ಕೊಪ್ಪಳ: ಆರೋಪ ಮಾಡಲು ಯಾವುದೇ ವಿಷಯಗಳಿಲ್ಲದ ಹಿನ್ನೆಲೆಯಲ್ಲಿ ಈವರೆಗೂ ದಲ್ಲಾಳಿಗಳ ಪರ ಇರುವ ಕಾಂಗ್ರೆಸ್ ಹತಾಶ ಭಾವದಿಂದ ಬಿಜೆಪಿಯನ್ನು ರೈತ ವಿರೋ ಎಂದು ಬಿಂಬಿಸಲು ಹೊರಟಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಕೊಪ್ಪಳದ ಶಿವಶಾಂತ ಮಂಗಲಭವನದಲ್ಲಿ ಬುಧವಾರ ನಡೆದ ಕರ್ನಾಟಕ ವಿಧಾನ ಪರಿಷತ್ ಚುನಾವಣೆಯ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಪ್ರಚಾರದ ಹಿನ್ನೆಲೆಯಲ್ಲಿ ಮಂಡಲ ಪ್ರಧಾನಿಗಳು ಹಾಗೂ ಮುಖಂಡರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ಈ ಚುನಾವಣೆಯಲ್ಲಿ ಸೋತು ಸುಣ್ಣವಾಗಲಿದೆ. ಹೀಗಾಗಿ ಬಿಜೆಪಿ ವಿರುದ್ಧ ಇಲ್ಲ ಸಲ್ಲದ ಅಂಬೇಡ್ಕರ್ ವಿರೋ, ರೈತ ವಿರೋ, ಬಡವರ ವಿರೋ ಎಂದು ಆರೋಪಿಸುವ ಕೆಲಸ ಮಾಡುತ್ತಿದೆ ಎಂದರು.
ಈ ಚುನಾವಣೆ ಟ್ರೆಂಡ್ ಸೆಟ್ ಮಾಡುವ ಚುನಾವಣೆ ಅಲ್ಲ. ಮೈಂಡ್ಸೆಟ್ ಮಾಡುವ ಚುನಾವಣೆಯಾಗಿದೆ. ಕಾರ್ಯಕರ್ತರು ಶಿಕ್ಷಕ ಮತದಾರರ ಬಳಿ ಹೋಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕುರಿತು ಮನವರಿಕೆ ಮಾಡಬೇಕು ಎಂದರು.
ಮೋದಿ ಯುಗ ಪರಿವರ್ತಕ:
ಬೇರೆ ರಾಜ್ಯದಲ್ಲಿ ಶಿಕ್ಷಕರಿಗೆ ಎಂಟು ತಿಂಗಳಾದರೂ ಸಂಬಳ ನೀಡಿಲ್ಲ. ಆದರೆ ನಾವು ಸಂಕಷ್ಟದಲ್ಲಿ ಶಿಕ್ಷಕರ ಸಂಬಳ ನಿಲ್ಲಿಸದೆ ನೀಡಿದ್ದೇವೆ ಎಂದರು.
ಪ್ರಧಾನಿ ಮೋದಿ ಅವರು ಮಾಡಿದ ಪರಿವರ್ತನೆ ಯುಗಕ್ಕೆ ಈ ಚುನಾವಣೆ ನಾಂದಿಯಾಗುತ್ತದೆ ಎಂದರು.
ಈಶಾನ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಸೇರಿದಂತೆ ನಾಲ್ಕು ವಿಧಾನ ಪರಿಷತ್, ಎರಡು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದೆ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ನಂತರ ಸಚಿವ ಬಿ.ಸಿ. ಪಾಟೀಲ್, ಸಂಸದ ಸಂಗಣ್ಣ ಕರಡಿ, ಅಭ್ಯರ್ಥಿ ಶಶಿಲ್ ನಮೋಶಿ, ಮಾತನಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್, ಶಾಸಕರಾದ ಹಾಲಪ್ಪ ಆಚಾರ, ಪರಣ್ಣ ಮುನವಳ್ಳಿ, ಬಸವರಾಜ ದಡೆಸೂಗೂರು, ಅಮರೇಶ ಕರಡಿ, ಸಿ.ವಿ.ಚಂದ್ರಶೇಖರ, ಕೆ.ಶರಣಪ್ಪ, ವಿರುಪಾಕ್ಷಪ್ಪ ಸಿಂಗನಾಳ, ಹೆಮಲತಾ ನಾಯಕ, ಈಶಪ್ಪ ಹಿರೇಮನಿ, ಸಿದ್ಧೇಶ ಯಾದವ್ ಸೇರಿದಂತೆ ಮತ್ತಿತರರು ಇದ್ದರು.