ನಿಖಿಲ್‌ ಕುಮಾರಸ್ವಾಮಿ-ರೇವತಿ ಸರಳ ವಿವಾಹ; ಕುಟುಂಬದ ಕೆಲವೇ ಮಂದಿ ಭಾಗಿ!

ಬೆಂಗಳೂರು: ದೇಶಾದ್ಯಂತ ಜಾರಿಯಲ್ಲಿರುವ ಲಾಕ್‌ಡೌನ್‌ನಿಂದಾಗಿ ನಿಖಿಲ್‌ ಕುಮಾರಸ್ವಾಮಿ ಮತ್ತು ರೇವತಿ ಕಲ್ಯಾಣ ಸರಳವಾಗಿ ನೆರವೇರಿದೆ. ರಾಮನಗರದ ಕೇತುಗಾನಹಳ್ಳಿ ಫಾರ್ಮ್‌ಹೌಸ್‌ನಲ್ಲಿ ಶುಕ್ರವಾರ ವಿವಾಹ ನಡೆದಿದೆ.

ಮನೆಯ ಮುಂಭಾಗ ಮದುವೆಗೆಂದೇ ವಿಶೇಷವಾಗಿ ಮಂಟಪ ನಿರ್ಮಿಸಲಾಗಿತ್ತು. ಕುಟುಂಬದ ಹಿರಿಯರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಚನ್ನಮ್ಮ ದಂಪತಿ ಧಾರೆ‌ ಕಾರ್ಯ ನಡೆಸಿಕೊಟ್ಟರು. ಕುಮಾರಸ್ವಾಮಿ-ಅನಿತಾ, ಅವರ ಬೀಗರಾದ ಮಂಜುನಾಥ ದಂಪತಿ ಹಾಗೂ ಎರಡೂ ಕುಟುಂಬದ ಆಪ್ತರಷ್ಟೇ ಪಾಲ್ಗೊಂಡರು. ಒಟ್ಟು 42 ವಾಹನಗಳ ಓಡಾಟಕ್ಕೆ ಪೊಲೀಸರು ಅನುಮತಿ ನೀಡಿದ್ದರು.

ಶುಕ್ರವಾರ ಬೆಳಿಗ್ಗೆ 9.15ರಿಂದ 9.45ವರೆಗೆ ಶುಭ ಮುಹೂರ್ತದಲ್ಲಿ ವಿವಾಹ ಸಮಾರಂಭ ನಡೆದಿದೆ. ಕೇತುಗಾನಹಳ್ಳಿ ಮಾರ್ಗದ ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲೇ ಬ್ಯಾರಿಕೇಡ್‌ ಅಳವಡಿಸಿರುವ ಪೊಲೀಸರು ಎಲ್ಲ ವಾಹನಗಳನ್ನು ಪರಿಶೀಲಿಸಿ, ಪಾಸ್‌ ಇದ್ದವರಿಗಷ್ಟೇ ಅನುಮತಿ ನೀಡಿದ್ದಾರೆ. ಕುಮಾರಸ್ವಾಮಿ ಆಸೆಯಂತೆ ರಾಮನಗರ ಜಿಲ್ಲೆಯಲ್ಲೇ ಮದುವೆ ನಡೆದಿದೆ.

ಕೊರೋನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ತುಂಬ ಎಚ್ಚರಿಕೆಯಿಂದ ಮದುವೆ ಮಾಡಲಾಗಿದೆ. ಪಾಸು ಇದ್ದವರಿಗೆ ಮಾತ್ರ ಒಳಗಡೆ ಹೋಗಲು ಅವಕಾಶ ನೀಡಲಾಗಿದೆ. ಮದುವೆ ಸಮಾರಂಭಕ್ಕೆ ಮಾಧ್ಯಮಗಳಿಗೂ ಹೆಚ್‌ಡಿಕೆ ಕುಟುಂಬ ನಿರ್ಬಂಧ ಹೇರಿದೆ. ಮುಂಜಾನೆಯಿಂದಲೇ ಕೇತುಗಾನಹಳ್ಳಿ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ