ಬೆಂಗಳೂರಲ್ಲಿ 120 ವರ್ಷದ ಹಿಂದಯೇ 3 ಸಾವಿರ ಜನರ ಬಲಿ ಪಡೆದಿತ್ತು ಪ್ಲೇಗ್

ಬೆಂಗಳೂರು: ಕೊರೋನಾ ವೈರಸ್ ಸೋಂಕು ಇದೀಗ ವಿಶ್ವವನ್ನೇ ಕಾಡುತ್ತಿರುವ ಸಾಂಕ್ರಾಮಿಕ ರೋಗವಾಗಿದ್ದು, ಸ್ವಲ್ಪ ವಿಳಂಬವಾಗಿ ಬೆಂಗಳೂರಿಗೆ ಕಾಲಿರಿಸಿದರೂ ಇಡೀ ನಗರವನ್ನು ಭಯ ಭೀತಿಗೊಳಿಸಿದೆ. ಆದರೆ, ಕಳೆದ ಎರಡು ದಶಕದಲ್ಲಿ ಹಲವು ರೋಗಗಳು ಬೆಂಗಳೂರು ನಗರದಲ್ಲಿ ಆತಂಕ ಮೂಡಿಸಿದಲ್ಲದೆ, ಸಾವು-ನೋವು ಉಂಟು ಮಾಡಿತು.

ಬೆಂಗಳೂರು ನಗರವನ್ನು ನಡುಗಿಸಿದ ರೋಗದ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿ ಇರುವುದು ಹಂದಿ ಜ್ವರ (ಎಚ್‌1ಎನ್‌1). ನಂತರ ಡೆಂಘಿ ಜ್ವರವಾಗಿದೆ. ಉಳಿದಂತೆ ಹಕ್ಕಿಜ್ವರ, ಎಬೋಲಾ, ಚಿಕೂನ್‌ ಗುನ್ಯೂ ಮತ್ತು ಸಾರ್ಸ್‌ ರೋಗಗಳು ರಾಜಧಾನಿಯನ್ನು ಬೆಚ್ಚಿ ಬೀಳಿಸಿದವು.

ಇದಕ್ಕೂ ಮುನ್ನ 121 ವರ್ಷದ ಹಿಂದೆ ಬೆಂಗಳೂರನ್ನು ಸಿಕ್ಕಾಪಟ್ಟೆ ಕಾಡಿದ ಸಾಂಕ್ರಾಮಿಕ ರೋಗವೆಂದರೆ ಪ್ಲೇಗ್‌ 1899ರಲ್ಲಿ ಪ್ಲೇಗ್‌ ಬೆಂಗಳೂರಿನಲ್ಲಿ ಕಾಣಿಸಿಕೊಂಡಿತ್ತು. 1899ರ ಜೂನ್‌ಲ್ಲಿ ಸಿದ್ಧವಾಗಿದ್ದ ಪ್ಲೇಗ್‌ ಕಮಿಷನ್‌ ರಿಪೋರ್ಟ್‌ ಪ್ರಕಾರ ಬೆಂಗಳೂರು ನಗರದಲ್ಲಿ 3393 ಜನರು ಪ್ಲೇಗ್‌ನಿಂದ ಸಾವನ್ನಪ್ಪಿದ್ದರು.

ಇದಾದ ನೂರು ವರ್ಷಗಳ ನಂತರ ಕಾಣಿಸಿಕೊಂಡಿದ್ದು ಕಾಲರಾ ರೋಗ. ಕಾಲರಾ 1992ರಲ್ಲಿ ಬೆಂಗಳೂರಿಗೆ ವ್ಯಾಪಿಸಿತ್ತು. ಕಾಲರಾ ತೀವ್ರವಾದ ಭೇದಿಯಿಂದ ಕೂಡಿದ ಖಾಯಿಲೆ. ಕರುಳಿನ ಬ್ಯಾಕ್ಟೀರಿಯಾ ಸೋಂಕಿನಿಂದ ಬರುವ ಈ ರೋಗ ನಗರದಲ್ಲಿ ದೊಡ್ಡ ಮಟ್ಟದಲ್ಲಿ ಜನರನ್ನು ಕಾಡಿತ್ತು.

ತಲ್ಲಣ ಮೂಡಿದ್ದ ಎಚ್‌1ಎನ್‌1:

ಕೊರೋನಾ ಮೂಡಿಸಿದಷ್ಟೇ ಆತಂಕವನ್ನು ಈ ಹಿಂದೆ ಎಚ್‌1ಎನ್‌1 ನಗರದಲ್ಲಿ ಮೂಡಿಸಿತ್ತು. ಅದು ಮೊದಲ ಬಾರಿಗೆ ಕಾಣಿಸಿಕೊಂಡಿದ್ದು 2009ರಲ್ಲಿ. ಕ್ಷಿಪ್ರಗತಿಯಲ್ಲಿ ನಗರದೆಲ್ಲೆಡೆ ವಿಸ್ತರಿಸಿದ ಎಚ್‌1ಎನ್‌1 ಸಾರ್ವಜನಿಕರನ್ನು ನಡುಗಿಸಿತ್ತು. ಗಾಳಿಯ ಮೂಲಕ ಹರಡುವ ಈ ರೋಗವು, ಬಹು ಬೇಗನೇ ಪೀಡಿತರಿಂದ ಮತ್ತೊಬ್ಬರಿಗೆ ಹಬ್ಬತ್ತದೆ.

ಸರ್ಕಾರವೇ ಒದಗಿಸಿದ ಮಾಹಿತಿ ಪ್ರಕಾರ 2009ರಿಂದ 2020ರ ಫೆಬ್ರವರಿ ಅಂತ್ಯದವರೆಗೆ ರಾಜ್ಯದಲ್ಲಿ 16,403 ಮಂದಿಗೆ ಎಚ್‌1ಎನ್‌1 ಜ್ವರ ಕಾಣಿಸಿಕೊಂಡು, ಒಟ್ಟು 664 ಜನರನ್ನು ಬಲಿ ತೆಗೆದುಕೊಂಡಿತ್ತು. ಇದರಲ್ಲಿ ಶೇ.40ರಷ್ಟು ಮಂದಿ ಬೆಂಗಳೂರಿಗರು.

ಇನ್ನು ಎಚ್‌1ಎನ್‌1 ನಂತರ ಬೆಂಗಳೂರಿಗರನ್ನು ದೊಡ್ಡದಾಗಿ ಕಾಡಿದ್ದು ಡೆಂಘೀ ಜ್ವರ. ಸೊಳ್ಳೆಯಿಂದ ಹರಡಿಸಿದ ಈ ಜ್ವರ ಮೊದಲ ಬಾರಿಗೆ 2009ರಲ್ಲಿ ಕಾಣಿಸಿಕೊಂಡಿತು. ತದನಂತರ ಪ್ರತಿ ವರ್ಷವೂ ಈ ಜ್ವರವು ಕಾಣಿಸಿಕೊಂಡು ಸಾಕಷ್ಟುಜನರ ಸಾವಿಗೆ ಕಾರಣಯಾಯಿತು. 2019ರಲ್ಲಿ ಸುಮಾರು 5 ಸಾವಿರವರೆಗೂ ಡೆಂಘೀ ಪ್ರಕರಣಗಳು ನಗರದಲ್ಲಿ ಕಾಣಿಸಿಕೊಂಡಿದ್ದವು. ಕೇವಲ ಮೂವರು ಸಾನ್ನಪ್ಪಿದರು. 2020ರಿಂದ ಈವರೆಗೆ ಇಬ್ಬರು ಸಾವನ್ನಪ್ಪಿದ್ದಾರೆ. ತದ ನಂತರ ಚಿಕೂನ್‌ ಗೂನ್ಯಾ ಸಹ ಬೆಂಗಳೂರಿಗರನ್ನು ಕಾಡಿತು. ನೂರಾರು ಸಂಖ್ಯೆಯಲ್ಲಿ ಜನರನ್ನು ಬಲಿ ತೆಗೆದುಕೊಂಡಿತು. 2019ರಲ್ಲಿ 303 ಜನರಿಗೆ ಚಿಕೂನ್‌ ಗುನ್ಯಾ ಕಾಣಿಸಿಕೊಂಡಿತ್ತು.

 

 

 

 

 

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ