ಬಿಪಿಎಲ್‍ ಕಾರ್ಡಿಗೆ ಅರ್ಜಿ ಹಾಕಿದವ್ರಿಗೂ ನಾಳೆಯಿಂದ ಪಡಿತರ: ಗೋಪಾಲಯ್ಯ

ಬೆಂಗಳೂರು: ನಾಳೆ(ಶನಿವಾರ)ದಿಂದ ಬಿಪಿಎಲ್‍ ರಹಿತರಿಗೂ ಪಡಿತರ ನೀಡಲಾಗುವುದು ಎಂದು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಗೋಪಾಲಯ್ಯ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಪಿಎಲ್‍ಗಾಗಿ ಅರ್ಜಿ ಸಲ್ಲಿಸಿದವರಿಗೆ ಮಾತ್ರ 3 ತಿಂಗಳು ತಲಾ 10 ಕೆಜಿ ಅಕ್ಕಿ ನೀಡಲಾಗುವುದು. ಏಪ್ರಿಲ್, ಮೇ ಹಾಗೂ ಜೂನ್ ಈ ಮೂರು ತಿಂಗಳ ಪಡಿತರ ನಿಡಲಾಗುವುದು. ಹೀಗಾಗಿ ಅರ್ಜಿ ಸಲ್ಲಿಸಿದ ಪ್ರತಿ ತೋರಿಸಿ ಪಡಿತರ ಪಡೆಯಲು ಅವಕಾಶವಿದೆ ಎಂದು ಸಚಿವರು ತಿಳಿಸಿದ್ದಾರೆ.

2 ಲಕ್ಷದ 22 ಸಾವಿರ ಜನ ಬಿಪಿಲ್ ಕಾರ್ಡ್‍ಗೆ ಅರ್ಜಿ ಹಾಕಿದ್ರು. ಈಗ 1 ಲಕ್ಷ 89 ಸಾವಿರ ಅರ್ಜಿಗಳು ವಿಲೇವಾರಿಯಾಗಲು ಬಾಕಿ ಇವೆ. ಹೀಗಾಗಿ ಅರ್ಜಿ ಹಾಕಿರುವ ಫಲಾನುಭವಿಗಳಿಗೆ ಸರ್ಕಾರ ಪ್ರತಿ ತಿಂಗಳು 10 ಕೆ.ಜಿ ಅಕ್ಕಿ ನೀಡುವ ತೀರ್ಮಾನವನ್ನು ಮಾಡಲಾಗಿದ್ದು, ನಾಳೆಯಿಂದ ವಿತರಣೆ ಮಾಡಲಾಗುತ್ತದೆ. ಹೀಗಾಗಿ ಈ ರಾಜ್ಯದಲ್ಲಿ ಬಿಪಿಲ್ ಕಾರ್ಡಿಗೆ ಅರ್ಜಿ ಹಾಕಿದ್ದಾರೆಯೋ ಅವರು ಅರ್ಜಿ ಸಲ್ಲಿಸಿರುವ ನಕಲು ತೆಗೆದುಕೊಂಡು ಹೋಗಿ ತೋರಿಸಿ ಓಟಿಪಿ ಮುಖೇನ ಮೂರು ತಿಂಗಳ ತಲಾ 10 ಕೆ.ಜಿ ಅಕ್ಕಿಯನ್ನು ಕೊಡಲಾಗುತ್ತದೆ ಎಂದು ಹೇಳಿದರು.

ಕೇಂದ್ರದಿಂದ ಪಿಎಂಜಿಕೆವೈ ವತಿಯಿಂದ ಮೂರು ತಿಂಗಳು ಓರ್ವನಿಗೆ 5 ಕೆ.ಜಿ ಅಕ್ಕಿ ಹಾಗೂ ಕುಟುಂಬಕ್ಕೆ 1 ಕೆ.ಜಿ ಬೇಳೆಯನ್ನು ಕೊಡುವ ಘೋಷಣೆ ಮಾಡಲಾಗಿದೆ. ಹೀಗಾಗಿ ಪ್ರಧಾನಿಗೆ ಕೃತಜ್ಞತೆ ಸಲ್ಲಿಸುವುದಾಗಿ ಸಚಿವರು ತಿಳಿಸಿದರು.

ಕೇಂದ್ರ ಸರ್ಕಾರ ಕೊಟ್ಟಿರುವಂತಹ ದಾಸ್ತಾನುಗಳನ್ನು ಈಗಾಗಲೇ ನಮ್ಮ ಮಳಿಗೆಗೆ ಸಾಗಿಸುವ ಕೆಲಸ ಮಾಡಿದ್ದೇವೆ. ಮೇ.1ರಂದು ರಾಜ್ಯದ 19, 800 ಅಂಗಡಿಗಳನ್ನು ಒಟ್ಟಿಗೆ ಪ್ರಾರಂಭ ಮಾಡುವ ಉದ್ದೇಶವಿದೆ. ಈ ಮೂಲಕ ಮೇ 1ರಿಂದ ಓರ್ವ ವ್ಯಕ್ತಿಗೆ 2 ತಿಂಗಳಿಗಾಗುವಷ್ಟು 10 ಕೆ.ಜಿ ಅಕ್ಕಿ ಹಾಗೂ 1 ಕೆ.ಜಿ ಬೇಳೆಯನ್ನು ಕೊಡಲಾಗುತ್ತದೆ. ಮುಂದಿನ ತಿಂಗಳು 5 ಕೆ.ಜಿ ಅಕ್ಕಿ ಹಾಗೂ 2 ಕೆ.ಜಿ ಬೇಳೆಯನ್ನು ಕೊಡುವ ಮೂಲಕ ಸರ್ಕಾರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ ಎಂದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ