
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ-ಜಿಕೆವಿಕೆ ಆವರಣದಲ್ಲಿ ನವೆಂಬರ್ 11ರಿಂದ ಮೂರು ದಿನಗಳ ಕಾಲ ಕೃಷಿ ಮೇಳ ಆಯೋಜಿಸಲಾಗಿದೆ. ಈ ಬಾರಿಯ ಕೃಷಿ ಮೇಳ ಭೌತಿಕವಾಗಿಯೂ, ಡಿಜಿಟಲ್ ಆಗಿಯೂ ನಡೆಯಲಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ ಎಸ್.ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ವಿವರ ನೀಡಿದ ಅವರು, ಈ ಬಾರಿ ಮೂರು ಹೊಸ ತಳಿಗಳು ಮತ್ತು 17 ತಂತ್ರಜ್ಞಾನಗಳ ಬಿಡುಗಡೆ ನಡೆಯಲಿದೆ. ಕೃಷಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಹಮ್ಮಿಕೊಳ್ಳಲಾಗಿದೆ. ಈ ಬಾರಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 25 ಮಳಿಗೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದರು. ಸಾಮಾಜಿಕ ಜಾಲತಾಣಗಳಲ್ಲಿಯೂ ಮೇಳವನ್ನು ವೀಕ್ಷಿಸಬಹುದು. 18ರಿಂದ 60 ವರ್ಷದವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಮೇಳಕ್ಕೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಮತ್ತು ಸಾಮಾಜಿಕ ಅಂತರ ಕಾಪಾಡಬೇಕು ಎಂದು ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.