ಎಸ್‍ಸಿಪಿ-ಟಿಎಸ್‍ಪಿ ಹಣದ ಬಗ್ಗೆ ಚರ್ಚೆ

ವಿಧಾನಸಭೆ: ಪರಿಶಿಷ್ಟ ಜಾತಿ ಮತ್ತು ವರ್ಗದ ಕಲ್ಯಾಣಕ್ಕಾಗಿ ಬಳಕೆಯಾಗಬೇಕಿದ್ದ ಎಸ್‍ಸಿಪಿ-ಟಿಎಸ್‍ಪಿ ಹಣವನ್ನು ಡೀಮ್ಡ್ ಕಾಮಗಾರಿಗಳಿಗೆ ಬಳಸುತ್ತಿರುವ ವಿಚಾರವಿಂದು ಚರ್ಚೆಗೆ ಗುರಿಯಾಯಿತು.
ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಪಿ.ರಾಜೀವ್, ಪರಿಶಿಷ್ಟ ಜಾತಿ, ವರ್ಗದ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿಡಬೇಕಾದ ಅನುದಾನವನ್ನು ಬಳಕೆಯಾಗದ ಹಣ ಎಂದು ಪರಿಗಣಿಸಿ ಇತರೆ ಕಾಮಗಾರಿಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ. ಉಕ್ಕಿನ ಸೇತುವೆ, ಮೆಟ್ರೋ ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ ಹೇಗೆ ವರ್ಗಾಯಿಸಲಾಗುತ್ತಿದೆ ? ಎಂದು ಪ್ರಶ್ನಿಸಿದರು.
ಇದಕ್ಕೆ ಧ್ವನಿಗೂಡಿಸಿದ ಮಹೇಶ್, ಈ ಪರಿಪಾಠ ಸರಿಯಲ್ಲ. ಕಾಯ್ದೆಯ ಉಲ್ಲಂಘನೆ ಆಗುತ್ತಿದೆ. ಇದು ಪರಿಶಿಷ್ಟರ ಮೇಲಿನ ದೌರ್ಜನ್ಯಕ್ಕೆ ಸರಿಸಮಾನವಾದ ಅಪರಾಧ ಎಂದು ವ್ಯಾಖ್ಯಾನಿಸಿದರು.
ಉತ್ತರ ನೀಡಿದ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು, ಡೀಮ್ಡ್ ಕಾಮಗಾರಿಗೆ ಎಸ್‍ಸಿಪಿ-ಟಿಎಸ್‍ಪಿ ನಿಯಲ್ಲಿ ಬಳಕೆ ಮಾಡಲು ಅವಕಾಶಗಳೀವೆ. ಆದರೆ, ಎಷ್ಟು ಪ್ರಮಾಣದ ಅನುದಾನ ಬಳಸಬಹುದು ಎಂಬ ಸ್ಪಷ್ಟತೆಯು ಕಾಯ್ದೆಯಲ್ಲಿ ಇಲ್ಲ. ಹೀಗಾಗಿ ಪೂರ್ಣಪ್ರಮಾಣದ ಅನುದಾನವನ್ನು ಡೀಮ್ಡ್ ಕಾಮಗಾರಿಗೆ ಬಳಸದಂತೆ ಸೂಚಿಸಲಾಗಿತ್ತು. ಇದಿಷ್ಟೇ ಅಲ್ಲದೆ, ಇದಕ್ಕೊಂದು ಮಿತಿ ನಿಗದಿಪಡಿಸಲು ಸಿಎಂ ಅವರಿಗೆ ಮನವರಿಕೆ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಅಷ್ಟರಲ್ಲಿ ಈ ಉತ್ತರ ಒಪ್ಪದ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು, ಈ ವಿಚಾರದ ಬಗ್ಗೆ ವಿಸ್ತೃತ ಚರ್ಚೆಗೆ ಅವಕಾಶ ನೀಡಬೇಕು. ಚರ್ಚೆಗೂ ಮೊದಲೇ ಸಚಿವರು ಕೊಟ್ಟಿರುವ ಉತ್ತರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಬಾವಿಗಿಳಿದು ಧರಣಿ ಆರಂಭಿಸಿದರು.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಧ್ಯಪ್ರವೇಶಿಸಿ, ಶೂನ್ಯವೇಳೆಯಲ್ಲಿ ಹೆಚ್ಚು ಚರ್ಚಿಸಲು ಅವಕಾಶ ಇಲ್ಲದೇ ಇರುವುದರಿಂದ ಅರ್ಧ ಗಂಟೆಗಳ ಕಾಲ ಚರ್ಚೆಗೆ ಪರಿವರ್ತಿಸಿ ಅವಕಾಶ ಕೊಡಲಾಗುವುದು. ಇದನ್ನು ಕೇಳಿಸಿಕೊಳ್ಳದೆಯೇ ಧರಣಿ ಮುಂದುವರಿಸಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಎಸ್‍ಸಿಪಿ, ಟಿಎಸ್‍ಪಿ ಹಣವು ದುರುಪಯೋಗ ಆಗಬಾರದು, ಆಯ ವರ್ಷದಲ್ಲಿ ನಿಗದಿಪಡಿಸಿದ ಅಷ್ಟೂ ಹಣವು ಆಯಾ ವರ್ಷವೇ ಖರ್ಚಾಗಬೇಕು. ಒಂದು ವೇಳೆ ಸಕಾರಣದಿಂದ ಖರ್ಚಾಗದೆ ಉಳಿದರೆ ಮುಂದಿನ ವರ್ಷ ಆ ವರ್ಗದ ಕಲ್ಯಾಣಕ್ಕಾಗಿಯೇ ಖರ್ಚಾಗಬೇಕು. ಸರ್ಕಾರಕ್ಕೆ ವಾಪಸಾಗಬಾರದು. ಒಟ್ಟು ಆದಾಯದ ಶೇ.21.1 ರಷ್ಟು ಹಣವನ್ನು ಎಸ್‍ಸಿ, ಎಸ್‍ಟಿ ಗೇ ಖರ್ಚು ಮಾಡಬೇಕು. ಡೀಮ್ಡ್ ಶಬ್ದವನ್ನು ನಾನೇ ತೆಗೆಯಬೇಕೆಂದಿದ್ದೆ. ಅಕಾರಿಗಳು ಬೇಡ ಎಂದಿದ್ದರು. ಆ ಪದ ಕೈಬಿಡಬೇಕು. ಆ ನಿ ಎಸ್‍ಸಿಎಸ್‍ಟಿಗೇ ಬಳಕೆಯಾಗಬೇಕೆಂಬುದರಲ್ಲಿ ರಾಜಿ ಆಗುವುದಿಲ್ಲ. ಇದರಿಂದ 35 ಸಾವಿರ ಕೋಟಿ ರೂ.ವರೆಗೆ ಇದ್ದ ಎಸ್‍ಸಿಪಿ, ಟಿಎಸ್‍ಪಿ ಹಣವು 25 ಸಾವಿರ ಕೋಟಿ ರೂ.ವರೆಗೆ ಬಂದು ನಿಂತಿದೆ. ಹೀಗೇ ಆದರೆ, ಪರಿಶಿಷ್ಟರ ಕಲ್ಯಾಣ ಕಷ್ಟ. ವಿಷಯದ ಗಂಭೀರತೆ ಅರಿತು ಚರ್ಚೆಗೆ ಅವಕಾಶ ನೀಡಿ ಎಂದು ಆಗ್ರಹಿಸಿದರು.
ಕಾನೂನು ಸಚಿವ ಮಾಧುಸ್ವಾಮಿ ಮಧ್ಯಪ್ರವೇಶಿಸಿ, ಎಲ್ಲರೂ ಹೇಳುತ್ತಿರುವುದು ಗಹನವಾದ ವಿಚಾರ. ಉತ್ತರವನ್ನು ವಿಥ್ ಡ್ರಾ ಮಾಡಿ, ಚರ್ಚೆಗೆ ಅವಕಾಶ ಕೊಡಲಾಗುತ್ತದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ