್ನು ನೀಡುತ್ತದೆ. ಸಾಹಿತ್ಯ ಜೀವನದ ಮೌಲ್ಯದ ಆಕಾರವಾಗಿರಬೇಕು ಎಂದರು.
ಸ್ವಾಗತಿಸಿದ ಧರ್ಮಾಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು, ನಮ್ಮ ನಾಡಿನ ಮಹತ್ವದ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದ್ದು, `ಸರ್ವಧರ್ಮ ಸಮನ್ವಯದ’ ಕ್ಷೇತ್ರವೆಂಬ ಮನ್ನಣೆ ಪಡೆದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 1933ರಲ್ಲಿ ಮಂಜಯ್ಯ ಹೆಗ್ಗಡೆಯವರು ಪ್ರಾರಂಭಿಸಿದ ಈ ಸಮ್ಮೇಳನಗಳು 87 ವಸಂತಗಳನ್ನು ಪೂರ್ಣಗೊಳಿಸಿದ್ದು, ಈ ವಿಶೇಷ ಸಂದರ್ಭಗಳಲ್ಲಿ ಕ್ಷೇತ್ರಕ್ಕೆ ಅನೇಕ ಶ್ರೇಷ್ಠ ಸಾಹಿತಿಗಳನ್ನು, ವಿದ್ವಾಂಸರನ್ನು ಸ್ವಾಗತಿಸಿ ಅವರಿಂದ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಿ, ಸಾಹಿತ್ಯದ ಪರಿಚಯ ಹಾಗೂ ಅಭಿರುಚಿಯನ್ನು ಗ್ರಾಮದ ಜನರಲ್ಲಿ ಮತ್ತು ಕ್ಷೇತ್ರಕ್ಕೆ ಬರುವ ಭಕ್ತಾದಿಗಳಲ್ಲಿ ಉಂಟು ಮಾಡುವ ಪ್ರಯತ್ನ ಮಾಡಿದ್ದೇವೆ.
ಒಂದು ಸಮ್ಮೇಳನವು ಯಾಕಾಗಿ ಮತ್ತು ಹೇಗೆಲ್ಲ ಜನೋಪಯೋಗಿಯಾಗಬಹುದು ಎಂಬುದು ನಾವಿಂದು ಚಿಂತಿಸಬೇಕಾದ ಅಂಶವೇ ಆಗಿದೆ. ಜಾಗತೀಕರಣ ಮತ್ತು ಖಾಸಗೀಕರಣಗಳ ವರ್ತಮಾನ ಸಂದರ್ಭದಲ್ಲಿ ವ್ಯಷ್ಟಿ ಸಮಷ್ಟಿಯಾಗುವ, ವೈಯಕ್ತಿಕತೆಯು ಸಾಮಾಜಿಕವಾಗುವ, ಸ್ಥಳೀಯತೆಯು ಜಾಗತಿಕಗೊಳ್ಳುವ ಈಗಿನ ಸಂಧ್ಯಾಕಾಲದಲ್ಲಿ ಸಾಹಿತ್ಯ ಸಮ್ಮೇಳನದ ಅರ್ಥವಂತಿಕೆಯು ಹಿಂದೆಗಿಂತಲೂ ಹೆಚ್ಚಿನ ಔಚಿತ್ಯವನ್ನು ಇಂದು ಪಡೆದಿದೆ. ಶ್ರೀ ಕ್ಷೇತ್ರದಲ್ಲಿ ನಡೆಯುತ್ತ ಬಂದಿರುವ ಧರ್ಮ, ಸಾಹಿತ್ಯ ಹಾಗೂ ಲಲಿತಕಲಾ ಗೋಷ್ಠಿಗಳು ಸಾಂಸ್ಕೃತಿಕ ದಾಖಲೆಗಳೂ ಆಗಿ ಸಾರ್ಥಕವೆನಿಸುತ್ತವೆ. ಬದುಕಿನಲ್ಲಿ ಸ್ಥಿತ್ಯಂತರಗಳು ಸಹಜ ಅದಕ್ಕೆ ಹೊಂದಿಕೊಂಡು ಮೌಲ್ಯಗಳೂ ಬದಲಾಗುತ್ತಿರುತ್ತವೆ. ಇಂಥಾ ಸಂದಿಗ್ಧ ಕಾಲದಲ್ಲಿ ನಮ್ಮ ಮುಂದಿನ ಪೀಳಿಗೆಗೆ ಸರಿಯಾದ ಮಾರ್ಗದರ್ಶನ ಮಾಡಿ ಅವರು ಸನ್ಮಾರ್ಗಿಗಳಾಗುವಂತೆ ಪ್ರೇರಣೆ ನೀಡುವುದು ಧರ್ಮ ಮತ್ತು ಸಾಹಿತ್ಯದ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಪುಸ್ತಕ ಹಾಗೂ ಓದುವ ಸಂಸ್ಕೃತಿಯನ್ನು ನಿರಂತರವಾಗಿ ಬೆಳೆಸಿಕೊಂಡು ಬರುತ್ತಿದೆ. ಕ್ಷೇತ್ರದಿಂದ ಪ್ರಕಟವಾಗುವ ಮಂಜುವಾಣಿ ಮಾಸ ಪತ್ರಿಕೆಯು ನಾಡಿನಲ್ಲಿ ಧರ್ಮ ಮತ್ತು ಸಾಹಿತ್ಯಾಭಿರುಚಿಯನ್ನು ಮೂಡಿಸುತ್ತಿದೆ. ಗ್ರಾಮೀಣ ಬದುಕಿನ ಕೃಷಿ ಹಾಗೂ ಜನರನ್ನು ಬಲಗೊಳಿಸುವ ಪ್ರಯತ್ನವನ್ನು `ನಿರಂತರ’ ಮಾಸ ಪತ್ರಿಕೆ ಮಾಡುತ್ತಿದ್ದು, ನಾಡಿನೆಲ್ಲೆಡೆ 8 ಲಕ್ಷಕ್ಕೂ ಹೆಚ್ಚು ಪ್ರಸಾರವನ್ನು ಹೊಂದಿರುವ ಪತ್ರಿಕೆಯಾಗಿದೆ. ಈ ಕಾರ್ಯವು ಶ್ರೀ ಕ್ಷೇತ್ರಕ್ಕೆ ಪ್ರೇರಣೆಯಾಗಿದೆ ಎಂದರು.
ಸಮ್ಮೇಳನದಲ್ಲಿ ಉಪನ್ಯಾಸ
ಪಂಪನ ಆದಿ ಪುರಾಣದಲ್ಲಿ ಜೀವನ ವೃಷ್ಟಿ ವಿಚಾರವಾಗಿ ಮೈಸೂರಿನ ಪ್ರಾಧ್ಯಾಪಕಿ, ಸಂಸ್ಕೃತ ಚಿಂತಕಿ ಡಾ.ಜ್ಯೋತಿ ಶಂಕರ್, ಲಿಪಿ-ಭಾಷೆ ಹಾಗೂ ಸಂಸ್ಕೃತಿ ವಿಚಾರವಾಗಿ ವಿಶ್ರಾಂತ ಪ್ರಾಧ್ಯಾಪಕ ಡಾ.ಪುಂಡಿಕಾಯಿ ಗಣಪಯ್ಯ ಭಟ್ ಉಪನ್ಯಾಸ ನೀಡಿದರು.
ಸಮ್ಮೇಳನದ ಅಧ್ಯಕ್ಷರು ಹಾಗೂ ಉದ್ಘಾಟಕರನ್ನು ಡಾ.ಹೆಗ್ಗಡೆಯವರು ಗೌರವಿಸಿದರು.
ಲಕ್ಷ ದೀಪೊತ್ಸವ ಸ್ವಾಗತ ಸಮಿತಿ ಖಜಾಂಚಿ ಡಿ.ಹರ್ಷೇಂದ್ರ ಕುಮಾರ್ ಉಪನ್ಯಾಸಕರನ್ನು ಗೌರವಿಸಿದರು.
ಹೇಮಾವತಿ ವಿ.ಹೆಗ್ಗಡೆ, ಸ್ವಾಗತ ಸಮಿತಿ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್, ಡಿ.ರಾಜೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಸುಪ್ರಿಯ ಹರ್ಷೇಂದ್ರ ಕುಮಾರ್, ನೀತಾ ರಾಜೇಂದ್ರ ಕುಮಾರ್, ಅಮಿತ್ ಕುಮಾರ್, ಶ್ರದ್ದಾ ಅಮಿತ್ ಉಪಸ್ಥಿತರಿದ್ದರು.
ಪುಸ್ತಕಗಳ ಬಿಡುಗಡೆ
ಇದೇ ಸಂದರ್ಭ ಧರ್ಮಸ್ಥಳ ಸಂಸ್ಕೃತಿ ಪ್ರತಿಷ್ಠಾನದ ನಿರ್ವಾಹಕ ಎಸ್.ಆರ್. ವಿಘ್ನರಾಜ್ ಅವರ ರಚಿಸಿದ `ಪ್ರಾಚೀನ ಭಾರತೀಯ ಲಿಪಿಗಳು’ ಹಾಗೂ ಅಂತಾರಾಷ್ಟ್ರೀಯ ಸಿತಾರ್ ವಾದಕ ಉಸ್ತಾದ್ ರಫೀಕ್ ಖಾನ್ ಅವರು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ರಚಿಸಿದ `ಖಾನ್ ಕಂಪೌಂಡ್’ ಮತ್ತು `ರೊಮಾನ್ಸಿಂಗ್ ದ ಸಿತಾರ್’ ಪುಸ್ತಕಗಳನ್ನು ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು.
ಉಜಿರೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ ಪ್ರಾಜೆಕ್ಟ್ ನಿರ್ದೇಶಕ ಡಿ.ಶ್ರೇಯಸ್ ಕುಮಾರ್ ಹಾಗೂ ಮೈತ್ರಿ ನಂದೀಶ್ ಸಮ್ಮಾನ ಪತ್ರ ವಾಚಿಸಿದರು.
ಉಜಿರೆ ಎಸ್.ಡಿ.ಎಂ. ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ.ಬಿ.ಪಿ. ಸಂಪತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿ, ರುಡ್ ಸೆಟ್ ನಿರ್ದೇಶಕ ಪಿ.ಸಿ. ಹಿರೇಮಠ ವಂದಿಸಿದರು.