ದೇಶಾದ್ಯಂತ ಮೇ 3ರವರೆಗೆ ಲಾಕ್‍ಡೌನ್ ವಿಸ್ತರಣೆ

ನವದೆಹಲಿ: ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಮೂರು ವಾರಗಳ ಲಾಕ್‍ಡೌನ್ ಘೋಷಿಸಿದ್ದಾರೆ. ಈ ಮೂಲಕ ಮೇ 3ರವರೆಗೆ ಲಾಕ್‍ಡೌನ್ ವಿಸ್ತರಣೆಯಾಗಿದೆ.

ಬೆಳಗ್ಗೆ 10 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕೊರೊನಾ ನಿಯಂತ್ರಿಸಲು ಲಾಕ್‍ಡೌನ್ ಅನಿವಾರ್ಯವಾಗಿದೆ. ಲಾಕ್‍ಡೌನ್ ಪಾಲನೆಯಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಮತ್ತಷ್ಟು ನಿಯಂತ್ರಿಸಲು ಮೇ 3ರವರೆಗೆ ಲಾಕ್‍ಡೌನ್ ವಿಸ್ತರಿಸುತ್ತಿದ್ದೇನೆ ಎಂದು ಪ್ರಕಟಿಸಿದರು.

ನಾವು ಕೊರೊನಾ ವಿರುದ್ಧ ಹೇಗೆ ಹೋರಾಟ ನಡೆಸಬೇಕು. ಜನರ ಕಷ್ಟಗಳನ್ನು ಹೇಗೆ ಕಡಿಮೆ ಮಾಡಬಹುದು ಎಂಬುದರ ಬಗ್ಗೆ ಬಗ್ಗೆ ರಾಜ್ಯಗಳ ಜೊತೆ  ಚರ್ಚೆ ಮಾಡಿದ್ದೇವೆ. ಎಲ್ಲ ರಾಜ್ಯಗಳು ಲಾಕ್ ಡೌನ್ ವಿಸ್ತರಿಸಲು ಸಲಹೆ ನೀಡಿವೆ. ಕೆಲ ರಾಜ್ಯಗಳು ಈಗಾಗಲೇ ವಿಸ್ತರಣೆ ಮಾಡಿವೆ ಎಂದು ತಿಳಿಸಿದರು.

ಹಿಂದೆ ಪಾಲಿಸಿದಂತೆ ಮುಂದೆಯೂ ನಿಯಮ ಪಾಲಿಸಬೇಕು. ಹೊಸ ಪ್ರದೇಶದಲ್ಲಿ ಸೋಂಕು ಹರಡದಂತೆ ನೋಡಿಕೊಳ್ಳಬೇಕಿದೆ. ಒಂದು ಸಾವು ನಮ್ಮ ಚಿಂತೆಯನ್ನ ಹೆಚ್ಚಿಸುತ್ತದೆ. ಮೊದಲಿಗಿಂತ ಹೆಚ್ಚು ನಿಯಮಗಳು ಹಾಟ್ ಸ್ಪಾಟ್ ಗಳಲ್ಲಿ ಹೆಚ್ಚಲಿದೆ. ಹೊಸ ಹಾಟ್ ಸ್ಪಾಟ್ ಗಳನ್ನು ಗುರುತಿಸಲಾಗುತ್ತದೆ. ದೇಶಾದ್ಯಂತ ಒಂದು ವಾರ ಡಬ್ಬಲ್ ಲಾಕ್‍ಡೌನ್ ಇರಲಿದೆ ಎಂದರು.

ಏ.20ರವರೆಗೆ ಎಲ್ಲಾ ಜಿಲ್ಲೆ ಹಾಗೂ ರಾಜ್ಯಗಳಲ್ಲಿ ಕಠಿಣ ನಿಯಮಗಳು ಜಾರಿಯಾಗಲಿದೆ. ಕೊರೊನಾ ಸಂಖ್ಯೆ ಕಡಿಮೆಯಾದರೆ ಏ.20ರ ಬಳಿಕ ಷರತ್ತುಗಳನ್ನು ಒಳಗೊಂಡು ಕೆಲವು ವಿನಾಯಿತಿ ಸಿಗಲಿದೆ ಎಂದು ಹೇಳಿದರು.

ಈ ವಿಚಾರದಲ್ಲಿ ಹೋಲಿಕೆ ಸರಿಯಲ್ಲ. ಆದರೂ ಮಾಡಬೇಕಾಗುತ್ತದೆ. ಇತರೆ ದೇಶಗಳನ್ನು ಹೋಲಿಸಿ ಕೊಂಡರೆ ಭಾರತ ಉತ್ತಮ ಸ್ಥಿತಿಯಲ್ಲಿದೆ. ನಾವು ಏನು ಮಾಡಿದ್ದೇವೆ ಅದು ಸರಿಯಾಗಿದೆ. ಭಾರತದೊಂದಿಗೆ ಸೋಂಕು ಕಾಣಿಸಿಕೊಂಡ ದೇಶಗಳಲ್ಲಿ ಶೇ.25-30 ಸೋಂಕು ಹೆಚ್ಚಾಗಿದೆ. ತುರ್ತು ನಿರ್ಧಾರ ತೆಗೆದುಕೊಳ್ಳದಿದ್ದರೆ ಪರಿಸ್ಥಿತಿ ಏನಾಗುತಿತ್ತು ಎಂದು ಉಹಿಸಿದ್ರೆ ಭಯವಾಗುತ್ತದೆ ಎಂದು ಹೇಳಿದರು.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ