ಏನೇ ಬಂದೋಬಸ್ತ್ ಮಾಡಿದ್ರೂ ಮಾನವೀಯತೆಯಿಂದ ಕೆಲಸ ಮಾಡಿ: ಸಿಬ್ಬಂದಿಗೆ ಕಮಿಷನರ್ ಸೂಚನೆ

ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಲಾಕ್‍ಡೌನ್ ಜಾರಿಯಾಗಿದೆ. ಅಂದಿನಿಂದ ಪೊಲೀಸರು ಹಗಲಿರುಳು ಎನ್ನದೇ ಸಾರ್ವಜನಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಪೊಲೀಸ್ ಸಿಬ್ಬಂದಿಗೆ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಕೆಲವೊಂದು ಸೂಚನೆ ನೀಡಿದ್ದಾರೆ.

ಲಾಕ್‍ಡೌನ್‍ನಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು. ಅಲ್ಲದೇ ನಾವು ಏನೇ ಬಂದೋಬಸ್ತ್ ಮಾಡಿದರೂ ಸಹ ಮಾನವೀಯತೆಯಿಂದ ಕೆಲಸ ಮಾಡಬೇಕು ಎಂದು ಪೊಲೀಸ್ ಸಿಬ್ಬಂದಿಗೆ ಭಾಸ್ಕರ್ ರಾವ್ ತಿಳಿಸಿದ್ದಾರೆ.

ಕಮಿಷನರ್ ಸಿಬ್ಬಂದಿಗೆ ನೀಡಿದ ಕೆಲವು ಸೂಚನೆಗಳು:
* ಸಾರ್ವಜನಿಕರಿಗೆ ಯಾವುದೇ ತೊಂದರೆ ಯಾಗಬಾರದು.
* ಮೀಡಿಯಾ, ಹಣ್ಣು, ತರಕಾರಿ, ಮೊಟ್ಟೆ, ಮಾಂಸ, ದಿನಸಿ ತರುವವರಿಗೆ ಯಾವುದೇ ಸಮಸ್ಯೆಯಾಗಬಾರದು.
* ಎಪಿಎಂಸಿಗೆ ಎಲ್ಲಾ ರಾಜ್ಯಗಳಿಂದ ಟ್ರಕ್‍ಗಳು, ಗೂಡ್ಸ್ ವೆಹಿಕಲ್ ಬರುತ್ತೆ, ಅವುಗಳನ್ನ ತಡೆಯಬಾರದು. ಖಾಲಿ ಟ್ರಕ್ ಇದ್ದರೂ ಸಹ ತಡೆಯಬಾರದು..
* ಎಪಿಎಂಸಿಗೆ ಬರುವ ಹಮಾಲಿಗಳು, ಕೂಲಿ ಕಾರ್ಮಿಕರಿಗೆ ತೊಂದರೆ ಆಗಬಾರದು.
* ಡಯಾಲಿಸಿಸ್, ಕಿಮೊತೆರಪಿ, ಹೆರಿಗೆ ಆಸ್ಪತ್ರೆಗೆ ಅಥವಾ ಇನ್ಯಾವುದೇ ಇರಲಿ, ಪಾಸ್ ಇರಲಿ, ಇಲ್ಲದೇ ಇರಲಿ ಸ್ಥಳದಲ್ಲಿ ಇರುವ ಅಧಿಕಾರಿ ಅವರಿಗೆ ಅಗೌರವ ತರದಂತೆ ಗೌರವಯುತವಾಗಿ ಅವಾಚ್ಯ ಶಬ್ದ ಬಳಸದಂತೆ ಕಳಿಸಿಕೊಡಬೇಕು.
* ಎಟಿಎಂ ಕೆಲಸಕ್ಕೆ ಹೋಗುವವರು, ಸರ್ಕಾರಿ ಅಧಿಕಾರಿಗಳು, ಎಲೆಕ್ಟ್ರಿಸಿಟಿ, ವಾಟರ್, ಸ್ಯಾನಿ​ಟೈ​ಸರ್, ಟ್ಯಾಂಕರ್ ನೀರು ಪೂರೈಸುವವರು, ಖಾಸಗಿ ಸೆಕ್ಯುರಿಟಿ ಸಿಬ್ಬಂದಿಗೆ ತೊಂದರೆಯಾಗಬಾರದು.

* ಕೊಟ್ಟಿರುವ ಪಾಸ್‍ಗಳನ್ನ ಮಾನವೀಯ ದೃಷ್ಟಿಯಿಂದ ಚೆಕ್ ಮಾಡಬೇಕು. ನಕಲಿ ಪಾಸ್‍ಗಳನ್ನ ಪತ್ತೆ ಮಾಡಬೇಕು. ಗಾಡಿ ಸೀಜ್ ಮಾಡುವುದರಿಂದ ಗಾಡಿ ವಾಪಸ್ ಕೊಡುವ ಪೇಪರ್ ಕೆಲಸ ಆಗಬೇಕು.
* ಜನರಿಂದ, ಮಾಧ್ಯಮಗಳಿಂದ ಪ್ರಶಂಸೆ ಬಂದಿರೋದು ತಲೆಗೆ ಹತ್ತಬಾರದು. ಇನ್ನೂ ಕೆಲಸ ಮಾಡೋದು ಬಾಕಿ ಇದೆ. ಜನರಿಗೆ ಅವಾಚ್ಯವಾಗಿ ನಿಂದಿಸೋದು, ಅವಮಾನ ಮಾಡೋದು ಮಾಡಬಾರದು.
* ಏನೇ ಬಂದೋಬಸ್ತ್ ಮಾಡಿದರೂ ಸಹ ಮಾನವೀಯತೆಯಿಂದ ಕೆಲಸ ಮಾಡಬೇಕು. ಹೀಗೆ ಅನೇಕ ರೀತಿಯ ಸೂಚನೆಗಳನ್ನು ಪೊಲೀಸ್ ಸಿಬ್ಬಂದಿಗೆ ತಿಳಿಸಿದ್ದಾರೆ.

ಅಲ್ಲದೇ ಪೊಲೀಸ್ ಸಿಬ್ಬಂದಿಯೂ ಆರೋಗ್ಯದ ಕಡೆ ಗಮನ ಕೊಡಬೇಕು ಎಂದು ಸೂಚಿಸಿದ್ದಾರೆ. ಪ್ರತಿದಿನ ಮೂರು ಲೀಟರ್ ನೀರು ಕುಡಿಯಬೇಕು, ಸಿಬ್ಬಂದಿಗೆ ನಾಲ್ಕು ಆರೆಂಜ್ ಜ್ಯೂಸ್ ಕೊಡಬೇಕು. ಒಟ್ಟಿನಲ್ಲಿ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಭಾಸ್ಕರ್ ರಾವ್ ತಿಳಿಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ