ಏಳು ಗಂಟೆಗಳ ಸಭೆ ಅಂತ್ಯ: ಡಿ.5ಕ್ಕೆ ಮುಂದಿನ ಸಭೆ; ಮುಂದುವರೆಯಲಿದೆ ರೈತರ ಪ್ರತಿಭಟನೆ

ನವದೆಹಲಿ: ಕೇಂದ್ರ ಹಾಗೂ ಪ್ರತಿಭಟನಾ ನಿರತ ರೈತರೊಂದಿಗೆ ಸತತ ಏಳು ಗಂಟೆಗಳ ಕಾಲ ನಡೆದ ಸಭೆ ವಿಫಲಗೊಂಡಿದ್ದು, ಇನ್ನೆರಡು ದಿನ ಬಿಟ್ಟು ಮತ್ತೆ ಸಭೆ ನಡೆಸಲು ನಿರ್ಧರಿಸಲಾಗಿದೆ. ಕೃಷಿ ಕಾಯ್ದೆ ರದ್ದುಗೊಳಿಸುವಂತೆ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳಿಗೆ ರೈತರು ಬಿಗಿ ಪಟ್ಟು ಹಿಡಿದಿದ್ದಾರೆ. ಈ ಹಿನ್ನಲೆ ರಾಷ್ಟ್ರ ರಾಜಧಾನಿಯಲ್ಲಿ ರೈತರ ಪ್ರತಿಭಟನೆ ಮುಂದುವರೆಯಲಿದೆ. ಡಿ. 5ರಂದು ಕೇಂದ್ರ ಸರ್ಕಾರ ರೈತರೊಂದಿಗೆ ಐದನೇ ಸುತ್ತಿನ ಮಾತುಕತೆ ನಡೆಸಲಿದೆ. ಇನ್ನು ಸಭೆ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್, ಸಭೆಯ ವೇಳೆ ಪ್ರಸ್ತಾಪಿತವಾದ ವಿಷಯಗಳನ್ನು ಬಗೆಹರಿಸಲು ಸರ್ಕಾರ ಖಂಡಿತವಾಗಿ ಕಾರ್ಯನಿರ್ವಹಿಸಲಿದೆ, ಅದೇ ರೀತಿ ರೈತರಿಗೆ ತಮ್ಮ ಹೋರಾಟ ಕೈಬಿಡುವಂತೆ ನಾವು ಮನವಿ ಮಾಡುತ್ತೇವೆ. ರೈತರ ಪ್ರತಿಭಟನೆಯಿಂದ ದೆಹಲಿ ಜನರು ತೊಂದರೆ ಪಡುವುದು ಬೇಡ. ಕನಿಷ್ಠ ಬೆಂಬಲ ಬೆಲೆ ಮುಂದುವರೆಯಲಿದೆ ಎಂಬ ಭರವಸೆ ನೀಡುತ್ತೇವೆ. ಪ್ರತಿಭಟನೆಯನ್ನು ಸಾಧ್ಯವಾದರೆ ಹಿಂದೆಗೆದುಕೊಳ್ಳುವುದು ಉತ್ತಮ ಎಂದು ತಿಳಿಸಿದರು.
ಸಭೆ ಬಳಿಕ ಮಾತನಾಡಿದ ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಟ್, ಕನಿಷ್ಟ ಬೆಂಬಲ ಬೆಲೆ ಬಗ್ಗೆ ಸರ್ಕಾರ ಸೂಚನೆ ನೀಡಿದೆ. ಮಾತುಕತೆ ಕೊಂಚ ಪ್ರಗತಿ ಕಂಡಿದೆ. ಕೃಷಿ ಕಾನೂನುಗಳು ತಪ್ಪಾಗಿದೆ, ಮುಂದಿನ ಸಭೆಯಲ್ಲಿ ಅವರು ಕಾನೂನು ಹಿಂಪಡೆಯುವಂತೆ ಸರ್ಕಾರದ ಮೇಲೆ ಒತ್ತಡ ಹಾಕುತ್ತೇವೆ. ಮುಂದಿನ ಸಭೆ ಎಲ್ಲವೂ ಅಂತ್ಯಕಾಣಲಿದೆ ಎಂಬ ಭರವಸೆ ಇದೆ ಎಂದರು.
ರೈತರ ಹಿತಾಸಕ್ತಿಗೆ ಸರ್ಕಾರ ಬದ್ದವಾಗಿದೆ. ಸರ್ಕಾರಕ್ಕೆ ಈ ಬಗ್ಗೆ ಯಾವುದೇ ಅಹಂ ಇಲ್ಲ, ರೈತ ಸಂಘಟನೆಗಳೊಂದಿಗೆ ಮುಕ್ತ ಮನಸ್ಸಿನಿಂದ ನಾವು ಚರ್ಚೆ ನಡೆಸಿದ್ದೇವೆ. ಹೊಸ ಕಾಯ್ದೆ ಪ್ರಕಾರ ರೈತರು ತಮ್ಮ ಕುಂದುಕೊರತೆಗಳನ್ನು ಎಸ್ಡಿಎಂ ನ್ಯಾಯಾಲಯಕ್ಕೆ ಕೊಂಡೊಯ್ಯಬಹುದು. ಎಸ್ಡಿಎಂ ಕೆಳ ಹಂತದ ನ್ಯಾಯಾಲಯವಾಗಿದ್ದು ಇದಕ್ಕೆ ಹೋಗಲು ಅವಕಾಶ ನೀಡಬೇಕು ಎಂದು ರೈತ ಸಂಘಟನೆ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಬೇಡಿಕೆಯನ್ನು ಸರ್ಕಾರ ಪರಿಗಣಿಸುತ್ತದೆ.
ಸಭೆಯಲ್ಲಿ 35 ಸಂಘಟನೆಗಳ ರೈತ ಮುಖಂಡರು ಭಾಗಿಯಾಗಿದ್ದರು. ಮಧ್ಯಾಹ್ನ ರೈತ ಮುಖಂಡರಿಗೆ ಸರ್ಕಾರ ವ್ಯವಸ್ಥೆ ಮಾಡಿದ್ದ ಊಟವನ್ನು ಅವರು ನಿರಾಕರಿಸಿದ್ದು, ತಾವೂ ಕಟ್ಟಿಕೊಂಡು ಬಂದಿದ್ದ ಬುತ್ತಿಯನ್ನು ಸೇವಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ