ಗದಗ: ಶಿರಾ ಹಾಗೂ ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರ ತಂತ್ರ-ಕುತಂತ್ರಗಳನ್ನು ಬಿಜೆಪಿ ಪಕ್ಷವು ಚಿದ್ರ ಮಾಡಿ ಗೆಲುವು ಸಾಸಲಿದೆ ಎಂದು ಸಚಿವ ಬಿ.ಶ್ರೀರಾಮುಲು ಅವರು ಭವಿಷ್ಯ ನುಡಿದರು.
ನಗರದ ಅವರ ನಿವಾಸದಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಹಾಗೂ ನಾಲ್ಕು ವಿಧಾನ ಪರಿಷತ್ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ಹೇಳಿದ ಅವರು ಡಿ.ಕೆ. ಶಿವಕುಮಾರ ಅವರು ನಮ್ಮ ಪಕ್ಷ ವಿರುದ್ಧ ಸಾಕಷ್ಟು ಟೀಕೆ ಟಿಪ್ಪಣಿ ಮಾಡುತ್ತಿದ್ದಾರೆ. ಈಗ ಸಹೋದರ ಡಿ.ಕೆ. ಸುರೇಶ್ ಅವರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಆರ್.ಆರ್ ನಗರ ವಿಧಾನಸಭೆ ಕ್ಷೇತ್ರ ಉಳಿಸಿಕೊಳ್ಳುವಲ್ಲಿ ಪ್ರತಿಷ್ಠೆಯಿದ್ದು, ಈ ಬಾರಿ ಅಲ್ಲಿ ಕಾಂಗ್ರೆಸ್ ಸೋಲುಂಡರೆ ಸ್ವಪಕ್ಷದಲ್ಲಿ ಡಿ.ಕೆ.ಶಿವಕುಮಾರ ನಾಯಕತ್ವದ ಕುರಿತು ಪ್ರಶ್ನೆಗಳು ಉದ್ಭವಿಸಲಿವೆ ಎಂದು ಹೇಳಿದರು.
ನಾನು ಬಯಸಿದ ಸಮಾಜ ಕಲ್ಯಾಣ ಖಾತೆ ನನಗೆ ಸಿಕ್ಕಿದ್ದಕ್ಕೆ ಖುಷಿ ಇದೆ. ಮುಂದಿನ 10 ವರ್ಷಗಳ ನಿಗದಿತ ಸಮಯದಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಮಕ್ಕಳು ಓಲಂಪಿಕ್ನಲ್ಲಿ ಭಾಗವಹಿಸುವಷ್ಟು ಬದಲಾವಣೆ ಮಾಡುತ್ತೇನೆ. ವಿಧಾನಸಭೆ ಚುನಾವಣೆಯಲ್ಲಿ ಸಂದರ್ಭದಲ್ಲಿ ನಾನು ಡಿಸಿಎಂ ಆಗಬೇಕು ಎಂದು ಜನರ ಅಭಿಪ್ರಾಯವಾಗಿತ್ತು. ಆದರೆ, ಚುನಾವಣೆಯಲ್ಲಿ ನಮ್ಮ ಪಕ್ಷ ಪೂರ್ಣ ಪ್ರಮಾಣದಲ್ಲಿ ಅಕಾರಕ್ಕೆ ಬರಲಿಲ್ಲ. ಬೇರೆ ಬೇರೆ ಕಾರಣಗಳಿಂದ ಡಿಸಿಎಂ ಸ್ಥಾನ ಕೈ ತಪ್ಪಿದೆ. ಮುಂದಿನ ದಿನಗಳಲ್ಲಿ ಸಿಎಂ ಹಾಗೂ ರಾಷ್ಟ್ರೀಯ ನಾಯಕರ ಆಶೀರ್ವಾದ ಇದ್ದರೆ ಆಗಬಹುದು ಎಂದು ಹೇಳಿದರು.
ಎಸ್ಟಿ ಮೀಸಲಾತಿ ಹೆಚ್ಚಳ ಬಗ್ಗೆ ವಾಲ್ಮೀಕಿ ಶ್ರೀಗಳ ಜೊತೆ ಮಾತಾಡಿದ್ದೇನೆ. ಜನಸಂಖ್ಯಾ ಆಧಾರದ ಮೇಲೆ ಶೇ.7.5ರಷ್ಟು ಮೀಸಲಾತಿ ನೀಡುವ ಬಗ್ಗೆ ವಾಲ್ಮೀಕಿ ಶ್ರೀಗಳ ನೇತೃತ್ವದಲ್ಲಿ ಒತ್ತಾಯ ಮಾಡಲಾಗುತ್ತಿದೆ. ಈ ಬಗ್ಗೆ ಸರ್ಕಾರ ಶೀಘ್ರ ಅಂತಿಮ ತೀರ್ಮಾನ ತೆಗೆದುಕೊಳ್ಳುವ ವಿಶ್ವಾಸವಿದೆ ಎಂದರು.
ಆರೋಗ್ಯ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿಲ್ಲ ಈ ಬಗ್ಗೆ ಸೋಶಿಯಲ್ ಆಡಿಟ್ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲವೂ ಗೊತ್ತಾಗಲಿದೆ ಎಂದು ಹೇಳಿದ ಅವರು, ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಎಸ್.ವಿ.ಸಂಕನೂರ ಅವರು ಸ್ರ್ಪಸಿದ್ದು, ಈ ಬಾರಿ ಅವರನ್ನು ಶಾಸಕರು, ಸಂಸದರು ಸಂಕನೂರ ಅವರ ಗೆಲುವಿಗಾಗಿ ಶ್ರಮಿಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸದ ಶಿವಕುಮಾರ ಉದಾಸಿ, ಯುವ ಮುಖಂಡ ಅನಿಲ ಮೆಣಸಿನಕಾಯಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ರವಿ ದಂಡಿನ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.