
ಕೊಡಗು (ತಲಕಾವೇರಿ): ತೀರ್ಥೋದ್ಬವಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಬೆಳಗ್ಗೆ 7 ಗಂಟೆ 3 ನಿಮಿಷಕ್ಕೆ ಕನ್ಯಾಲಗ್ನದಲ್ಲಿ ತೀರ್ಥೋದ್ಭವ ಆಗಲಿದೆ. ಬ್ರಹ್ಮಕುಂಡಿಕೆಯ ಬಳಿ ಈಗಾಗಲೇ ವಿವಿಧ ಪೂಜಾ ಕೈಂಕರ್ಯಗಳು ಆರಂಭವಾಗಿದ್ದು, ಬ್ರಹ್ಮ ಕುಂಡಿಕೆ, ಅಗಸ್ತೇಶ್ವರ ದೇವಾಲಯ ಮತ್ತು ಭಾಗಮಂಡಲ ದೇವಾಲಯಗಳಿಗೆ ವಿದ್ಯುತ್ ದೀಪ ಮತ್ತು ಪುಷ್ಪಾಲಂಕಾರ ಮಾಡಲಾಗಿದೆ.
ಆದರೆ, ಕೊಡಗು ಜಿಲ್ಲೆಯಲ್ಲಿ ಕೋವಿಡ್ ಮಿತಿ ಮೀರುತ್ತಿರುವುದರಿಂದ ತೀರ್ಥೋದ್ಭವ ಸಂದರ್ಭದಲ್ಲಿ ದೇವಾಲಯ ಅರ್ಚಕರು, ಸಿಬ್ಬಂದಿ ಮತ್ತು ಉಸ್ತುವಾರಿ ಸಚಿವರು ಹಾಗೂ ಕೆಲವೇ ಅಧಿಕಾರಿಗಳಿಗೆ ಮಾತ್ರವೇ ಭಾಗವಹಿಸಲು ಅವಕಾಶ ನೀಡಲಾಗಿದೆ. ತೀರ್ಥೋದ್ಭವದ ಬಳಿಕ ಭಕ್ತರು ತಲಕಾವೇರಿಗೆ ಬಂದು ತೀರ್ಥ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ತೀರ್ಥ ಪಡೆದುಕೊಳ್ಳಲು ನೂಕುನುಗ್ಗಲು ಆಗದಂತೆ ಕೊಳದ ಸುತ್ತಮುತ್ತ ಬ್ಯಾರಿಕೇಡ್ ಅಳವಡಿಸಲಾಗಿದೆ. ಅಲ್ಲದೆ ತೀರ್ಥ ವಿತರಣೆಗೆ ಐದು ಕೌಂಟರ್ ತೆರೆಯಲಾಗಿದ್ದು, ಪ್ರತಿ ಕೌಂಟರ್ ಬಳಿ ತಲಾ ಎರಡು ಮೂರು ಕೊಳಾಯಿಗಳನ್ನು ಇಟ್ಟು ವ್ಯವಸ್ಥೆ ಮಾಡಲಾಗಿದೆ.
ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬರುವ ಭಕ್ತರಿಗೆ ಕೋವಿಡ್ ಟೆಸ್ಟ್ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ. ನಾಳೆ ಬೆಳಗ್ಗೆಯೇ ತೀರ್ಥೋಧ್ಭವ ಆಗುತ್ತಿರುವುದರಿಂದ ಉಸ್ತುವಾರಿ ಸಚಿವ ವಿ. ಸೋಮಣ್ಣ, ವಿರಾಜಪೇಟೆ ಶಾಸಕ ಬೋಪಯ್ಯ ಮತ್ತು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೇರಿದಂತೆ ವಿವಿಧ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಜನರ ಆರೋಗ್ಯದ ದೃಷ್ಟಿಯಿಂದ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ. ಅಲ್ಲದೇ ಕೊಳದಲ್ಲಿ ಪುಣ್ಯ ಸ್ನಾನ ಮಾಡುವುದನ್ನು ನಿಷೇಧಿಸಲಾಗಿದೆ. ಇದು ಜನರ ಆರೋಗ್ಯದ ಹಿತದೃಷ್ಟಿಯಿಂದ ಮಾಡಲಾಗಿದ್ದು, ಜನರು ಎಲ್ಲರು ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದರು.