ಎಫ್ ಡಿಐ ನಿಯಮ ಬದಲಾವಣೆ: ಭಾರತದಲ್ಲಿ ಚೀನಾ ಹೂಡಿಕೆಗೆ ನಿರ್ಬಂಧ

ಹೊಸದಿಲ್ಲಿ: ಜಗತ್ತಿಗೇ ಕೋವಿಡ್‌-19 ಹರಡಿ, ಎಲ್ಲ ದೇಶಗಳನ್ನೂ ಆರ್ಥಿಕ ಹಿಂಜರಿತ ದತ್ತ ದೂಡಿರುವ ಚೀನಾ ಈಗ ಆ ದೇಶಗಳಲ್ಲಿ ನಷ್ಟ ಅನುಭವಿಸುತ್ತಿರುವ ಕಂಪೆನಿಗಳನ್ನು ಆರ್ಥಿಕವಾಗಿ ಸ್ವಾಧೀನಕ್ಕೆ ಒಳಪಡಿಸುವ ಕುತಂತ್ರಕ್ಕೆ ಮುಂದಾಗಿದೆ. ಆದರೆ ವಿದೇಶೀ ನೇರ ಬಂಡವಾಳ ಹೂಡಿಕೆ ನಿಯಮಗಳಲ್ಲಿ ತುರ್ತು ಬದಲಾವಣೆ ತರುವ ಮೂಲಕ ಭಾರತ ಇದಕ್ಕೆ ಪ್ರತಿತಂತ್ರ ಹೂಡಿದೆ.

ಚೀನೀ ದುಸ್ಸಾಹಸದ ವಾಸನೆ ಬಡಿಯುತ್ತಿ ದ್ದಂತೆ ವಿದೇಶೀ ನೇರ ಬಂಡವಾಳ (ಎಫ್ ಡಿಐ)ನಿಯಮಗಳಲ್ಲಿ ತಿದ್ದುಪಡಿ ತಂದಿರುವ ಕೇಂದ್ರ ಸರಕಾರ, ಭಾರತದ ಗಡಿಗೆ ಹೊಂದಿ ಕೊಂಡಿರುವ ಯಾವುದೇ ನೆರೆರಾಷ್ಟ್ರವು ಭಾರತದಲ್ಲಿ ಯಾವುದೇ ರೀತಿಯ ಹೂಡಿಕೆ ಮಾಡಬೇಕಾದರೆ ತನ್ನ ಒಪ್ಪಿಗೆ ಪಡೆಯಬೇಕೆಂಬ ಷರತ್ತು ವಿಧಿಸಿದೆ. ಅಲ್ಲದೆ ಭಾರತೀಯ ಕಂಪೆನಿಗಳ ಮಾಲಕತ್ವ ನೆರೆ ರಾಷ್ಟ್ರಗಳ ಯಾವುದೇ ಕಂಪೆನಿ ಅಥವಾ ವ್ಯಕ್ತಿಯ ಹೆಸರಿಗೆ ವರ್ಗಾವಣೆಯಾಗಬೇಕಾದರೂ ತನ್ನ ಒಪ್ಪಿಗೆ ಕಡ್ಡಾಯ ಎಂಬ ನಿಯಮ ಜಾರಿಗೆ ತಂದಿದೆ.

ಏಕೆ ಬದಲಾವಣೆ?
ಈ ನಿಯಮ ಈಗಾಗಲೇ ಜಾರಿಯಲ್ಲಿತ್ತು. ಈಗ ಅದನ್ನು ಚೀನಾಕ್ಕೆ ಅನ್ವಯಿಸುವಂತೆ ಮಾರ್ಪಡಿಸಲಾಗಿದೆ. ಎಚ್‌ಡಿಎಫ್ಸಿಯ ಅಂದಾಜು 3 ಸಾವಿರ ಕೋಟಿ ಮೌಲ್ಯದ 1.75 ಕೋಟಿ ಷೇರುಗಳನ್ನು ಚೀನಾ ಖರೀದಿಸಿದೆ. ಅದು ಈ ಸನ್ನಿವೇಶದಲ್ಲೂ ಭಾರೀ ಹೂಡಿಕೆ ಮಾಡಿರುವುದನ್ನು ಭಾರತ ಸಹಿತ ಎಲ್ಲ ದೇಶಗಳು ಗಂಭೀರವಾಗಿ ಪರಿಗಣಿಸಿವೆ.

ಈ ಹಿನ್ನೆಲೆಯಲ್ಲಿ ಭಾರತದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಒಕ್ಕೂಟವು ಕೇಂದ್ರ ಸರಕಾರಕ್ಕೆ ಪತ್ರ ಬರೆದು, ನಷ್ಟ ದಲ್ಲಿರುವ ಭಾರತೀಯ ಕಂಪೆನಿಗಳನ್ನು ಚೀನದ ಕಂಪೆನಿಗಳು ಕಬಳಿಸುವ ಸಾಧ್ಯತೆ ದಟ್ಟವಾಗಿದ್ದು, ಅದನ್ನು ತಪ್ಪಿಸಬೇಕೆಂದು ಮನವಿ ಮಾಡಿತ್ತು. ಇದೂ ಕೇಂದ್ರದ ನಿರ್ಧಾರದ ಹಿಂದಿನ ಪ್ರಮುಖ ಕಾರಣ.

ಅನ್ಯ ರಾಷ್ಟ್ರಗಳಲ್ಲೂ ನಿರ್ಬಂಧ
ಚೀನದ ಅವಕಾಶವಾದಿತನದ ಸುಳಿವು ಸಿಗುತ್ತಲೇ ಆಸ್ಟ್ರೇಲಿಯಾ, ಅಮೆರಿಕ, ಜರ್ಮನಿ, ಜಪಾನ್‌ನಂಥ ರಾಷ್ಟ್ರಗಳು ಕೂಡ ತಮ್ಮ ವಿದೇಶೀ ನೇರ ಬಂಡವಾಳ ಹೂಡಿಕೆ ನಿಯಮಗಳಲ್ಲಿ ಬದಲಾವಣೆ ತಂದು, ಚೀನ ತಮ್ಮೊಳಗೆ ಸರಾಗವಾಗಿ ಕಾಲಿಡದಂತೆ ತಡೆ ಹಾಕಿವೆ. ಈಗ ಭಾರತವೂ ಇಂಥದೇ ಕ್ರಮ ಕೈಗೊಂಡಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ