ಚಿಕ್ಕಮಗಳೂರು: ಕೇಂದ್ರದ ವಿವಿಧ ಕೃಷಿ ಮಸೂದೆಗಳ ವಿರುದ್ಧ ರಾಷ್ಟ್ರಾದ್ಯಂತ ನಡೆಯುತ್ತಿರುವ ಭಾರತ್ ಬಂದ್ ಕೇವಲ ರಾಜಕೀಯ ಪ್ರೇರಿತ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ವಿರೋಸುವ ನಾಟಕ ಮಾತ್ರ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಆದಾಯವನ್ನು 20-22ರ ವೇಳೆಗೆ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೃಷಿ ಸುಧಾರಣೆಗೆ ಸಂಬಂಧಪಟ್ಟ ಮೂರು ಮಹತ್ವದ ಮಸೂದೆಗಳನ್ನು ಜರಿಗೆ ತಂದಿದೆ. ಆದರೆ ಇದರ ವಿರುದ್ಧ ದಲ್ಲಾಳಿಗಳು ಮತ್ತು ಕಮಿಷನ್ ಏಜೆಂಟರು ರಾಜಕೀಯ ದುರುದ್ದೇಶದ ಪ್ರತಿಭಟನೆ ನಡೆಸಿ ಭಾರತ್ ಬಂದ್ ಕರೆ ಕೊಡುವ ಮೂಲಕ ರೈತರನ್ನು ದಾರಿ ತಪ್ಪಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಸಂಸತ್ತಿನ ಎರಡೂ ಸದನಗಳಲ್ಲಿ ಈ ಮಸೂದೆಗಳ ಬಗ್ಗೆ ವೂರು ದಿನ ವಿಸ್ತೃತ ಚರ್ಚೆ ನಡೆಸಿ ಅಂಗೀಕರಿಸಲಾಗಿದೆ. ಆದರೂ ಹೋರಾಟ ಏತಕ್ಕೆ ಎಂದು ಪ್ರಶ್ನಿಸಿದ ಅವರು, ಕೆಲವು ಸ್ಥಾಪಿತ ಹಿತಾಸಕ್ತಿಗಳು ಈ ಷಡ್ಯಂತ್ರದ ಹಿಂದೆ ಇದ್ದಾರೆ ಎಂದು ದೂರಿದರು.
ಪಂಜಬ್ ಮತ್ತು ಹರ್ಯಾಣದ ರೈತರು ಮೊದಲು ಹೋರಾಟ ಆರಂಭಿಸಿದರು. ಆ ಎರಡೂ ರಾಜ್ಯಗಳಲ್ಲಿ ಎಪಿಎಂಸಿಗಳನ್ನು ಮಧ್ಯವರ್ತಿಗಳು ನಿಯಂತ್ರಿಸುತ್ತಾರೆ. ಅವರಿಗೆ ಹೆದರಿ ಪಂಜಬ್ ಸರ್ಕಾರ ಮಸೂದೆ ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡಿದೆ ಎಂದರು.
ಅಂದು ಬೆಂಬಲಿಸಿತ್ತು ಕಾಂಗ್ರೆಸ್:
2013 ಮತ್ತು 2019ರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಇದೇ ಮಸೂದೆಗಳನ್ನು ಬೆಂಬಲಿಸಿದ ಕಾಂಗ್ರೆಸ್ ಸಹ ಈಗ ಅದರ ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡುತ್ತಿದೆ. 2013 ರಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂ ತಮ್ಮ ಪಕ್ಷ ಅಕಾರದಲ್ಲಿರುವ ಎಲ್ಲಾ ರಾಜ್ಯಗಳಿಗೆ ಪತ್ರ ಬರೆದು ಹಣ್ಣು, ತರಕಾರಿಗಳನ್ನು ಎಪಿಎಂಸಿಗಳಿಂದ ಹೊರಗಿಡಬೇಕೆಂದು ತಿಳಿಸಿದ್ದರು. ಆದರೆ ಇಂದು ಅವರದ್ದೇ ಪಕ್ಷ ಪ್ರತಿಭಟನೆಗಿಳಿದಿದೆ. ಕೇರಳದಲ್ಲಿ ಎಪಿಎಂಸಿ ಕಾಯ್ದೆಯನ್ನೇ ಜÁರಿಗೆ ತಂದಿಲ್ಲ. ಆದರೂ ಸಿಪಿಐನವರು ಕಾಯ್ದೆ ವಿರುದ್ಧ ಪ್ರತಿಭಟನೆಗೆ ಮುಂದಾಗಿ ರೈತರಿಗೆ ಮೋಸ ಮಾಡುವ ಇಬ್ಬಂದಿತನ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕೇಜ್ರಿವಾಲ್ ಇಬ್ಬಗೆ ನೀತಿ:
ಇದೀಗ ದೆಹಲಿ ಮುಖ್ಯಮಂತ್ರಿ ಕೇಜ್ರೀವಾಲ್ ಸಹ ಪ್ರತಿಭಟನೆಗೆ ಬೆಂಬಲಿಸುತ್ತಿದ್ದಾರೆ. ಇದೇ ವರ್ಷ ನವೆಂಬರ್ನಲ್ಲಿ ಈ ಮಸೂದೆಯನ್ನು ದೆಹಲಿ ಸರ್ಕಾರದಲ್ಲಿ ಅಳವಡಿಸಲಾಗಿದೆ. ಈಗ ಪ್ರತಿಭಟನೆಗೆ ಮುಂದಾಗಿರುವ ಅವರ ಇಬ್ಬಗೆ ನೀತಿ ಯಾವ ಹಂತಕ್ಕೆ ತಲುಪಿದೆ ಎನ್ನುವುದಕ್ಕೆ ಸಾಕ್ಷಿ ಎಂದರು.
ವ್ಯವಸ್ಥಿತ ಷಡ್ಯಂತ್ರ:
ಭಾರತದ ರೈತರಿಗೆ ಸ್ವಾತಂತ್ರ್ಯ ಕೊಡುವ ಎಪಿಎಂಸಿಗಳನ್ನು ದಲ್ಲಾಳಿಗಳ ಕಪಿಮುಷ್ಠಿಯಿಂದ ಹೊರ ತರುವ, ಬಿತ್ತುವ ಬೀಜದಿಂದ ಮಾರುಕಟ್ಟೆವರೆಗೆ ರೈತ ಸ್ವಾವಲಂಬಿ ಸ್ವತಂತ್ರವಾಗಬೇಕು. ಕೃಷಿ ಉತ್ಪನ್ನದ ಲಾಭ ದ್ವಿಗುಣವಾಗಬೇಕು ಎಂಬ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಭಿಲಾಷೆಗೆ ರಾಜಕೀಯ ದುರುದ್ದೇಶ ಇಟ್ಟುಕೊಂಡು ವಿರೋಸುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂದರು.
ರೈತರ ನೇತೃತ್ವ ವಹಿಸಲು ಸಿದ್ಧ:
ರೈತರ ನೇತೃತ್ವ ವಹಿಸಲು ಕೇಂದ್ರ, ರಾಜ್ಯ ಸರ್ಕಾರ ಸಿದ್ಧವಿದೆ. ಈ ವರ್ಷ ಉತ್ತಮ ಮಳೆಯ ಜೊತೆಗೆ ಒಳ್ಳೆಯ ಬೆಳೆಯನ್ನೂ ಬೆಳೆದಿದ್ದಾರೆ. ಮಸೂದೆಗಳ ಪರಿಣಾಮದಿಂದಾಗಿ ಮುಂಬೈ, ಚೆನ್ನೈನಂತಹ ದೊಡ್ಡ ದೊಡ್ಡ ನಗರಗಳಿಂದ ವರ್ತಕರು ಹಳ್ಳಿಗಳಿಗೆ ಬಂದು ಹೆಚ್ಚು ಬೆಲೆ ಕೊಟ್ಟು ಉತ್ಪನ್ನಗಳನ್ನು ಖರೀದಿಸಿದ್ದಾರೆ ಎಂದು ಹೇಳಿದರು.
ಪಂಜಬ್ ಮುಖ್ಯಮಂತ್ರಿ ಅಮರೇಂದರ್ ಸಿಂಗ್, ಕಮಲನಾಥ್ರಂತಹ ಕಾಂಗ್ರೆಸ್ ಮುಖಂಡರು ಕೇಂದ್ರದ ಕೃಷಿ ಸ್ಥಾಯಿ ಸಮಿತಿಯಲ್ಲಿದ್ದು ಅವರ ಸಲಹೆಯಂತೆ ಮಸೂದೆ ರಚಿಸಲಾಗಿತ್ತು. ಆದರೆ ಅಮರೇಂದರ ಸಿಂಗ್ ಮುಖ್ಯಮಂತ್ರಿಯಾದ ಕೂಡಲೆ ದಲ್ಲಾಳಿಗಳಿಗೆ ಹೆದರಿ ಮಸೂದೆಯನ್ನು ವಿರೋಸುತ್ತಿದ್ದಾರೆ ಎಂದರು.
ತಿದ್ದುಪಡಿ ಮಾಡಲು ಅವಕಾಶವಿದೆ:
ಎಲ್ಲಾ ಮಸೂದೆಗಳು ಶೇ. 100 ರಷ್ಟು ಸರಿಯಾಗಿರಲು ಸಾಧ್ಯವಿಲ್ಲ. ಸಣ್ಣಪುಟ್ಟ ವ್ಯತ್ಯಾಸವಿದ್ದರೆ ತಿದ್ದುಪಡಿ ಮಾಡಲು ಅವಕಾಶವಿದೆ. ಕನಿಷ್ಠ ಬೆಂಬಲ ಬೆಲೆ ಇನ್ನು ಮುಂದೆ ಸಿಗುವುದಿಲ್ಲವೆಂಬ ಆತಂಕ ರೈತರಲ್ಲಿದೆ. ಆದರೆ ಅದು ಹಾಗೆಯೇ ಮುಂದುವರಿಯುತ್ತದೆ ಎಂದು ಪ್ರಧಾನಿಗಳೇ ಭರವಸೆ ನೀಡಿದ್ದಾರೆ. ಆಗಸ್ಟ್ ತಿಂಗಳಲ್ಲಿ ದೇಶಾದ್ಯಂತ ಬೆಂಬಲ ಬೆಲೆಯಲ್ಲಿ ಅತಿ ಹೆಚ್ಚು ಕೃಷಿ ಉತ್ಪನ್ನ ಖರೀದಿಯಾಗಿದೆ. ಈ ವಿಚಾರದಲ್ಲಿ ಯಾವುದೆ ಆತಂಕ ಬೇಡ ಎಂದು ತಿಳಿಸಿದರು.
ಮಸೂದೆ ತಂದವರಿಗೆ ಅದರಲ್ಲಿರುವ ವ್ಯತ್ಯಾಸ ಸರಿಪಡಿಸುವುದು, ಅದರ ಒಳಿತುಗಳ ಬಗ್ಗೆ ಮನವರಿಕೆ ಮಾಡುವ ಜವಾಬ್ದಾರಿಯೂ ಇರುತ್ತದೆ. ನಮ್ಮ ಸರ್ಕಾರ ಅದನ್ನು ಮಾಡುತ್ತದೆ ಎಂದರು.