ಚಿಕ್ಕಮಗಳೂರು: 2017, 2018 ಮತ್ತು 2019ನೇ ಸಾಲಿನ ಕ್ರೀಡಾ ಕ್ಷೇತ್ರಕ್ಕೆ ಸಂಬಂಸಿದ ಏಕಲವ್ಯ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಕ್ರೀಡಾ ಪೊಷಕ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಸಿ.ಟಿ.ರವಿ ಭಾನುವಾರ ಬಿಡುಗಡೆಗೊಳಿಸಿದರು.
ಪ್ರಶಸ್ತಿಗೆ ಆಯ್ಕೆಯಾದವರ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಏಕಲವ್ಯ ಪ್ರಶಸ್ತಿಗೆ ಮೂರು ವರ್ಷದಲ್ಲಿ 31 ಮಂದಿ, ಜೀವಮಾನ ಸಾಧನೆಗೆ 6 ಮಂದಿ, ಕ್ರೀಡಾರತ್ನ ಪ್ರಶಸ್ತಿಗೆ 27 ಮಂದಿ ಹಾಗೂ ಕ್ರೀಡಾ ಪೊಷಕ ಪ್ರಶಸ್ತಿಗೆ 5 ಮಂದಿಯನ್ನು ಆಯ್ಕೆ ಮಾಡಲಾಗಿದೆ ಎಂದು ವಿವರಿಸಿದರು.
ಚುನಾವಣೆ ನೀತಿ ಸಂಹಿತೆ ಹಾಗೂ ಆಯ್ಕೆ ಸಮಿತಿ ರಚನೆ ಆಗದಿರುವುದು ಮತ್ತಿತರೆ ಕಾರಣದಿಂದಾಗಿ ಕಳೆದ ಎರಡು ವರ್ಷದಿಂದ ಪ್ರಶಸ್ತಿ ನೀಡಲು ಸಾಧ್ಯವಾಗಿರಲಿಲ್ಲ. ಇದೀಗ 2017-18ಸೇರಿದಂತೆ 19ನೇ ಸಾಲಿಗೂ ಸಾಧಕರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಏಕಲವ್ಯ ಪ್ರಶಸ್ತಿಗೆ ಏಕಲವ್ಯನ ಕಂಚಿನ ಪ್ರತಿಮೆ, ಸ್ಕ್ರೋಲ್, ಸಮವಸ್ತ್ರ ಮತ್ತು 2 ಲಕ್ಷ ರೂ. ನಗದು, ಜೀವಮಾನ ಸಾಧನೆ ಪ್ರಶಸ್ತಿಗೆ ಪ್ರಶಸ್ತಿ ಫಲಕ, ಸಮವಸ್ತ್ರ ಮತ್ತು 1.50 ಲಕ್ಷ ರೂ. ನಗದು, ಕ್ರೀಡಾರತ್ನ ಪ್ರಶಸ್ತಿಗೆ ಪ್ರಶಸ್ತಿ ಫಲಕ, ಸ್ಕ್ರೋಲ್, ಸಮವಸ್ತ್ರ ಮತ್ತು 1 ಲಕ್ಷ ರೂ. ನಗದು, ಕ್ರೀಡಾ ಪೊಷಕ ಪ್ರಶಸ್ತಿಗೆ ಪ್ರಶಸ್ತಿ ಪತ್ರ ಮತ್ತು 5 ಲಕ್ಷ ರೂ. ನಗದು ನೀಡಲಾಗುವುದು ಎಂದರು.