![graham](http://kannada.vartamitra.com/wp-content/uploads/2020/11/graham-677x451.jpg)
ಮಡಿಕೇರಿ: ರಸ್ತೆಯಲ್ಲಿ ಕಸ ಹಾಕಿ ಪರಾರಿಯಾದ ಪ್ರವಾಸಿಗರ ಜಾಡು ಹಿಡಿದು ಅವರಿಂದಲೇ ಕಸವನ್ನು ಹೆಕ್ಕಿಸಿ ಕಳುಹಿಸಿದ ಸ್ವಾರಸ್ಯಕರ ಘಟನೆಯೊಂದು ನಗರದಲ್ಲಿ ಶುಕ್ರವಾರ ನಡೆದಿದೆ.
ಮಡಿಕೇರಿ- ಚೆಟ್ಟಳ್ಳಿ ಮಾರ್ಗದಲ್ಲಿ (ಕೊಡಗು ವಿದ್ಯಾಲಯದ ಬಳಿ) ಪ್ರವಾಸಿಗರು ತಾವು ಖರೀದಿಸಿ ತಂದಿದ್ದ ಪಿಜ್ಜಾವನ್ನು ತಮ್ಮ ವಾಹನದಲ್ಲೇ ಕುಳಿತು ತಿಂದು ಅನಂತರ ಅದರ ಬಾಕ್ಸ್ ಮತ್ತು ಕಸವನ್ನು ರಸ್ತೆಯಲ್ಲೇ ಸುರಿದು, ಗಲೀಜು ಮಾಡಿ ಅಲ್ಲಿಂದ ಮೈಸೂರು ಮಾರ್ಗವಾಗಿ ತೆರಳಿದ್ದರು.
ಈ ಮಾರ್ಗವಾಗಿ ತೆರಳುತ್ತಿದ್ದ ಕಡಗದಾಳು ಪಂಚಾಯಿತಿ ಮಾಜಿ ಅಧ್ಯಕ್ಷ ಮಾದೇಟಿರ ತಿಮ್ಮಯ್ಯ ಅವರು ಇದನ್ನು ಗಮನಿಸಿ ತಕ್ಷಣ ಆ ಬಾಕ್ಸ್ ಪರಿಶೀಲಿಸಿದಾಗ ಅದರಲ್ಲಿ ಪಿಜ್ಜಾ ಖರೀದಿದಾರನ ಹೆಸರು, ವಿಳಾಸ ಮತ್ತು ಫೋನ್ ನಂಬರ್ ಪತ್ತೆಯಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ತಿಮ್ಮಯ್ಯ ಅವರು ಆ ನಂಬರ್ಗಳಿಗೆ ಕರೆ ಮಾಡಿ ಕಸ ತೆಗೆದು ಹೋಗುವಂತೆ ತಾಕೀತು ಮಾಡಿದ್ದಾರೆ.
ಈ ಸಂದರ್ಭದಲ್ಲಿ ಪಿರಿಯಾಪಟ್ಟಣ ತಲುಪಿದ್ದ ಪ್ರವಾಸಿಗರು ಆರಂಭದಲ್ಲಿ ಹಿಂತಿರುಗಲು ನಿರಾಕರಿಸಿದರೂ, ಅನಂತರ ಪೊಲೀಸರಿಗೆ ಮಾಹಿತಿ ಹೋಗಿ ಅವರಿಂದ ಸೂಚನೆ ಬಂದಿದೆ. ಕೊನೆಗೂ ತಿಮ್ಮಯ್ಯ ಅವರ ಕರೆಗೆ ಸ್ಪಂದಿಸಿ ಮರಳಿ ತಾವು ಕಸ ಎಸೆದಿದ್ದ ಚೆಟ್ಟಳ್ಳಿ ರಸ್ತೆಗೆ ವಾಪಸ್ ಬಂದಿದ್ದಾರೆ. ಸುಮಾರು 50 ಕಿ.ಮೀ. ಹಿಂದಕ್ಕೆ ಬಂದು ನಂತರ ತಾವು ಕಸ ಹಾಕಿದ್ದ ಪ್ರದೇಶದಲ್ಲಿದ್ದ ಕಸವನ್ನೆಲ್ಲ ತೆಗೆದು ಶುಚಿಗೊಳಿಸಿದ್ದಾರೆ.
ಮಡಿಕೇರಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಅವರಿಗೆ ತಿಮ್ಮಯ್ಯ ಅವರು ವಿಷಯ ತಿಳಿಸಿದಾಗ ಕೂಡಲೇ ಅವರು ಪ್ರವಾಸಿಗರಿಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಸೂಚನೆ ನೀಡಿದ್ದರು.
ಈ ಹಿಂದೆ ಆಯುಧ ಪೂಜೆ ಮುನ್ನಾ ದಿನ ಮರಗೋಡುವಿನ ವರ್ಕ್ಶಾಪ್ನ ಕಸವನ್ನು ಕಡಗದಾಳು ಬಳಿ ಎಸೆದು ಪರಾರಿಯಾಗಿದ್ದನ್ನು ಸಾಮಾಜಿಕ ಜಾಲ ತಾಣದ ಮೂಲಕ ಪ್ರಸಾರ ಮಾಡಿದ್ದ ತಿಮ್ಮಯ್ಯ ಅವರು, ಬಳಿಕ ವರ್ಕ್ಶಾಪ್ ಮಾಲೀಕರೇ ಕಸ ತೆಗೆಸುವಂತೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.